ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ಸಹೋದರರ ನಡುವೆ ನಡೆದ ಹೊಡೆದಾಟದಲ್ಲಿ ಅಣ್ಣ ತಮ್ಮನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಬ್ಯಾಲಹಳ್ಳಿಯಲ್ಲಿ ನಡೆದಿದೆ.
ತುರುವೇಕೆರೆ ತಾಲ್ಲೂಕಿನ ಬ್ಯಾಲಹಳ್ಳಿಯಲ್ಲಿ ಜಮೀನಿನ ವಿವಾದದ ಹಿನ್ನೆಲೆಯಲ್ಲಿ ಅಣ್ಣ ಕೃಷ್ಣಪ್ಪ ಒಡಹುಟ್ಟಿದ ತಮ್ಮ ಶ್ರೀನಿವಾಸ್‌ನನ್ನು ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಶ್ರೀನಿವಾಸ್ ತನ್ನ ತೋಟಕ್ಕೆ ತೆರಳುವಾಗ ದಾರಿ ಮಧ್ಯೆ ಕೃಷ್ಣಪ್ಪ ಮತ್ತು ಆತನ ಮಗ ಪ್ರಮೋದ ಸಿಕ್ಕಿದ್ದಾರೆ. ಈ ಸಂದರ್ಭದಲ್ಲಿ ಶ್ರೀನಿವಾಸ್ ಮತ್ತು ಕೃಷ್ಣಪ್ಪನವರ ನಡುವೆ ಜಮೀನು ವಿವಾದದ ಬಗ್ಗೆ ಮಾತಿನಚಕಮಕಿ ನಡೆದಿದ್ದು ಪರಿಸ್ಥಿತಿ ವಿಕೋಪಕ್ಕೆ ಹೋಗಿ ಅಣ್ಣ ಕೃಷ್ಣಪ್ಪ ಮತ್ತು ಮಗ ಪ್ರಮೋದ ಇಬ್ಬರು ಸೇರಿ ಶ್ರೀನಿವಾಸ್ (60) ನನ್ನು ಮಚ್ಚಿನಿಂದ ಹೊಡೆದಿದ್ದಾರೆ. ತೀವ್ರವಾಗಿ ಗಾಯಗೊಂಡು ರಕ್ತ ಸ್ರಾವವಾಗಿ ಶ್ರೀನಿವಾಸ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಪಿತ್ರಾರ್ಜಿತ ಆಸ್ತಿ ಹಿರಿಯ ಮಗನಾಗಿದ್ದ ಕೃಷ್ಣಪ್ಪನ ಹೆಸರಿನಲ್ಲಿ ಇತ್ತೆಂದೂ, ತನ್ನ ತಮ್ಮ ಶ್ರೀನಿವಾಸನಿಗೆ ಜಮೀನನ್ನು ಸಮವಾಗಿ ಹಂಚಿರಲಿಲ್ಲ. ತಮ್ಮ ಹೆಸರುಗಳಿಗೆ ಜಮೀನಿನ ದಾಖಲೆ ಮಾಡಿಕೊಟ್ಟಿಲ್ಲವೆಂದು ಆಗಾಗ ಜಗಳವಾಗುತ್ತಿತ್ತು ಎಂದು ಹೇಳಲಾಗಿದೆ.
ತೋಟಕ್ಕೆ ಹೋದ ಶ್ರೀನಿವಾಸ್ ಮನೆಗೆ ಬಾರದಿರುವುದು ಕಂಡು ಕುಟುಂಬದವರು ಗಾಬರಿಯಿಂದ ಹುಡುಕಾಟ ನಡೆಸಿದ್ದು ಶ್ರೀನಿವಾಸ್ ಕೊಲೆಯಾಗಿರುವುದು ಕಂಡು ಬಂದಿದೆ.
ಸ್ಥಳಕ್ಕೆ ತುರುವೇಕೆರೆ ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಾದ ಕೃಷ್ಣಪ್ಪ ಮತ್ತು ಆತನ ಮಗ ಪ್ರಮೋದ್‌ನನ್ನು ಬಂಧಿಸಿದ್ದಾರೆ. ತಿಪಟೂರು ಉಪವಿಭಾಗದ ಎ.ಎಸ್.ಪಿ ಯಶುಕುಮಾರ್ ಶರ್ಮಾ ಸ್ಥಳಕ್ಕೆ ಭೇಟಿ ನೀಡಿದ್ದರು.


