ಬೆಂಗಳೂರು ದಕ್ಷಿಣ ಜಿಲ್ಲೆಗೆ ಕುಣಿಗಲ್ ತಾಲೂಕು ಸೇರ್ಪಡೆ ಮಾಡುವ ಶಾಸಕ ಡಾ.ರಂಗನಾಥ್ ಪ್ರಸ್ತಾಪಕ್ಕೆ ತುಮಕೂರು ಜಿಲ್ಲೆಯ ಕುಣಿಗಲ್ ನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
ಶುಕ್ರವಾರ ಪಟ್ಟಣದಲ್ಲಿ ಸಭೆ ಸೇರಿದ ಜೆಡಿಎಸ್, ಬಿಜೆಪಿ ಮತ್ತು ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಯಾವುದೇ ಕಾರಣಕ್ಕೂ ಕುಣಿಗಲ್ ತಾಲೂಕನ್ನು ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರ್ಪಡೆ ಮಾಡಬಾರದೆಂದು ಒಕ್ಕೊರಲು ತೀರ್ಮಾನ ಕೈಗೊಂಡರು. ಒಂದು ವೇಳೆ ಬೆಂಗಳೂರು ದಕ್ಷಿಣ ಜಿಲ್ಲೆಗೆ ಕುಣಿಗಲ್ ಸೇರ್ಪಡೆ ಮಾಡಲು ಮುಂದಾದರೆ ಬೃಹತ್ ಹೋರಾಟ ಮಾಡಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ವಿವಿಧ ಸಂಘ ಸಂಸ್ಥೆಗಳ ಮುಖಂಡರು ಸಭೆ ನಡೆಸಿ ಮಾತನಾಡಿ, ಕುಣಿಗಲ್ ಜನರ ಬಗ್ಗೆ ತುಮಕೂರು ಜಿಲ್ಲೆಯಲ್ಲಿ ಜನರು ಅವಿನಾಭಾವ ಸಂಬಂಧ ಹೊಂದಿದ್ದಾರೆ, ರಾಜಕೀಯವಾಗಿ, ಸಂಘಟನಾತ್ಮಕವಾಗಿ, ಶೈಕ್ಷಣಿಕವಾಗಿ, ಅಭಿವೃದ್ಧಿಯ ಜೊತೆಗೆ ಸಂಬಂಧಗಳು ಗಟ್ಟಿಗೊಳಿಸಿಕೊಂಡಿವೆ, ಅನ್ನ, ಅಕ್ಷರ ಕೊಟ್ಟು ನಮ್ಮನ್ನು ಗಟ್ಟಿಗೊಳಿಸಿದ ಸಿದ್ದಗಂಗಾ ಮಠ, ಸಿದ್ದಾರ್ಥ ಸಂಸ್ಥೆಗಳನ್ನು ತಾಲೂಕಿನ ಜನ ಮರೆಯಲು ಸಾಧ್ಯವೇ ಇಲ್ಲ. ಅಂತಹ ಜಿಲ್ಲೆಯಿಂದ ಕುಣಿಗಲ್ ಜನರನ್ನ ಬೇರ್ಪಡಿಸುವುದು ಖಂಡನೀಯ ಎಂದರು.
ಕುಣಿಗಲ್ ಅನ್ನು ಬೆಂಗಳೂರು ದಕ್ಷಿಣಕ್ಕೆ ಸೇರಿಸಿ ಎಂದು ಅರ್ಜಿ ಕೊಟ್ಟ ಅನಿವಾಸಿಗಳಲ್ಲಿ ಅನೇಕರು ಶಾಸಕ ಡಾ,ರಂಗನಾಥ್ ಜೊತೆಗಿದ್ದಾರೆ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ, ಭೌಗೋಳಿಕವಾಗಿ ಕಲ್ಪತರು ನಾಡಿನ ವಾತಾವರಣವೇ ಬೇರೆ, ರಾಮನಗರ ಜಿಲ್ಲೆಯ ವಾತಾವರಣವೇ ಬೇರೆ. ಲೋಕಸಭಾ ಕ್ಷೇತ್ರವನ್ನು ತುಮಕೂರಿನಿಂದ ಬೇರ್ಪಡಿಸಿ ತಮ್ಮ ಹಿಡಿತ ಸಾಧಿಸುತ್ತಿರುವ ಜಿಲ್ಲೆಯಿಂದ ಕುಣಿಗಲ್ ತಾಲೂಕನ್ನು ಬೇರ್ಪಡಿಸಿ ಹಿಡಿತ ಸಾಧಿಸುವ ಹುನ್ನಾರ ನಡೆಯುತ್ತಿದೆ, ದಯವಿಟ್ಟು ಇಂತಹ ದುಸ್ಸಾಹಸಗಳನ್ನು ಕೈಬಿಟ್ಟು ಕುಣಿಗಲ್ ಅನ್ನು ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರ್ಪಡೆಗೆ ಅರ್ಜಿ ಕೊಟ್ಟವರಿಗೆ ಬುದ್ಧಿ ಹೇಳಿ ತಾವುಗಳು ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಬೇಕು ಎಂದು ಒತ್ತಾಯಿಸಿದರು.
ದಿ ನ್ಯೂಸ್ ಕಿಟ್.ಕಾಂ ಜೊತೆ ಮಾತನಾಡಿದ ಹೋರಾಟಗಾರ ಜಿ.ಕೆ.ನಾಗಣ್ಣ, ಕುಣಿಗಲ್ ತುಮಕೂರು ಜಿಲ್ಲೆಯ ಅವಿಭಾಜ್ಯ ಅಂಗ. ಹತ್ತಿರವಿರುವ ತಾಲೂಕು. ಜಿಲ್ಲೆಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇವೆ. ಇಲ್ಲಿನ ಜನರೊಂದಿಗೆ ಸಾಮರಸ್ಯವನ್ನು ಸಾಧಿಸಿದ್ದೇವೆ. ಜನಗಳು ದಿನನಿತ್ಯ ಜಿಲ್ಲಾ ಕೇಂದ್ರಕ್ಕೆ ಹೋಗಿಬರಲು ಉತ್ತಮ ಸಾರಿಗೆ ಸೌಲಭ್ಯವಿದೆ. ಶಿಕ್ಷಣ, ಆರೋಗ್ಯ ಈ ಎಲ್ಲಾ ದೃಷ್ಟಿಯಿಂದ ತುಮಕೂರು ನಮಗೆ ಅನುಕೂಲವಾಗಿದೆ. ಜಿಲ್ಲೆಯ ಜನರೊಂದಿಗೆ ಕುಣಿಗಲ್ ಜನತೆ ಸಾಮರಸ್ಯವನ್ನು ಸಾಧಿಸಿದ್ದೇವೆ. ಭಾಷಿಕವಾಗಿ, ರಾಜಕೀಯವಾಗಿ, ಧಾರ್ಮಿಕವಾಗಿ. ತುಮಕೂರು ಜಿಲ್ಲೆಗೆ ನೀರಾವರಿ ಹೋರಾಟ ಕಟ್ಟಿದವರು ವೈ.ಕೆ.ರಾಮಯ್ಯ, ಹುಚ್ಚಮಾಸ್ತಿಗೌಡರು. ಅವರು ಕುಣಿಗಲ್ ನವರು ಎಂಬುದು ಬಹುಮುಖ್ಯ ಸಂಗತಿ. ಜಿಲ್ಲೆಯನ್ನು ಬೇರ್ಪಡಿಸಿ ರಾಮನಗರಕ್ಕೆ ಸೇರಿಸುವ ಔಚಿತ್ಯ ಏನಿದೆ. ಯಾವುದೇ ರೀತಿಯಲ್ಲೂ ರಾಮನಗರ ನಮಗೆ ಅನುಕೂಲವಾಗುವುದಿಲ್ಲ. ರಾಮನಗರಕ್ಕೂ ನಮಗೆ ಸಂಪರ್ಕವಿಲ್ಲ.
ಇದು ಡಿ.ಕೆ.ಶಿವಕುಮಾರ್, ಅವರ ಸಂಬಂಧಿ ಶಾಸಕ ಡಾ.ರಂಗನಾಥ್ ರಾಜಕೀಯ ಹಿತಾಸಕ್ತಿ ಮತ್ತು ಕುಣಿಗಲ್ ತಾಲೂಕು ರೈತರನ್ನು ಕಾರ್ಪೋರೇಟ್ ಲಾಬಿ ಮುಖಾಂತರ ಒಕ್ಕಲೆಬ್ಬಿಸುವ ಹುನ್ನಾರ ಮಾಡುತ್ತಿದ್ದಾರೆ. ಇದೊಂದು ದೊಡ್ಡ ಪಿತೂರಿ. ಇದನ್ನು ಕುಣಿಗಲ್ ತಾಲೂಕಿನ ಜನತೆ ತೀವ್ರವಾಗಿ ಖಂಡಿಸುತ್ತೇವೆ. ನಮ್ಮ ಅಸ್ಮಿತೆ ಹೋರಾಟಕ್ಕೋಸ್ಕರ ನಾವು ಎಂಥದ್ದೇ ಹೋರಾಟಕ್ಕೂ ಸಿದ್ದರಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವ ಕೃಷ್ಣ ಭೈರೇಗೌಡ, ಇದನ್ನು ಗಂಭೀರವಾಗಿ ಪರಿಗಣಿಸುತ್ತಾರೆ ಎಂದು ಭಾವಿಸಿದ್ದೇವೆ. ಹಿಂದೆ ಕುದುರೆ ಫಾರಂ ಹೋರಾಟ ಮಾಡಿದಾಗ ಸಿದ್ದರಾಮಯ್ಯ ನಮ್ಮ ಜನರ ಭಾವನೆಯನ್ನು ಅರ್ಥ ಮಾಡಿಕೊಂಡಿದ್ದಾರೆ. ಈಗಲೂ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಅರ್ಥ ಮಾಡಿಕೊಳ್ಳುತ್ತಾರೆ. ಅವರು ಬೇರೆ ರೀತಿ ನಡೆದುಕೊಳ್ಳುವುದಿಲ್ಲ ಎಂಬ ಭಾವನೆ ಇದೆ. ಒಂದು ವೇಳೆ ರಾಮನಗಕ್ಕೆ ಸೇರ್ಪಡೆಗೆ ಮುಂದಾದರೆ ಸಾಮೂಹಿಕ ನಾಯಕತ್ವದಲ್ಲಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಹರೆಶಂಕರ ಮಠದ ಸಿದ್ಧರಾಮ ಚೈತನ್ಯ ಸ್ವಾಮೀಜಿ, ವೈ.ಎಚ್. ಹುಚ್ಚಯ್ಯ, ಡಿ ಕೃಷ್ಣಕುಮಾರ್, ಜಗದೀಶ್, ಆನಂದ್ ಪಾಟೀಲ್, ಜಯರಾಮಯ್ಯ, ಕರಿಗೌಡ, ಸಿಂಗ್ರಯ್ಯ, ಶಾಂತಕುಮಾರಿ, ರಾಮಲಿಂಗಯ್ಯ, ಶಿವಶಂಕರ್, ವರದರಾಜು, ಶಿವರಾಮಯ್ಯ, ಹುಚ್ಚೇಗೌಡ, ರಮೇಶ್, ದಿನೇಶ್ ಕುಮಾರ್, ತರೀಕೆರೆ ಪ್ರಕಾಶ್ ಇದ್ದರು.


