Thursday, January 29, 2026
Google search engine
Homeಮುಖಪುಟಕೆ.ಎನ್.ರಾಜಣ್ಣ ವಜಾ ಖಂಡಿಸಿ ತುಮಕೂರಿನಲ್ಲಿ ಧರಣಿ-ಮತ್ತೆ ಸಚಿವ ಸ್ಥಾನ ನೀಡಲು ಆಗ್ರಹ

ಕೆ.ಎನ್.ರಾಜಣ್ಣ ವಜಾ ಖಂಡಿಸಿ ತುಮಕೂರಿನಲ್ಲಿ ಧರಣಿ-ಮತ್ತೆ ಸಚಿವ ಸ್ಥಾನ ನೀಡಲು ಆಗ್ರಹ

ಕೆ.ಎನ್.ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿರುವುದನ್ನು ಖಂಡಿಸಿ, ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿ ಅಹಿಂದ ವರ್ಗ, ಸಾಹಿತಿಗಳು, ಕೆಎನ್‌ಆರ್ ಅಭಿಮಾನಿ ಬಳಗ ಹಾಗೂ ವಿವಿಧ ಸಮಾಜದ ಮುಖಂಡರು ತುಮಕೂರಿನ ಡಿಸಿ ಕಚೇರಿ ಬಳಿ ಸೋಮವಾರ ಧರಣಿ ಸತ್ಯಾಗ್ರಹ ನಡೆಸಿದರು.

ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಆಗಮಿಸಿದ್ದ ಮುಖಂಡರು, ಕೆ.ಎನ್.ರಾಜಣ್ಣನವರು ದೇವರಾಜ ಅರಸು ಅವರ ತತ್ವಾದರ್ಶಗಳನ್ನು ತಮ್ಮ ರಾಜಕೀಯ ಬದುಕಿನಲ್ಲಿ ಅಳವಡಿಸಿಕೊಂಡು ಅವರಂತೆಯೇ ಹಿಂದುಳಿದ ವರ್ಗ, ಶೋಷಿತರ ಧ್ವನಿಯಾಗಿ ನೆರವಿಗೆ ನಿಂತವರು. ಕೆ.ಎನ್.ರಾಜಣ್ಣ ಅವರಂತಹ ಪ್ರಭಾವಿ ನಾಯಕರ ವಿರುದ್ಧ ಕ್ರಮ ತೆಗೆದುಕೊಂಡಾಗಲೆಲ್ಲಾ ಕಾಂಗ್ರೆಸ್ ಹೀನಾಯ ಸ್ಥಿತಿ ಅನುಭವಿಸಿತ್ತು.ಪಕ್ಷದ ಸಂಘಟನಾ ಕೊರತೆ ಹಾಗೂ ನಿಷ್ಠಾವಂತರ ಕಡಿಗಣನೆಯೂ ಇದಕ್ಕೆ ಕಾರಣ. ಮುಖ್ಯಮಂತ್ರಿಯಾಗಿ ಜನಪರ ಕಾರ್ಯಕ್ರಮ ಜಾರಿಗೆ ತಂದು ಜನರ ಮೆಚ್ಚುಗೆಗೆ ಪಾತ್ರರಾದ ದೇವರಾಜ ಅರಸು ಅವರನ್ನೇ ಕಾಂಗ್ರೆಸ್ ಪಕ್ಷ ಕಡೆಗಣಿಸಿತ್ತು. ಅರಸು ಅವರ ದಾರಿಯಲ್ಲಿ ಸಾಗಿರುವ ಕೆ.ಎನ್.ರಾಜಣ್ಣನವರನ್ನೂ ಕಾಂಗ್ರೆಸ್ ಹೈಕಮಾಂಡ್ ಸಂಪುಟದಿಂದ ವಜಾಗೊಳಿಸಿರುವುದು ವಿಷಾದನೀಯ ಎಂದು ಹೇಳಿದರು.

ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಧನಿಯಾಕುಮಾರ್ ಮಾತನಾಡಿ, ಕೆ.ಎನ್.ಆರ್ ಕಾಂಗ್ರೆಸ್ ಪಕ್ಷದ ಸಂಘಟನೆಯ ಶಕ್ತಿಯಾಗಿದ್ದಾರೆ. ಜಿಲ್ಲೆಯ ಅನೇಕ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣರಾಗಿದ್ದಾರೆ. ಇಂತಹ ನಾಯಕನನ್ನು ಸಚಿವ ಸಂಪುಟದಿಂದ ವಜಾಗೊಳಿಸಿ ಅಪಮಾನ ಮಾಡಿರುವುದು ಅವರ ಅಪಾರ ಅಭಿಮಾನಿಗಳಿಗೆ ನೋವಾಗಿದೆ. ಕೂಡಲೇ ಅವರಿಗೆ ಮತ್ತೆ ಮಂತ್ರಿ ಸ್ಥಾನ ನೀಡಬೇಕು. ತಳಸಮುದಾಯಗಳನ್ನು ಗುರುತಿಸಿ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿ ಮಾಡಿರುವ ಅವರು ಎಲ್ಲಾ ಸಮುದಾಯಗಳೂ ಸಹಕಾರ ಕ್ಷೇತ್ರದಲ್ಲಿ ತೊಡಗಿಕೊಂಡು ಆರ್ಥಿಕವಾಗಿ ಶಕ್ತಿ ಬೆಳೆಸಿಕೊಳ್ಳಲು ಕಾರಣಕರ್ತರಾಗಿದ್ದಾರೆ ಎಂದರು.

ವಾಲ್ಮೀಕಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪುರುಷೋತ್ತಮ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಜಿ.ಜೆ.ರಾಜಣ್ಣ, ಜಿ.ಎನ್.ಮೂರ್ತಿ, ನಾಗೇಶ್‌ ಬಾಬು, ಲಕ್ಷ್ಮೀನಾರಾಯಣ, ನಗರಸಭೆ ಮಾಜಿ ಅಧ್ಯಕ್ಷ ಟಿ.ಪಿ.ಮಂಜುನಾಥ್, ಮುಖಂಡರಾದ ನಾರಾಯಣಗೌಡ, ಚಂದ್ರಗಿರಿ ಲಕ್ಷ್ಮೀ ನಾರಾಯಣ, ಮಲ್ಲಸಂದ್ರ ಶಿವಣ್ಣ, ಕಿಡಿಗಣ್ಣಪ್ಪ, ಮುರಳಿಕೃಷ್ಣಪ್ಪ, ಎಂ.ಎಚ್.ನಾಗರಾಜು, ಕೆ.ವಿ.ಕೃಷ್ಣಮೂರ್ತಿ, ಕುಂಕುಮನಹಳ್ಳಿ ಕುಮಾರ್, ಎಂ.ಎನ್.ಕೆ.ರಾಜು, ಟಿ.ಆರ್.ಸುರೇಶ್, ಬಸವರಾಜು, ಶಿವಾನಂದ್, ಡ್ಯಾಗೇರಹಳ್ಳಿ ವಿರೂಪಾಕ್ಷ, ರಾಘವೇಂದ್ರ, ಜಿಯಾ, ಶ್ರೀನಿವಾಸ್, ಗುರುಮೂರ್ತಿ, ನವರತ್ನಕುಮಾರ್, ಶಿವಕುಮಾರ್, ರಮೇಶ್, ಗಂಗಾಧರ್, ಶಿವಣ್ಣ, ಜಿ.ಆರ್.ನಾಗರಾಜು, ರಮೇಶ್ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular