ಮಾನಸಿಕ ಆರೋಗ್ಯವು ಒಟ್ಟಾರೆ ಯೋಗಕ್ಷೇಮದ ನಿರ್ಣಾಯಕ ಭಾಗವಾಗಿದ್ದು ನಮ್ಮ ದೈನಂದಿನ ಜೀವನದಲ್ಲಿ ನಾವು ಹೇಗೆ ಯೋಚಿಸುತ್ತೇವೆ, ಅನುಭವಿಸುತ್ತೇವೆ ಮತ್ತು ವರ್ತಿಸುತ್ತೇವೆ ಎಂಬುದರ ಮೇಲೆ ಪರಿಣಾಮ ಬೀರುತ್ತದೆ. ಉತ್ತಮ ಮಾನಸಿಕ ಆರೋಗ್ಯವು ವ್ಯಕ್ತಿಗಳು ಒತ್ತಡವನ್ನು ನಿಭಾಯಿಸಲು, ಸಕಾರಾತ್ಮಕ ಆಯ್ಕೆಗಳನ್ನು ಮಾಡಲು ಮತ್ತು ಆರೋಗ್ಯಕರ ಸಂಬಂದಗಳನ್ನು ಕಟ್ಟಿಕೊಳ್ಳಲು ಸಹಾಯ ಮಾಡುತ್ತದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಹಾಗೂ ತುಮಕೂರು ಮನೋವಿಜ್ಞಾನ ಸಂಘದ ಸಂಸ್ಥಾಪಕ ಡಾ. ತಿಪ್ಪೇಸ್ವಾಮಿ ಕೆ.ಟಿ. ಹೇಳಿದರು.
ತುಮಕೂರು ಮನೋವಿಜ್ಞಾನ ಸಂಘ ಹಾಗೂ ತುಮಕೂರು ನಗರದ ವಿದ್ಯಾ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತಾಶ್ರದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚೆಗೆ ಹದಿಹರೆಯದವರಲ್ಲಿ ಮಾನಸಿಕ ಒತ್ತಡ, ಖಿನ್ನತೆ, ಆತ್ಮಹತ್ಯಾ ಪ್ರವೃತ್ತಿ ಹೆಚ್ಚುತ್ತಿದ್ದು ಆತಂಕಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಭಾವನಾತ್ಮಕ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಇಂತಹ ಭಾವನಾತ್ಮಕ ಯೋಗಕ್ಷೇಮವನ್ನು ಉತ್ತೇಜಿಸಲು ಶಾಲೆಗಳು, ಕುಟುಂಬಗಳು ಮತ್ತು ಸಮುದಾಯಗಳು ಒಟ್ಟಾಗಿ ಕೆಲಸ ಮಾಡಬೇಕು. ಅದರಲ್ಲೂ ವಿದ್ಯಾರ್ಥಿ ಸಮುದಾಯಕ್ಕೆ ಜೀವನ ಕೌಶಲ್ಯಗಳ ತರಬೇತಿ ನೀಡುವುದು ಮಾನಸಿಕ ಆರೋಗ್ಯದ ದೃಷ್ಟಿಯಿಂದ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಸ್ನೇಹ ಮನೋವಿಕಾಸ ಕೇಂದ್ರದ ಮನೋವೈಧ್ಯ ಡಾ.ಲೋಕೇಶ್ ಬಾಬು ಮಾತನಾಡಿ, ಅತಿಯಾದ ಒತ್ತಡ, ಒಂಟಿತನ ಮತ್ತು ಬಗೆಹರಿಯದ ಭಾವನೆಗಳಂತಹ ಅಂಶಗಳು ಆತಂಕ ಮತ್ತು ಖಿನ್ನತೆಯಂತಹ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಮಾನಸಿಕ ಅಸ್ವಸ್ಥತೆ ಕಂಡುಬಂದಾಗ ಜನರು ಭಯ ಅಥವಾ ನಾಚಿಕೆಪಡದೆ ವೃತ್ತಿಪರರಿಂದ ಸಹಾಯ ಪಡೆಯಬೇಕು. ಸ್ನೇಹಿತರೊಂದಿಗೆ ಮಾತನಾಡುವುದು, ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದು, ವ್ಯಾಯಾಮ ಮಾಡುವುದು ಮತ್ತು ಸಮತೋಲಿತ ಜೀವನಶೈಲಿಯನ್ನು ಕಾಪಾಡಿಕೊಳ್ಳುವಂತಹ ಸರಳ ಅಭ್ಯಾಸಗಳಿಂದ ಮಾನಸಿಕ ಆರೋಗ್ಯವನ್ನು ಸುಧಾರಿಸಬಹುದು ಎಂದು ಸಲಹೆ ನೀಡಿದರು.
ತುಮಕೂರು ಮನೋವಿಜ್ಞಾನ ಸಂಘದ ಕಾರ್ಯದರ್ಶಿ ಡಾ. ಟವಿಕುಮಾರ್, ಅಧ್ಯಕ್ಷ ಗಂಗಾದರ್, ವಿದ್ಯಾ ಪ್ರಥಮ ದರ್ಜೆ ಕಾಲೇಜಿನ ವ್ಯಸ್ಥಾಪಕ ನಿರ್ಧೇಶಕ ಅರ್ಜುನ್, ಪ್ರಾಂಶುಪಾಲೆ ಶಿಲ್ಪ, ನಿರ್ಧೇಶಕ ರಾಜೇಶ್ ಹಾಜರಿದ್ದರು.


