ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ. ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ ಎಂಬ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ
ತಾಯಿಯೊಬ್ಬರು ತನ್ನ ಮಗನಿಗೆ ಮದುವೆಯಾಗಲು ಹೆಣ್ಣು ಕೊಡಿಸಿಕೊಡಿ ಎಂದು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಬಡವನಹಳ್ಳಿ ಪೋಲೀಸರ ಬಳಿ ಮನವಿ ಮಾಡಿಕೊಂಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಧುಗಿರಿ ತಾಲೂಕಿನ ಬಡವನಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಸಾರ್ವಜನಿಕ ಸಮಸ್ಯೆ ಆಲಿಸಲು ಮನೆ ಮನೆಗೆ ಪೊಲೀಸ್ ಎಂಬ ಎಂಬ ಕಾರ್ಯಕ್ರಮದಡಿ ದೊಡ್ಡೇರಿ ಗ್ರಾಮಕ್ಕೆ ಭೇಟಿ ನೀಡಿದಾಗ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಈ ಸನ್ನಿವೇಶವನ್ನು ವಿಡಿಯೋ ಮಾಡಿದ್ದು ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದು ಕಂಡು ಬಂದಿದೆ.
ಪೇದೆಗಳಾದ ರಂಗನಾಥ್ ಮತ್ತು ದಯಾನಂದ್ ಹೊಸದಾಗಿ ಜಾರಿಗೆ ಬಂದಿರುವ ಮನೆ ಮನೆಗೆ ಪೊಲೀಸ್ ಭೇಟಿ ಹಿನ್ನೆಲೆಯಲ್ಲಿ ಗ್ರಾಮಸ್ಥರ ಸಮಸ್ಯೆ ಆಲಿಸುವ ಸಲುವಾಗಿ ಮಧುಗಿರಿ ತಾಲೂಕು ದೊಡ್ಡೇರಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ದೊಡ್ಡೇರಿ ಗ್ರಾಮದ ಮುದ್ದಮ್ಮ ಎಂಬ ಮಹಿಳೆ ಮನೆಗೆ ಭೇಟಿ ನೀಡಿದಾಗ ಸಮಸ್ಯೆ ಹೇಳಿಕೊಳ್ಳದೆ ಮಗನಿಗೆ ಹೆಣ್ಣು ಕೊಡಿಸುವಂತೆ ಮುದ್ದಮ್ಮ ಪೊಲೀಸರಿಗೆ ಮನವಿ ಮಾಡಿದ್ದಾರೆ.
ನನಗೆ ಸಮಸ್ಯೆಗಳಿಲ್ಲ, ಆದರೆ ನನ್ನ ಮಗನಿಗೆ ಮದುವೆ ಮಾಡಲು ಹೆಣ್ಣು ಹುಡುಕುತ್ತಿದ್ದೇನೆ. ಸಿಕ್ಕಿಲ್ಲ. ನೀವು ನಮ್ಮ ಮಗನಿಗೆ ಒಂದು ಹೆಣ್ಣು ಹುಡುಕಿಕೊಡಿ ಎಂದು ಮನವಿ ಮಾಡಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಆ ಮಹಿಳೆಯ ಮನವಿಗೆ ಸಮಚಿತ್ತದಿಂದ ಉತ್ತರಿಸಿರುವ ಪೇದೆಗಳು ನಿಮ್ಮ ಮಗನಿಗೆ ಹೆಣ್ಣು ಹುಡುಕುವ ಬಗ್ಗೆ ನಮ್ಮ ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇವೆ. ಅವರು ಏನು ಮಾಡುತ್ತಾರೋ ನೋಡೋಣ ಎಂದು ಉತ್ತರಿಸಿದ್ದಾರೆ. ನಂತರ ಮನೆಯ ಬಳಿ ವಿದ್ಯುತ್, ಕುಡಿಯುವ ನೀರಿನ ಸಮಸ್ಯೆ ಏನಾದರೂ ಇದೆಯಾ ಎಂದು ಕೇಳಿದಾಗ, ಇಲ್ಲ ಯಾವುದೇ ಸಮಸ್ಯೆ ಇಲ್ಲ ಎಂದು ಮಹಿಳೆ ಉತ್ತರಿಸಿದ್ದಾರೆ.
ಗ್ರಾಮೀಣ ಭಾಗದ ಈ ಮಹಿಳೆಯು ಮುಗ್ದತೆಯಿಂದ ಮಗನಿಗೆ ಮದುವೆಯಾಗಲು ಒಂದು ಹೆಣ್ಣು ನೋಡಿ ಎಂದು ಪೊಲೀಸರಿಗೇ ವಿಶೇಷ ಮನವಿ ಇಟ್ಟಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


