Thursday, January 29, 2026
Google search engine
Homeಮುಖಪುಟಅತಿಯಾದ ಮೊಬೈಲ್ ಬಳಕೆ ಬೇಡ - ಮನೋವೈದ್ಯ ಡಾ.ಲೋಕೇಶ್ ಬಾಬು

ಅತಿಯಾದ ಮೊಬೈಲ್ ಬಳಕೆ ಬೇಡ – ಮನೋವೈದ್ಯ ಡಾ.ಲೋಕೇಶ್ ಬಾಬು

ಮೊಬೈಲ್‌ನ ಅತಿಯಾದ ಬಳಕೆ ಅನಾಹುತ ಹಾಗೂ ಅಪರಾಧ ಚಟುವಟಿಕೆಗಳಿಗೆ ಬಳಕೆಯಾಗುತ್ತಿದ್ದು, ಈ ಬಗ್ಗೆ ವಿದ್ಯಾರ್ಥಿ ಸಮೂಹ ಎಚ್ಚರದಿಂದ ಇರುವಂತೆ ಮನೋವೈದ್ಯ ಡಾ.ಲೋಕೇಶಬಾಬು ತಿಳಿಸಿದರು.

ವರದಕ್ಷಿಣೆ ವಿರೋಧಿ ವೇದಿಕೆ, ಸಾಂತ್ವನ ಕೇಂದ್ರ, ವಿಶ್ವವಿದ್ಯಾಲಯ ಕಲಾ ಕಾಲೇಜು, ತುಮಕೂರು ವಿ.ವಿ. ಮಹಿಳಾ ವಿದ್ಯಾರ್ಥಿ ನಿಲಯ ಸಹಯೋಗದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ತುಮಕೂರು ವಿ.ವಿ.ಕಲಾ ಕಾಲೇಜು ಮಹಿಳಾ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಿದ್ದ ಮಾನಸಿಕ ಅರಿವು ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೊಬೈಲ್ ಬಳಕೆ ಒಳ್ಳೆಯದಕ್ಕಿಂತ ಕೆಟ್ಟದ್ದಕ್ಕೆ ಹೆಚ್ಚು ಬಳಕೆಯಾಗುತ್ತಿದೆ. ಬಹುತೇಕ ಮಂದಿ ಅಪರಾಧ ಚಟುವಟಿಕೆಗಳಲ್ಲಿ ಸಿಲುಕುತ್ತಿರುವುದು ಮೊಬೈಲ್ ಬಳಕೆಯಿಂದ ಎಂಬುದನ್ನು ನಾವು ಗಮನಿಸಬೇಕು. ಪ್ರಸ್ತುತ ಸನ್ನಿವೇಶದಲ್ಲಿ ಯಾರು ಮೊಬೈಲ್ ಹೆಚ್ಚು ಬಳಸದೆ ಇರುವರೋ ಅವರು ಮಾತ್ರ ನೆಮ್ಮದಿಯಾಗಿ ಇದ್ದಾರೆ ಎಂದು ಹೇಳಬಹುದು ಎಂದು ವ್ಯಾಖ್ಯಾನಿಸಿದರು.

ಹಣ ಮಾಡುವ ಬಹಳ ಬುದ್ಧಿವಂತರು ವಿಶೇಷ ತಜ್ಞರನ್ನು ಹಿಡಿದು ಮೊಬೈಲ್ ರಚನೆ ಮಾಡಿದ್ದಾರೆ. ಉಪಯೋಗ ಇರಲಿ ಬಿಡಲಿ ಎಲ್ಲರೂ ಮೊಬೈಲ್ ಬಳಕೆ ಮಾಡುತ್ತಾ ಮನುಷ್ಯರನ್ನು ಎಷ್ಟು ಬೇಕೋ ಅಷ್ಟು ದಡ್ಡರನ್ನಾಗಿಸುತ್ತಿದ್ದಾರೆ. ಬೇಕು, ಬೇಡವಾದ ಎಲ್ಲದನ್ನೂ ನೋಡುತ್ತಾ ಮೊಬೈಲ್ ಅಡಿಕ್ಷನ್ ರೋಗಿಗಳಾಗುತ್ತಿದ್ದಾರೆ. ಇದನ್ನೇ ನಾವು ಮಾನಸಿಕ ಅನಾರೋಗ್ಯ ಎನ್ನುತ್ತೇವೆ. ಮೊಬೈಲ್ ಅಡಿಕ್ಷನ್‌ಗೆ ಒಳಗಾಗುವವರಿಗೆ ಮೊಬೈಲ್ ಕಿತ್ತುಕೊಂಡರೆ ಅವರ ಜೀವನವೇ ಹೋದಂತಾಗುತ್ತದೆ. ಅಷ್ಟರ ಮಟ್ಟಿಗೆ ಮೊಬೈಲ್ ಅಡಿಕ್ಷನ್‌ಗೆ ಒಳಗಾಗಬೇಡಿ. ಇದರಿಂದ ಭವಿಷ್ಯಕ್ಕೂ ತೊಂದರೆ, ಜ್ಞಾಪಕ ಶಕ್ತಿಗೂ ತೊಂದರೆಯಾಗುತ್ತದೆ ಎಂಬ ಎಚ್ಚರಿಕೆ ಇರಲಿ ಎಂದರು.

ವಿದ್ಯಾರ್ಥಿ ಜೀವನದಲ್ಲಿ ಓರ್ವ ಯುವಕ ಹಾಗೂ ಯುವತಿ ಹಾಳಾಗಲು ಪ್ರೀತಿ, ಮೊಬೈಲ್ ಮತ್ತು ಪಾರ್ಟಿ ಈ ಮೂರು ಇದ್ದರೆ ಸಾಕು. ತನಗೆ ತಾನೇ ತಮ್ಮ ಭವಿಷ್ಯವನ್ನು ಅತಂತ್ರ ಸ್ಥಿತಿಗೆ ದೂಡಿಕೊಳ್ಳುತ್ತಾರೆ. ಪ್ರೀತಿ-ಪ್ರೇಮ ಇತಿಮಿತಿಯಲ್ಲಿರಬೇಕು. ಹಾಗೆಯೇ ಪಾರ್ಟಿಗಳಿಗೆ ಹೋಗುವಾಗ, ಪಾರ್ಟಿ ಮಾಡುವಾಗ ಎಚ್ಚರಿಕೆ ಇರಬೇಕು. ಅಲ್ಲಿ ಬಲವಂತದ ಚಟುವಟಿಕೆಗಳಿಗೆ, ದುರಭ್ಯಾಸಗಳಿಗೆ ಒಳಗಾದರೆ ನಮ್ಮ ಭವಿಷ್ಯವೇ ನಾಶವಾಗುತ್ತದೆ ಎಂಬ ಎಚ್ಚರಿಕೆ ಇರಬೇಕು ಎಂದು ಹೇಳಿದರು.

ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷೆ ಎಂ.ಸಿ. ಲಲಿತ, ದೈಹಿಕ ಆರೋಗ್ಯ ಹೇಗೆ ಮುಖ್ಯವೋ, ಮಾನಸಿಕ ಆರೋಗ್ಯವೂ ಅಷ್ಟೇ ಪ್ರಮುಖ. ದುರಂತವೆಂದರೆ ಹೆಚ್ಚು ತಿಳಿದವರು, ಓದಿದವರು, ನಾಗರಿಕರೆ ಹೆಚ್ಚು ಮಾನಸಿಕ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಮೌಢ್ಯತೆಗೆ ಆಸ್ಪದ ನೀಡುತ್ತಿದ್ದಾರೆ. ಮನುಷ್ಯ ಓದಿದಂತೆಲ್ಲಾ ಪ್ರಜ್ಞಾವಂತನಾಗಬೇಕೇ ಹೊರತು ಯಾರೋ ಹೇಳಿದ್ದನ್ನು ಕೇಳುವ ಮೂಢನಾಗಬಾರದು ಎಂದರು.

ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ ಮಾತನಾಡಿ, 2025ರ ಜುಲೈ ತಿಂಗಳಿನಲ್ಲಿ ಸುಪ್ರೀಂಕೋರ್ಟ್ ಮಹತ್ತರವಾದ 15 ಮಾರ್ಗಸೂಚಿಗಳನ್ನು ನೀಡಿದೆ. ಶಾಲಾ ಕಾಲೇಜುಗಳಲ್ಲಿ, ವಿದ್ಯಾರ್ಥಿಗಳು ಕಲಿಯುವ ಸಂಸ್ಥೆಗಳಲ್ಲಿ ಆತ್ಮಹತ್ಯೆ ತಡೆಗಟ್ಟುವ ಮಾರ್ಗೋಪಾಯಗಳ ಬಗ್ಗೆ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಈ ಮಾರ್ಗದರ್ಶಿ ಸೂಚಿಗಳಲ್ಲಿ ಹೇಳಿದೆ. ಶಾಲಾ ಕಾಲೇಜುಗಳು ಇದನ್ನು ಪಾಲಿಸಬೇಕು. ಆದರೆ ಬಹುತೇಕ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಯ ಬಗ್ಗೆ ಗಮನ ಹರಿಸುತ್ತಿಲ್ಲ. ಕೇವಲ ಅಂಕಗಳಿಗೆ ಮಾತ್ರ ಆದ್ಯತೆ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಕಳೆದ 30 ವರ್ಷಗಳಿಂದ ವರದಕ್ಷಿಣೆ ವಿರೋಧಿ ವೇದಿಕೆ ಸಾಂತ್ವನ ಕೇಂದ್ರವು ವಿದ್ಯಾರ್ಥಿ ಸಮೂಹದಲ್ಲಿ ಆತ್ಮಹತ್ಯೆ ತಡೆ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ ಎಂದರು.

ತುಮಕೂರು ವಿ.ವಿ. ಕಲಾ ಕಾಲೇಜು ಪ್ರಾಂಶುಪಾಲ ಡಾ.ದಾಕ್ಷಾಯಿಣಿ ಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕ ಪ್ರೊ.ಹೊನ್ನಗಾನಹಳ್ಳಿ ಕರಿಯಣ್ಣ, ಲೇಖಕಿ ಬಾ.ಹ.ರಮಾಕುಮಾರಿ, ಡಾ.ಈ.ವನಜಾಕ್ಷಿ ಇದ್ದರು. ಪಾರ್ವತಮ್ಮ, ಗಂಗಲಕ್ಷಿö್ಮ ಸಂಗಡಿಗರು ಮಾನವ ಗೀತೆ ಹಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular