ವಿದ್ಯೆಯಿಂದ ವಂಚಿತವಾಗಿದ್ದ ವಾಲ್ಮೀಕಿ ಸಮುದಾಯದಲ್ಲಿ ಶೈಕ್ಷಣಿಕ ಜಾಗೃತಿ ಮೂಡಿದ್ದು ದೇವರಾಜ ಅರಸು, ಎಲ್.ಜಿ.ಹಾವನೂರರ ಪ್ರವೇಶ ಮಾಡಿದ ನಂತರ. ಆ ನಂತರ ಶಿಕ್ಷಣದ ಪ್ರವೇಶದಲ್ಲಿ ಮೀಸಲಾತಿ ತಂದ ಮೇಲೆ ನಮ್ಮವರು ಡಾಕ್ಟರ್, ಇಂಜಿನಿಯರ್ ಆಗಲು ಸಾಧ್ಯವಾಯಿತು ಎಂದು ಮಾಜಿ ಸಚಿವ, ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ತುಮಕೂರಿನ ಸರಸ್ವತಿಪುರಂನಲ್ಲಿ ವಾಲ್ಮೀಕಿ ವಿದ್ಯಾವರ್ಧಕ ಸಂಘ ನಿರ್ಮಿಸಿರುವ ವಿದ್ಯಾರ್ಥಿನಿಲಯ ಕಟ್ಟಡಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯೆ ಯಾರಪ್ಪನ ಸ್ವತ್ತೂ ಅಲ್ಲ, ಅದು ಸಾಧಕನ ಸೊತ್ತು. ಶ್ರದ್ಧೆಯಿಂದ ಅಭ್ಯಾಸ ಮಾಡಿದವರಿಗೆ ವಿದ್ಯೆ ಒಲಿಯುತ್ತದೆ ಎಂದರು.
ಎಲ್ಲಾ ಸಮುದಾಯಗಳಲ್ಲೂ ವಿದ್ಯಾವಂತರಾದಾಗ ಮಾತ್ರ ಸಮಾಜದ ಸರ್ವತೋಮುಖ ಬೆಳವಣಿಗೆ ಸಾಧ್ಯ. ಮಕ್ಕಳು ವಿದ್ಯಾವಂತರಾದರೆ ಸಮಾಜದ ಆಸ್ತಿಯಾಗುತ್ತಾರೆ, ಇಲ್ಲವಾದರೆ ಸಮಾಜಕ್ಕೆ ಹೊರೆಯಾಗುತ್ತಾರೆ. ಮನುಷ್ಯನನ್ನು ಮನುಷ್ಯನನ್ನಾಗಿ ಮಾಡುವುದು ವಿದ್ಯೆ. ವಿದ್ಯೆಯಿಂದ ಸಮಾಜದಲ್ಲಿ ಗೌರವ, ಸ್ಥಾನಮಾನ ದೊರೆಯುತ್ತದೆ ಎಂದು ಹೇಳಿದರು.
ಈಗ ನಡೆಯುತ್ತಿರುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯಲ್ಲಿ ವಾಲ್ಮೀಕಿ ಸಮಾಜದವರು ಜಾತಿ ಕಾಲಂನಲ್ಲಿ ತಪ್ಪದೇ ನಾಯಕ ಎಂದು ನಮೂದಿಸಬೇಕು. ಸಂಘ ಸಂಸ್ಥೆಗಳವರು ವ್ಯಾಪಕ ಪ್ರಚಾರ ಮಾಡಿ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು ಎಂದು ಕೆ.ಎನ್.ರಾಜಣ್ಣ ತಿಳಿಸಿದರು.
ಶಿಕ್ಷಣದಿಂದ ಮಾತ್ರ ಸಮಾಜ ಬದಲಾವಣೆ: ಡಾ.ಜಿ.ಪರಮೇಶ್ವರ್
ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿಯಾಗದೆ ತಳ ಸಮುದಾಯಗಳು ಮುಂದುವರೆಯಲು ಸಾಧ್ಯವಿಲ್ಲ. ನಾವು ಶಿಕ್ಷಣ ಪಡೆದು ಬದಲಾದರೆ ಸಮುದಾಯವೂ ಬದಲಾಗುತ್ತದೆ. ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ. ಹಾಗಾಗಿ ಎಲ್ಲ ಸಮಾಜದವರೂ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಸಮಾಜಗಳ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ ಅವರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ನೀಡಲು ಸರ್ಕಾರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಆರಂಭಿಸಿದೆ. ಒಂದು ಅಂದಾಜಿನ ಪ್ರಕಾರ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನಸಂಖ್ಯೆ 1.9 ಕೋಟಿಯಷ್ಟಿದೆ. ಎಸ್ಸಿ, ಎಸ್ಟಿಗಳು ಕಾನೂನಿನ ಪ್ರಕಾರ ಬೇರೆಬೇರೆಯಾದರೂ ಸಾಮಾಜಿಕವಾಗಿ ಬೇರೆ ಬೇರೆ ಅಲ್ಲ ಎಂದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಪಾವಗಡ ಶಾಸಕ ವೆಂಕಟೇಶ್, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಎಸ್.ಆರ್.ಶಾಂತಲಾ ರಾಜಣ್ಣ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ.ಕೆ.ಆರ್.ರಾಜಕುಮಾರ್, ಹೆಚ್.ಜಿ.ಪುರುಷೋತ್ತಮ್, ದೊಡ್ಡಯ್ಯ, ಆರ್.ವಿಜಯಕುಮಾರ್, ಬಿ.ಜಿ.ಕೃಷ್ಣಪ್ಪ, ಡಾ.ಅಂಜನ್‌ಕುಮಾರ್ ವಾಲ್ಮೀಕಿ, ಸರಸ್ವತಿ, ಎಸ್.ಆರ್.ರಾಜಕುಮಾರ್, ವಿ.ನಾಗರಾಜಯ್ಯ, ಪಿ.ಎಸ್.ನರಸಿಂಹಕೃಷ್ಣ, ಜಿ.ತಿಪ್ಪೇಸ್ವಾಮಿ, ಜಿ.ಆರ್.ನಾಗರಾಜು, ಆರ್.ಉಮೇಶ್, ನಾರಾಯಣಪ್ಪ, ಬಿ.ಎಸ್.ಶಿವಸ್ವಾಮಿ ಭಾಗವಹಿಸಿದ್ದರು.


