ಕನ್ನಡ ಸಾಹಿತ್ಯ ಅಕಾಡೆಮಿ ಕೊಡಮಾಡುವ 2024ನೇ ಸಾಲಿನ ಸಾಹಿತ್ಯಶ್ರೀ ಪ್ರಶಸ್ತಿಗೆ ತುಮಕೂರು ಜಿಲ್ಲೆಯ ಡಾ. ಬಿ.ಯು. ಸುಮಾ ಆಯ್ಕೆಯಾಗಿದ್ದಾರೆ.
ತುಮಕೂರು ಜಿಲ್ಲೆ ಶಿರಾ ತಾಲೂಕಿನ ಭೂಪಸಂದ್ರ ಗ್ರಾಮದ ಡಾ. ಬಿ.ಯು. ಸುಮಾ ಪ್ರಸ್ತುತ ಬೆಂಗಳೂರು ಕೆಂಗೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2024ರಲ್ಲಿ ಸರ್ಕಾರ ಇವರನ್ನು ಹಂಪಿ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿದೆ.
ಕನ್ನಡ ಸಾಹಿತ್ಯ ಅಕಾಡೆಮಿಯು 2024ನೇ ಸಾಲಿಗೆ ಡಾ. ಬಿ.ಯು. ಸುಮಾ ಅವರಿಗೆ ಸಾಹಿತ್ಯಶ್ರೀ ಪ್ರಶಸ್ತಿಯನ್ನು ಪ್ರಕಟಿಸಿದೆ. ವಿಮರ್ಶಕರು ಹಾಗೂ ಸಾಂಸ್ಕೃತಿಕ ಚಿಂತಕರಾಗಿರುವ ಡಾ. ಬಿ.ಯು. ಸುಮಾ ಅವರು ಲಿಂಗವ್ಯವಸ್ಥೆ, ತತ್ವಶಾಸ್ತ್ರ, ಒಳಗೊಳ್ಳುವಿಕೆಯ ಚಿಂತನೆ ಮತ್ತು ಚಳವಳಿ, ಆಧುನಿಕ ಸಮಾಜೋ-ಸಾಂಸ್ಕೃತಿಕ ಚಿಂತನೆಗಳ ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ.
ಡಾ.ಬಿ.ಆರ್.ಅಂಬೇಡ್ಕರ್ ವರ್ತಮಾನದೊಂದಿಗೆ ಮಾತುಕತೆ, ಸಂತೆಯೊಳಗೊಂದು ಮನೆ, ಕಣ್ಣೊಳಗಣ ಕಟ್ಟಿಗೆ ಇತ್ಯಾದಿ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ನೋಮ್ ಚಾಮ್‌ಸ್ಕಿ-ಮನುಕುಲದ ಮಾತುಗಾರ, ಹೇರಾಮ್-ಭಾರತದ ಆತ್ಮಛೇದ ಕಥನ, ತಲಪರಿಗೆ-ತಳಸ್ತರದ ಸಾಂಸ್ಕೃತಿಕ ಲೋಕಕ್ಕೊಂದು ಪಯಣ, ಅಂಗದಲ್ಲಿ ಅಗಮ್ಯ-ಮಹಿಳೆ ಬದುಕು ಮತ್ತು ಚಿಂತನೆ ಇತ್ಯಾದಿ ಪುಸ್ತಕಗಳನ್ನು ಸಂಪಾದಿಸಿದ್ದಾರೆ.
ಹಲವು ವರ್ಷಗಳ ಸಾಹಿತ್ಯ ಕೃಷಿಗೆ ಸಲ್ಲಿಸಿದ ಸೇವೆಗೆ ಡಾ. ಬಿ.ಯು. ಸುಮಾ ಹಲವಾರು ಪ್ರಶಸ್ತಿಗಳಿಗೆ ಭಾಜರಾಗಿದ್ದಾರೆ.


