Thursday, January 29, 2026
Google search engine
Homeಮುಖಪುಟಜಾತಿ, ಪೂಜೆ, ಪುನಸ್ಕಾರ ನಮ್ಮ ಮನೆಯೊಳಗೆ ಇರಬೇಕೇ ಹೊರತು, ಸಮಾಜದ ನಡುವೆ ಅಲ್ಲ-ನಿವೃತ್ತ ನ್ಯಾ.ಕೆ.ಎನ್.ಫಣೀಂದ್ರ

ಜಾತಿ, ಪೂಜೆ, ಪುನಸ್ಕಾರ ನಮ್ಮ ಮನೆಯೊಳಗೆ ಇರಬೇಕೇ ಹೊರತು, ಸಮಾಜದ ನಡುವೆ ಅಲ್ಲ-ನಿವೃತ್ತ ನ್ಯಾ.ಕೆ.ಎನ್.ಫಣೀಂದ್ರ

ಸಮಾಜದಲ್ಲಿ ಕಂಟಕಗಳು ಹೆಚ್ಚುತ್ತಿವೆ. ಶೇ.20 ರಷ್ಟು ಜನ ಪ್ರಾಮಾಣಿಕರಿದ್ದರೆ, ಶೇ.80ರಷ್ಟು ಜನ ಭ್ರಷ್ಟಾಚಾರಿಗಳು, ಸ್ವಜನ ಪಕ್ಷಪಾತಿಗಳು, ಮೋಸಗಾರರೇ ತುಂಬಿ ತುಳುಕುತಿದ್ದಾರೆ. ಇದೇ ರೀತಿ ಮುಂದುವರೆದರೆ ನಮ್ಮ ದೇಶಕ್ಕೆ ಹಿರಿಯರು ಹಾಕಿಕೊಟ್ಟ ಭದ್ರ ಬುನಾದಿ ಮುರಿದು ಬೀಳಲಿದೆ ಎಂದು ಕರ್ನಾಟಕ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಹಾಗೂ ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ ಕಳವಳ ವ್ಯಕ್ತಪಡಿಸಿದ್ದಾರೆ.

ತುಮಕೂರಿನ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ ಪೂರ್ವದಲ್ಲಿ ಮತ್ತು ಸ್ವಾತಂತ್ರ ನಂತರದಲ್ಲಿ ಈ ದೇಶವನ್ನು ಕಟ್ಟಿದವರು ವಕೀಲರುಗಳು, ಗಾಂಧಿ, ನೆಹರು, ಸರದಾರ್ ವಲ್ಲಭಾಯಿ ಪಟೇಲ್ ಅವರು ದೇಶದ ಆಗು, ಹೋಗುಗಳನ್ನು ಅರ್ಥ ಮಾಡಿಕೊಂಡು, ಎಲ್ಲರನ್ನು ಒಳಗೊಂಡ ಸ್ವಾತಂತ್ರ್ಯ ನಂತರದ ಭಾರತಕ್ಕೆ ಭದ್ರ ಬುನಾದಿ ಹಾಕಿದರು. ಇಂದಿಗೂ ಜನಪ್ರತಿನಿಧಿಗಳಲ್ಲಿ ಹೆಚ್ಚಿನವರು ವಕೀಲರೇ ಆಗಿದ್ದಾರೆ. ಶೇ20ರಷ್ಟು ಪ್ರಾಮಾಣಿಕರು, ಶೇ80ರಷ್ಟು ಜನರ ಮನಸ್ಸನ್ನು ಪರಿವರ್ತಿಸುವ ಕೆಲಸ ಮಾಡಬೇಕೆಂದರು.

ಕಾನೂನು ಪದವಿ ಓದಿದವರು ವಕೀಲರಾಗಲೇಬೇಕು ಎಂದೇನಿಲ್ಲ. ನೀವು ಯಾವುದೇ ವೃತ್ತಿ ಕೈಗೊಳ್ಳಿ, ಅದರಲ್ಲಿ ಪ್ರಾಮಾಣಿಕತೆ, ಜೊತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡರೆ ನೀವು ಎತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತದೆ. ಜೀವನದ ಪ್ರತಿ ಹಂತದಲ್ಲಿಯೂ ಸಮಾಜ ನಮಗೆ ಪಾಠ ಕಲಿಸುತ್ತದೆ. ಒಳ್ಳೆಯದನ್ನು ನಮ್ಮೊಳಗೆ ತೆಗೆದುಕೊಂಡು ಮುನ್ನಡೆದಾಗ ಮಾತ್ರ ಎಲ್ಲರಿಂದಲು ಮಾನ್ಯತೆಗೆ ಒಳಗಾಗಲು ಸಾಧ್ಯ. ವಕೀಲರು ಮೊದಲು ಎಲ್ಲವನ್ನು ಗ್ರಹಿಸುವ ಮತ್ತು ಅದನ್ನು ಅರ್ಥೈಸಿಕೊಳ್ಳುವುದನ್ನು ಕಲಿಯಬೇಕು. ಆಗ ಮಾತ್ರ ಸಮಾಜವನ್ನು ಸಮರ್ಥವಾಗಿ ಎದುರಿಸಲು ಸಾಧ್ಯವೆಂದು ನುಡಿದರು.

ಕಲೆ, ಸಾಹಿತ್ಯ, ಸಂಗೀತ ಇವುಗಳು ಮನುಷ್ಯನ ಮಾನಸಿಕ ಮತ್ತು ಶಾರೀರಿಕ ಬೆಳವಣಿಗೆಗೆ ಸಹಕಾರಿಯಾಗಿವೆ. ಕಾಲೇಜು ದಿನಗಳಲ್ಲಿ, ವೃತ್ತಿ ಜೀವನದಲ್ಲಿ ದೊರೆಯುವ ಪ್ರತಿಯೊಂದು ಅವಕಾಶಗಳನ್ನು ತಪ್ಪಿಸಿಕೊಳ್ಳಬಾರದು. ಜಾತಿ, ಧರ್ಮ, ಲಿಂಗ, ವರ್ಣ, ವರ್ಗ ಮೀರಿ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಬೆಳೆಸಿಕೊಂಡಾಗ ಮಾತ್ರ, ನಾವು ಬೆಳೆಯುವುದರ ಜೊತೆಗೆ, ಇತರರು ಬೆಳೆಯಲು ಸಾಧ್ಯವಾಗುತ್ತದೆ. ಜಾತಿ, ಪೂಜೆ, ಪುನಸ್ಕಾರ ಇವೆಲ್ಲರೂ ನಮ್ಮ ಮನೆಯೊಳಗೆ ಇರಬೇಕೆ ಹೊರತು, ಸಮಾಜದ ನಡುವೆ ಅಲ್ಲ. ಶಾಲಾ ಶಿಕ್ಷಕಿಯಾಗಿದ್ದ ನಮ್ಮ ತಾಯಿ ನನಗೆ ಶಾಲಾ ದಿನಗಳಲ್ಲಿ ಜಾತಿ ಭೇಧ ಮಾಡದಂತೆ ಬುದ್ದಿವಾದ ಹೇಳಿದ್ದರು, ಇದುವರೆಗೂ ಅದನ್ನು ಅನುಸರಿಸಿಕೊಂಡು ಬಂದಿದ್ದೇನೆ ಎಂದರು.

ಎಸ್‌ಪಿ ಅಶೋಕ್,ಕೆ.ವಿ. ಮಾತನಾಡಿ, ಭ್ರಷ್ಟಾಚಾರ ನಿಮೂರ್ಲನೆಗೆ ಕರ್ನಾಟಕ ಲೋಕಾಯುಕ್ತದಂತಹ ಸಂಸ್ಥೆ ಇಡೀ ವಿಶ್ವದಲ್ಲಿಯೇ ಮತ್ತೊಂದು ಇಲ್ಲ. ಹಾಗಾಗಿಯೇ ಕರ್ನಾಟಕದ ಬಗ್ಗೆ ಜನರಿಗೆ ನಂಬಿಕೆ ಹೆಚ್ಚು. ಲೋಕಾಯುಕ್ತ ಎಸ್ಪಿಯಾಗಿ ಕೆಲಸ ಮಾಡಿದ ದಿನಗಳನ್ನು ಮರೆಯಲು ಸಾಧ್ಯವಿಲ್ಲ. ಪೊಲೀಸರು ಮತ್ತು ವಕೀಲರು ಒಂದೇ ದೊಣಿಯ ಪಯಣಿಗರು, ಸಮಾಜವನ್ನು ತಿದ್ದುವ ನಿಟ್ಟಿನಲ್ಲಿ ನಮ್ಮದೇ ಆದ ರೀತಿಯಲ್ಲಿ ಕೆಲಸ ಮಾಡುತ್ತೇವೆ. ಇಬ್ಬರು ಕೂಡಿದರೆ ಒಳ್ಳೆಯ ಸಮಾಜ ಕಟ್ಟಲು ಸಾಧ್ಯ ಎಂದು ಹೇಳಿದರು.

ವಿದ್ಯೋದಯ ಫೌಂಡೇಷನ್ ಅಧ್ಯಕ್ಷ ನಿವೃತ್ತ ನ್ಯಾಯಾಧೀಶ ಹೆಚ್.ಎಸ್.ಕೆಂಪಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿದ್ಯೋದಯ ಪ್ರತಿಷ್ಠಾನದ ಮ್ಯಾನೆಜಿಂಗ್ ಟ್ರಸ್ಟಿ ಹೆಚ್,ಎಸ.ರಾಜು, ವಿದ್ಯೋದಯ ಶಿಕ್ಷಣ ಸಂಸ್ಥೆಯ ಸಿಇಓ ಪ್ರೊ,ಕೆ.ಚಂದ್ರಣ್ಣ, ಪ್ರಾಂಶುಪಾಲ ಶಮ ಸೈಯದಿ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular