ಚುನಾವಣಾ ಆಯೋಗವನ್ನು ದುರುಪಯೋಗಪಡಿಸಿಕೊಂಡು ಮತಕಳ್ಳತನದ ಮೂಲಕ ಬಿಜೆಪಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದೆ. ವಿವಿಧ ಕ್ಷೇತ್ರಗಳಲ್ಲಿ ಮತಕಳ್ಳತನ ನಡೆದಿರುವ ಬಗ್ಗೆ ರಾಹುಲ್‌ಗಾಂಧಿ ಸಾಕ್ಷಿ ಸಮೇತ ಸಾಬೀತು ಮಾಡಿದ್ದಾರೆ. ಮತಕಳ್ಳತನ ಮಾಡಿ ಬಿಜೆಪಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ದ್ರೋಹ ಮಾಡಿದೆ ಎಂದು ಎಐಸಿಸಿ ಕಾರ್ಯದರ್ಶಿ, ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಮಯೂರ ಜಯಕುಮಾರ್ ಆರೋಪಿಸಿದರು.
ಮತಕಳ್ಳತನದ ವಿರುದ್ಧ ನಗರ ವಿಧಾನಸಭಾಕ್ಷೇತ್ರ ವ್ಯಾಪ್ತಿಯಲ್ಲಿ ತುಮಕೂರು ನಗರದ ಬಿ.ಜಿ. ಪಾಳ್ಯ ವೃತ್ತದಲ್ಲಿ ನಡೆದ ಸಹಿ ಸಂಗ್ರಹ ಅಭಿಯಾನದ ಪೋಸ್ಟರ್‌ನಲ್ಲಿ ತಾವು ಸಹಿ ಮಾಡಿ, ಅಭಿಯಾನಕ್ಕೆ ಚಾಲನೆ ನೀಡಿದ ಅವರು, ಮತಕಳ್ಳತನದ ವಿರುದ್ಧ ರಾಹುಲ್‌ಗಾಂಧಿ ದೇಶಾದ್ಯಂತ ಹೋರಾಟ ನಡೆಸುತ್ತಿದ್ದಾರೆ. ಅವರ ಹೋರಾಟಕ್ಕೆ ಎಲ್ಲೆಡೆ ವ್ಯಾಪಕ ಬೆಂಬಲ ದೊರಕಿದೆ. ಮತಕಳ್ಳತನದ ಮೂಲಕ ಚುನಾವಣೆಗೆದ್ದು ಹಿಂಬಾಗಿಲಿನಿಂದ ಅಧಿಕಾರ ಪಡೆದಿರುವ ಬಿಜೆಪಿಯ ದುಷ್ಕೃತ್ಯಕ್ಕೆ ದೇಶದ ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಚುನಾವಣೆಗಳಲ್ಲಿ ಮತಕಳ್ಳನ ಸಂವಿಧಾನದ ಆಶಯಕ್ಕೆ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗುತ್ತದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಮುಂದಿನ ಚುನಾವಣೆಗಳಲ್ಲಿ ಮತಕಳ್ಳತನಕ್ಕೆ ಅವಕಾಶ ಆಗದಂತೆ ಚುನಾವಣಾ ಆಯೋಗ ಕಟ್ಟೆಚ್ಚರ ವಹಿಸಬೇಕು. ಮತಕಳ್ಳತನದ ವಿರುದ್ಧ ಕಾಂಗ್ರೆಸ್ ಪಕ್ಷ ದೇಶಾದ್ಯಂತ ಜನಜಾಗೃತಿ ಮೂಡಿಸುತ್ತಿದೆ, ಸಹಿ ಸಂಗ್ರಹ ಅಭಿಯಾನ ಆರಂಭಿಸಿದೆ ಎಂದು ಹೇಳಿದರು.
ಮತಕಳ್ಳತನ ವಿರುದ್ಧ ನಗರದಲ್ಲಿ ಸಹಿ ಸಂಗ್ರಹ ಅಭಿಯಾನ ಆಯೋಜಿಸಿದ್ದ ನಗರ ವಿಧಾನಸಭಾಕ್ಷೇತ್ರದ ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹ್ಮದ್ ಮಾತನಾಡಿ, ಮತಕಳ್ಳತನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡುವ ವಂಚನೆ. ಮತದಾರರು ಮತದಾನದ ಮೂಲಕ ಆಡಳಿತ ಚುಕ್ಕಾಣಿ ಹಿಡಿಯುವವರನ್ನು ಆಯ್ಕೆ ಮಾಡುವುದು ಸಂವಿಧಾನಾತ್ಮಕ ಚುನಾವಣಾ ವ್ಯವಸ್ಥೆ. ಆದರೆ ಬಿಜೆಪಿಯವರು ಮತಕಳ್ಳತನ ಮಾಡಿ ಚುನಾವಣೆಯಲ್ಲಿ ಗೆಲುವು ಪಡೆಯುವುದು ಪಾರದರ್ಶಕ ಚುನಾವಣೆಗೆ ಧಕ್ಕೆ ತಂದಿದೆ. ಪಟ್ಟಭದ್ರ ಹಿತಾಸಕ್ತಿಗಳು ಮತಕಳವು ಮೂಲಕ ಅಧಿಕಾರ ಹಿಡಿಯುವ ಸರ್ವಾಧಿಕಾರಿ ಧೋರಣೆಗೆ ಅವಕಾಶ ಆಗಬಾರದು ಎಂದು ತಿಳಿಸಿದರು.
ಮಾಜಿ ಶಾಸಕ ಡಾ.ರಫಿಕ್ ಅಹ್ಮದ್, ಕೆಪಿಸಿಸಿ ಉಪಾಧ್ಯಕ್ಷ ಮುರಳಿಧರ ಹಾಲಪ್ಪ ಸೇರಿದಂತೆ ಕಾಂಗ್ರೆಸ್‌ನ ವಿವಿಧ ಘಟಕಗಳ ಪದಾಧಿಕಾರಿಗಳು, ನಗರಪಾಲಿಕೆ ಮಾಜಿ ಸದಸ್ಯರು, ಮುಖಂಡರು ಅಭಿಯಾನದಲ್ಲಿ ಭಾಗವಹಿಸಿ ಸಾರ್ವಜನಿಕರಿಂದ ಸಹಿ ಸಂಗ್ರಹ ಮಾಡಿದರು.


