ಟೋಕಿಯೋ ಪ್ಯಾರಾಲಂಪಿಕ್ ಕ್ರೀಡಾಕೂಟದಲ್ಲಿ ಮಹಿಳಾ ಶೂಟರ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿರುವ ಜಯಪುರ ಮೂಲದ ಆಟಗಾರ್ತಿ ಅವನಿ ಲೇಖರ ಅವರಿಗೆ ರಾಜಸ್ಥಾನ ಸರ್ಕಾರ 3 ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ.
ಪ್ಯಾರಾಲಂಪಿಕ್ಸ್ ನಲ್ಲಿ ರಾಜಸ್ಥಾನದ 3 ಮಂದಿ ಪದಕ ಗೆದ್ದಿದ್ದಾರೆ. ಇದರಲ್ಲಿ ಅವನಿ ಅವರು ಚಿನ್ನದ ಪದಕ ತಂದು ದೇಶಕ್ಕೆ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಹಾಗಾಗಿ 3 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ.
ಅದೇ ರೀತಿ ಟೋಕಿಯೋ ಕ್ರೀಡಾಕೂಟದಲ್ಲಿ ಭಾರತದ ಪರವಾಗಿ ಭಾಗವಹಿಸಿ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿರುವ ದೇವೇಂದ್ರ ಜಜಾರಿಯಾ ಅವರಿಗೆ 2 ಕೋಟಿ ರೂಪಾಯಿ ಮತ್ತು ಸಿಂಗ್ ಗುಮಜಾರ್ ಅವರಿಗೆ 1 ಕೋಟಿ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಗೆಹ್ಲೋಟ್ ಘೋಷಿಸಿದ್ದಾರೆ.
ಈಗಾಗಲೇ ಈ ಮೂವರು ಕ್ರೀಡಾಪಟುಗಳಿಗೆ ರಾಜಸ್ಥಾನ ಸರ್ಕಾರ ಅರಣ್ಯ ಇಲಾಖೆಯಲ್ಲಿ ಅಸಿಸ್ಟೆಂಟ್ ಕನ್ಸರ್ವೇಟರ್ ಫಾರೆಸ್ಟ್ ಹುದ್ದೆಯನ್ನು ನೀಡಿ ಗೌರವಿಸಿದೆ. ಈ ಮೂವರು ರಾಜಸ್ಥಾನದ ಹೆಮ್ಮೆಯ ರತ್ನಗಳು. ಲೇಖರ ಚಿನ್ನ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ ಎಂದು ಹೇಳಿದ್ದಾರೆ.
ಶೂಟರ್ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಅವನಿ ಲೇಖರ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಕ್ರೀಡಾ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಇದು ನಮಗೆ ಹೆಮ್ಮೆಯ ಸಂಗತಿ ಎಂದು ಬಣ್ಣಿಸಿದ್ದಾರೆ.