ತುಮಕೂರಿನ ಔಟರ್ ರಿಂಗ್ ರಸ್ತೆ ಹೆಸರಿನಲ್ಲಿ ರೈತರ ಫಲವತ್ತಾದ ಭೂಮಿಯನ್ನು ಕಬಳಿಸಲು ಹುನ್ನಾರ ನಡೆಸಿರುವ ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿ ಅ. 4ರಿಂದ 6ರವರೆಗೆ ಯೋಜನೆಯಿಂದ ಬಾಧಿತ ಪ್ರದೇಶಗಳಲ್ಲಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ. ಇದಕ್ಕೂ ಮಣಿಯದಿದ್ದರೆ ಅ.13 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ನಂದಿಹಳ್ಳಿ-ಮಲ್ಲಸಂದ್ರ-ವಸಂತನರಸಾಪುರ ಬೈಪಾಸ್ ರಸ್ತೆ ವಿರೋಧಿ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಂಯುಕ್ತ ಹೋರಾಟ-ಕರ್ನಾಟಕ ಸಂಚಾಲಕ ಸಿ.ಯತಿರಾಜ್, ಸರಕಾರ ಹೊಸ ಯೋಜನೆಯ ಹೆಸರಿನಲ್ಲಿ ರೈತರ ಫಲವತ್ತಾದ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿದೆ. ಇದರಿಂದ 750ಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬೀಳಲಿವೆ. ಸರಕಾರ ಯೋಜನೆಯ ಸಾಧಕ ಬಾಧಕಗಳ ಕುರಿತು ರೈತರೊಂದಿಗೆ ಚರ್ಚೆ ನಡೆಸದೆ, ದಬ್ಬಾಳಿಕೆ ನಡೆಸಲು ಮುಂದಾಗಿದೆ. ಸರ್ಕಾರ ಕೂಡಲೇ ಯೋಜನೆಯಿಂದ ಹಿಂದೆ ಸರಿಯಬೇಕು. ಅಧಿಸೂಚನೆಯನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದರು.
ರೈತ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ಪ್ರಸ್ತಾಪಿತ ನಂದಿಹಳ್ಳಿ, ಮಲ್ಲಸಂದ್ರ, ವಸಂತ ನರಸಾಪುರ ಔಟರ್ ರಿಂಗ್ ರೋಡ್‌ಗೆ 44 ಹಳ್ಳಿಗಳ ಸುಮಾರು 650 ಎಕರೆ ಫಲವತ್ತಾದ ಭೂಮಿಯ ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆಯನ್ನು ರೈತರ ಒಪ್ಪಿಗೆ ಇಲ್ಲದೆ, ರೈತರೊಂದಿಗೆ ಮಾತುಕತೆ ನಡೆಸದೆ ಹೊರಡಿಸಲಾಗಿದೆ. ಇದರಲ್ಲಿ ಸುಮಾರು 750 ಕುಟುಂಬಗಳು ಹಣ್ಣು, ತರಕಾರಿ, ಹೂವು ಬೆಳೆಯುತ್ತವೆ. ಅಡಿಕೆ, ತೆಂಗು ಸೇರಿದಂತೆ ತೋಟಗಾರಿಕಾ ಬೆಳೆಗಳನ್ನು ಬೆಳೆದು ಜೀವನ ಸಾಗಿಸುತ್ತಿವೆ. ಸರ್ಕಾರ ಯೋಜನೆಯ ಸೋಷಿಯಲ್ ಇಂಫಾಕ್ಟ್ ಬಗ್ಗೆ ಸರ್ವೆ ನಡೆಸದೆ ಭೂಸ್ವಾಧೀನಕ್ಕೆ ಮುಂದಾಗಿದೆ. ಹಾಗಾಗಿ ಸರ್ಕಾರ ಯೋಜನೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಸರಕಾರ ಪ್ರಾಸ್ತಾಪಿತ ಔಟರ್ ರಿಂಗ್ ರಸ್ತೆಗೆ ಭೂ ಸ್ವಾಧೀನ ವಿರೋಧಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ. ಈಗಾಗಲೇ ಇರುವ ರಸ್ತೆಗಳನ್ನೇ ವಿಸ್ತರಿಸಿ, ಉಪಯೋಗಿಸುವಂತೆ ಹೊಸ ಪ್ರಸ್ತಾಪ ಕೈಬಿಡುವಂತೆ ಅಕ್ಷಪಣೆ ನೀಡಿದ್ದೇವೆ. ದಾಬಸ್‌ಪೇಟೆಯಿಂದ ಗುಬ್ಬಿಯವರೆಗೆ ಸುಮಾರು 120 ಅಡಿ ಅಗಲದ ನಕಾಶೆ ರಸ್ತೆಯಿದ್ದು, ಆ ರಸ್ತೆಯನ್ನು ಔಟರ್ ರಿಂಗ್ ರಸ್ತೆಗೆ ಬಳಸುವಂತೆ ಮನವಿ ಮಾಡಲಾಗಿತ್ತು. ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ ನಡೆಸುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ಜಿಲ್ಲಾಧಿಕಾರಿ ಈ ಕುರಿತು ರೈತರೊಂದಿಗೆ ಮಾತನಾಡಿಲ್ಲ. ಹಾಗಾಗಿ ಮತ್ತೊಮ್ಮೆ ಜಿಲ್ಲಾಡಳಿತದ ಗಮನ ಸೆಳೆಯುವ ಸಲುವಾಗಿ ಅ.13 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಎಐಕೆಕೆಎಂಎಸ್‌ನ ಎಸ್.ಎನ್.ಸ್ವಾಮಿ, ಎಸ್.ಕೆ.ಎಂ.ಸಂಯೋಜಕ ಬಿ.ಉಮೇಶ್, ಎಐಕೆಎಸ್‌ನ ಕಂಬೇಗೌಡ, ಕೆಪಿಆರ್‌ಎಸ್ ಪ್ರಧಾನ ಕಾರ್ಯದರ್ಶಿ ಸಿ.ಅಜ್ಜಪ್ಪ, ರಮೇಶ್ ಭೈರಸಂದ್ರ, ಸಿದ್ದಗಂಗಮ್ಮ, ರೈತ ಸಂಘದ ತಾಲೂಕು ಅಧ್ಯಕ್ಷ ಚಿಕ್ಕಬೋರೇಗೌಡ ಇದ್ದರು.


