ಹಿಂದುಳಿದ ವರ್ಗಗಳ ಆಯೋಗದ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯಲ್ಲಿ ಸಾಕಷ್ಟು ಗೊಂದಲಗಳು ಮೂಡಿದ್ದು, ಸಮೀಕ್ಷೆಯಲ್ಲಿ ಜಾತಿ ನಮೂದಿಸುವಾಗ ಶಿಕ್ಷಕರು ಆದಿ ಕರ್ನಾಟಕ, ಆದಿ ದ್ರಾವಿಡ ಎಂದು ನಮೂದಿಸುತ್ತಿದ್ದು ಇದನ್ನು ತಡೆಯುವಂತೆ ತುಮಕೂರು ಜಿಲ್ಲಾ ಒಳಮೀಸಲಾತಿ ಹೋರಾಟ ಸಮಿತಿ ಆರೋಪಿಸಿದೆ.
ಜಿಲ್ಲಾ ಒಳ ಮೀಸಲಾತಿ ಸಮಿತಿ ಸಮಿತಿಯ ಮುಖಂಡರು, ಹೋರಾಟಗಾರರು ಹಾಗೂ ಚಿಂತಕರು ಸಭೆಯಲ್ಲಿ ಜಿಲ್ಲೆಯ ವಿವಿಧೆಡೆಗಳಲ್ಲಿ ಮಾದಿಗ ಸಮುದಾಯದ ಕುಟುಂಬಗಳ ಸಮೀಕ್ಷೆ ಮಾಡುವಾಗ ಶಿಕ್ಷಕರು ಆದಿ ಕರ್ನಾಟಕ, ಆದಿ ದ್ರಾವಿಡ ಎಂದು ನಮೂದು ಮಾಡಿರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಜಿಲ್ಲಾಡಳಿತ ಸಮೀಕ್ಷೆಗೆ ತೆರಳುವ ಶಿಕ್ಷಕರಿಗೆ ಕಡ್ಡಾಯವಾಗಿ ಜಾತಿ ನಮೂದಿಸಲು ಸೂಚಿಸಬೇಕು ಎಂದು ಒತ್ತಾಯಿಸಲಾಯಿತು.
ಚಿಂತಕ ಕೆ. ದೊರೆರಾಜ್ ಮಾತನಾಡಿ, ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ಸಮೀಕ್ಷೆಯಲ್ಲಿ ಸುಮಾರು 5 ಲಕ್ಷ ಕುಟುಂಬಗಳು ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂದು ನಮೂದಿಸಿ ಗೊಂದಲ ಸೃಷ್ಟಿಸಿದ್ದಾರೆ. ಆದ್ದರಿಂದ ಮಾದಿಗ ಸಮುದಾಯದವರು ಸಮೀಕ್ಷೆಗೆ ಬಂದಾಗ ಕಡ್ಡಾಯವಾಗಿ ಜಾತಿ ಮತ್ತು ಉಪಜಾತಿ ಎರಡಲ್ಲಿಯೂ ಮಾದಿಗ ಎಂದು ನಮೂದಿಸಬೇಕೆಂದು ಕರೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ನಮ್ಮ ಸಮುದಾಯದ ಜನರ ಮೇಲೆ ದೌರ್ಜನ್ಯ ಮತ್ತು ಹತ್ಯೆಗಳು ಹೆಚ್ಚಾಗುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಸರ್ಕಾರ ಕೂಡಲೇ ನೊಂದ ಕುಟುಂಬಗಳಿಗೆ ನ್ಯಾಯ ದೊರಕಿಸಿ ಕಾನೂನಿನ ಪ್ರಕಾರ ಸಂಬಂಧಪಟ್ಟ ಕುಟುಂಬಗಳಿಗೆ ಎಲ್ಲ ಸವಲತ್ತುಗಳನ್ನು ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ತುಮಕೂರು ಜಿಲ್ಲೆಯಲ್ಲಿ ಆಡಳಿತ ಪಕ್ಷ 7 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲುವುದಕ್ಕೆ ಮಾದಿಗ ಸಮುದಾಯದ ಕೊಡುಗೆ ಅತಿ ಹೆಚ್ಚು ಇದೆ. ಆದರೆ ಸರ್ಕಾರ ಬಂದು ಎರಡು ವರ್ಷಕ್ಕಿಂತಲೂ ಹೆಚ್ಚು ಅವಧಿ ಆದರೂ ಇಂದಿನವರೆಗೆ ಮಾದಿಗ ಸಮುದಾಯದ ಯಾವುದೇ ಮುಖಂಡರುಗಳಿಗೆ ಸರ್ಕಾರದ ಯಾವುದೇ ಸ್ಥಾನಮಾನ ನೀಡದೆ ಈ ಸಮುದಾಯವನ್ನು ಅತ್ಯಂತ ನಿಕೃಷ್ಟವಾಗಿ ಕಾಣಲಾಗುತ್ತಿದ್ದು, ಅಧಿಕಾರದಿಂದ ವಂಚಿಸಲಾಗಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಸಾಮಾಜಿಕ ನ್ಯಾಯದ ಹರಿಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಕೂಡಲೇ ಈ ಸಮುದಾಯದ ಮುಖಂಡರುಗಳಿಗೆ ಹೆಚ್ಚು ನಿಗಮ ಮಂಡಳಿಗಳಲ್ಲಿ ಸ್ಥಾನಮಾನ ನೀಡಿ ಸಾಮಾಜಿಕ ನ್ಯಾಯ ಎತ್ತಿ ಹಿಡಿಯಬೇಕೆಂದು ಒತ್ತಾಯಿಸಲಾಯಿತು. ತಪ್ಪಿದಲ್ಲಿ ಸಮುದಾಯದಲ್ಲಿ ಇಡೀ ಸರ್ಕಾರದ ಬಗ್ಗೆ ತಪ್ಪು ಸಂದೇಶ ಹೋಗಿ ಮುಂದಿನ ದಿನಗಳಲ್ಲಿ ಇದರ ಪರಿಣಾಮವನ್ನು ಸರ್ಕಾರ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಯಿತು.
ಒಳಮೀಸಲಾತಿ ಜಾರಿಯಾದ ನಂತರ ಎಡಿ, ಎಎ, ಎಕೆ ಹೆಸರಲ್ಲಿ ನೀಡಿರುವ ಜಾತಿ ಪ್ರಮಾಣ ಪತ್ರಗಳ ಬದಲಿಗೆ ಉಪಜಾತಿಯ ಹೆಸರಿನಲ್ಲಿ ಕೂಡಲೇ ಪ್ರಮಾಣ ಪತ್ರ ನೀಡಲು ಸೂಕ್ತ ಆದೇಶ ಹೊರಡಿಸಿ ಆನಂತರ ಯಾವುದೇ ಶೈಕ್ಷಣಿಕ ಮತ್ತು ಔದ್ಯೋಗಿಕ ಸಂಸ್ಥೆಗಳ ಉದ್ಯೋಗ ಭರ್ತಿ ಮಾಡಬೇಕೆಂದು ಒತ್ತಾಯಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಒಳಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷ ಡಾ.ವೈ.ಕೆ.ಬಾಲಕೃಷ್ಣಪ್ಪ, ಜಿ.ಪಂ.ಮಾಜಿ ಸದಸ್ಯ ಕೆಂಚಮಾರಯ್ಯ, ನಗರಸಭೆ ಮಾಜಿ ಸದಸ್ಯ ನರಸೀಯಪ್ಪ, ನರಸಿಂಹಯ್ಯ, ಶಿವಕುಮಾರ್, ಕೊಡಿಯಾಲ ಮಹಾದೇವ್, ಡಿ.ಟಿ.ವೆಂಕಟೇಶ್, ಶಿವನಂಜಪ್ಪ, ನರಸಿಂಹರಾಜು, ಹೆತ್ತೇನಹಳ್ಳಿ ಮಂಜುನಾಥ್ ಇದ್ದರು.


