ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾ ಒಲಂಪಿಕ್ ಕ್ರೀಡಾಕೂಟದಲ್ಲಿ ಭಾರತದ ಅಥ್ಲೇಟ್ ನಿಶಾದ್ ಕುಮಾರ್ ಎತ್ತರ ಜಿಗಿತದಲ್ಲಿ ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕ ಗಳಿಸಿದ್ದಾರೆ.
ಎತ್ತರಜಿಗಿತ (ಟಿ47) ವಿಭಾಗದಲ್ಲಿ ನಿಶಾದ್ ಕುಮಾರ್ ಅಂತಿಮ ಸುತ್ತಿನಲ್ಲಿ 2.06 ಮೀಟರ್ ಎತ್ತರ ಜಿಗಿದು ಎರಡನೇ ಸ್ಥಾನ ಗಳಿಸಿದರು. ಇದರೊಂದಿಗೆ ಏಷ್ಯನ್ ದಾಖಲೆಯನ್ನು ಸರಿಗಟ್ಟಿದರು.
ಅಮೆರಿಕಾದ ರೊಡ್ರಿಕ್ ಟೌನ್ ಸೆಂಡ್ ಅಂತಿಮ ಸುತ್ತಿನಲ್ಲಿ 2.15ಮೀಟರ್ ಎತ್ತರ ಜಿಗಿದು ಮೊದಲ ಸ್ಥಾನ ಪಡೆದರು. ಜೊತೆಗೆ ಎತ್ತರ ಜಿಗಿತದಲ್ಲಿ ಹೊಸ ವಿಶ್ವದಾಖಲೆ ಬರೆದರು.
ಪ್ಯಾರಾ ಒಲಂಪಿಕ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಎರಡು ಬೆಳ್ಳಿ ಪದಕಗಳು ಲಭಿಸಿದಂತಾಗಿದೆ. ನಿಶಾದ್ ಕುಮಾರ್ ಸಾಧನೆಗೆ ಪ್ರಧಾನಿ ನರೇಂದ್ರ ಅಭಿನಂದನೆ ಸಲ್ಲಿಸಿದ್ದಾರೆ.
ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಟ್ವೀಟ್ ಮಾಡಿ “ಒಲಂಪಿಕ್ ಕ್ರೀಡಾಕೂಟದಲ್ಲಿ ವ್ಯವಸ್ಥೆ ಎಲ್ಲಾ ವಿಶೇಷಚೇತನರಿಗೆ ಸಮಾನ ಅವಕಾಶಗಳನ್ನು ನೀಡಿದಾಗ ನಮ್ಮ ಅಥ್ಲೆಟ್ಸ್ ಗಳು ಹೆಚ್ಚಿನ ಪದಕಗಳನ್ನು ತರುತ್ತಾರೆ” ಎಂದು ಹೇಳಿ ನಿಶಾದ್ ಕುಮಾರ್ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ ನಿಶಾದ್ ಅವರಿಗೆ ಅಭಿನಂದನೆ ಹೇಳಿದ್ದಾರೆ. ಉತ್ತಮ ಪ್ರಗತಿ ಸಾಧಿಸಿದ್ದಾರೆ. ಇದು ದೇಶದ ಹೆಮ್ಮೆಯ ವಿಷಯ ಎಂದು ಬಣ್ಣಿಸಿದ್ದಾರೆ.