ನಾಡೋಜ ಬರಗೂರು ರಾದ್ರಪ್ಪನವರ ನಿರ್ದೇಶನದ ಸ್ವಪ್ನ ಮಂಟಪ ಚಿತ್ರ ಸುಮಾರು ಇಪ್ಪತೈದು ವರ್ಷಗಳ ಹಿಂದೆ ಬರೆದ ಅವರದೇ ಕಾದಂಬರಿ ಚಲನಚಿತ್ರವಾಗಿ ತಮ್ಮ ನಿರ್ದೇಶನದಲ್ಲಿ ಬಿಡುಗಡೆಗೊಂಡಿದೆ.
ಈ ಚಿತ್ರವು ಜಾಗತೀಕರಣ, ಖಾಸಗೀಕರಣ ಹಾಗೂ ಉದಾರೀಕರಣದ ನೀತಿಗಳಿಂದಾಗಿ ತಲೆ ಎತ್ತಿರುವ ಮಾಫಿಯಾಗಳ ಸ್ವಾರ್ಥಕ್ಕೆ ವ್ಯವಸ್ಥೆ ಬಲಿಯಾಗುತ್ತಿರುವ ಸನ್ನಿವೇಶವನ್ನು ವಾಸ್ತವದ ನೆಲೆಗಟ್ಟಿನಲ್ಲಿ ಈ ಚಿತ್ರ ತೆರೆದಿಡುತ್ತದೆ. ಸ್ವಪ್ನ ಮಂಟಪ ಕಾಲ್ಪನಿಕ ಕಥೆಯಾದರೂ ಸಮಕಾಲೀನ ಸಂದರ್ಭದಲ್ಲಿ ನಡೆಯಬಹುದಾದ ಬಂಡವಾಳ ಹಾಗೂ ಅಧಿಕಾರಶಾಹಿಗಳ ವಿಕ್ಷಿಪ್ತ ಹಾಗೂ ವಿಲಕ್ಷಣ ಧೋರಣೆಗಳನ್ನು ಪ್ರತಿರೋಧಿಸುತ್ತದೆ.
ಅಧಿಕಾರ ಮತ್ತು ಹಣ ಬಲವಿದ್ದರೆ ಯಾವುದನ್ನು ಬೇಕಾದರೂ ದಕ್ಕಿಸಿಕೊಳ್ಳಬಲ್ಲೆವು ಎಂಬ ಮಾಫಿಯಾಗಳ ಸಮಾಜ ವಿರೋಧಿ ನಿಲುವುಗಳನ್ನು ಪ್ರತಿರೋದಿಸುತ್ತದೆ.
ಕಥಾ ನಾಯಕನಾದ ಶಿವಕುಮಾರ್ ಹಾಗೂ ನಾಯಕಿಯಾದ ಮಂಜುಳ ಜನಚಳವಳಿಗಳ ಮೂಲಕ ಬಂಡವಾಳಶಾಹಿಯಾದ ಭೀಮರಾಜುವಿನ ನಡೆಗೆ ತಡೆ ಒಡ್ಡುವುದು ಜನಪರ ಚಳವಳಿಗಳಿಗೆ ಸಿಕ್ಕ ಜಯವಾಗಿದೆ.
ಸ್ವಪ್ನ ಮಂಟಪವನ್ನು ಕೆಡವಿ ರೆಸಾರ್ಟ್ ನಿರ್ಮಿಸುವ ಭೀಮರಾಜುವಿನ ಆಸೆ ಈಡೇರುವುದಿಲ್ಲ. ಇದು ಕೇವಲ ಸ್ವಪ್ನ ಮಂಟಪದ ಕಥೆ ಮಾತ್ರ ಆಗಿರದೆ, ಪಾರಂಪರಿಕ ಹಾಗೂ ಸಾರ್ವಜನಿಕ ತಾಣಗಳನ್ನು ಬಂಡವಾಳಿಗರು ಮೊಗೆದು ಮುಕ್ಕುತ್ತಿರುವ ಈ ಸನ್ನಿವೇಶಕ್ಕೆ ಈ ಚಿತ್ರ ಮುಖಾ ಮುಖಾಮುಖಿಯಾಗಿ ನಿಲ್ಲಬಲ್ಲದು. ನಾಯಕ ನಟ ವಿಜಯರಾಘವೇಂದ್ರ, ನಾಯಕಿಯಾಗಿ ರಂಜನಿ ರಾಘವನ್ ರವರು ದ್ವಿಪಾತ್ರದಲಿ ನಟಿಸಿದ್ದು ಇವರಿಬ್ಬರ ನಟನೆ ಮನೋಜ್ಞವಾಗಿ ಮೂಡಿ ಬಂದಿದೆ.

ರಾಜ ಚಂಡೆರಾಯ ಹಿರಿಯ ರಾಣಿ ಇದ್ದಾಗಲೂ ತನ್ನ ಮಗಳ ವಯಸ್ಸಿನವಳಾದ ಮದನಿಕೆಯನ್ನು ಬಲವಂತವಾಗಿ ವರಿಸಿದ್ದಾನೆ. ಹೆಣ್ಣಿನ ಒಳ ಬೇಗುದಿಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಚಂಡೆರಾಯ ಸೋಲುತ್ತಾನೆ. ಅದಕ್ಕೆ ಆತನ ವಯಸ್ಸು ಕಾರಣವಾಗುತ್ತದೆ. ಮದನಿಕೆ ತನ್ನ ಅಭಿಪ್ಸೆಗೆ ಹಾತೊರೆಯುವುದು ವಿಲಕ್ಷಣವೆನಿಸಿದರೂ ಸಹಜವೆಂಬಂತೆ ತೋರುತ್ತದೆ.
ಈ ಚಿತ್ರದಲ್ಲಿ ಸಮಾಜ ವಿಜ್ಞಾನ ಶಿಕ್ಷಕಿ ಸ್ವಪ್ನ ಮಂಟಪವಿರುವ ಊರಿಗೆ ಬರುತ್ತಾಳೆ, ತನ್ನ ತಂದೆಯ ಸ್ನೇಹಿತರ ಮನೆಯಲ್ಲಿ ಇರುತ್ತಾಳೆ. ಊರಿನ ಮುಖಂಡ ಸಿದ್ದಪ್ಪನವರ ಮಗ ಶಿವಕುಮಾರನ ಸ್ನೇಹವಾಗಿ ಅದೇ ಸ್ನೇಹ ಪ್ರೀತಿಯಾಗಿ ಇಬ್ಬರೂ ವಿವಾಹವಾಗುತ್ತಾರೆಂಬ ಕಲ್ಪನೆ ಮೂಡುತ್ತದೆಯಾದರೂ ಕೊನೆಯಲ್ಲಿ ಈ ಚಿತ್ರದ ಮುನ್ನೊಟವನ್ನೇ ನಿರ್ದೇಶಕ ಬರಗೂರು ರಾಮಚಂದ್ರಪ್ಪನವರು ಬದಲಿಸಿ ಚಿತ್ರಕ್ಕೊಂದು ಪ್ರೀತಿಯ ನ್ಯಾಯವೊಂದನ್ನು ದೊರಕಿಸಿಕೊಟ್ಟಿದ್ದಾರೆ.
ಚಿತ್ರದ ನಾಯಕಿ ತೆಗೆದುಕೊಳ್ಳುವ ನಿರ್ಧಾರ ಹೆಣ್ಣಿಗೆ ಹೆಣ್ಣೇ ಶತೃವಲ್ಲ, ಮಿತ್ರಳೂ ಆಗಬಲ್ಲಳು. ತನ್ನಂತೆ ಇರುವ ಹೆಣ್ಣಿನ ಮನೋಭಾವವನ್ನು ಅರ್ಥ ಮಾಡಿಕೊಳ್ಳಬಲ್ಲಳು ಎಂಬ ಸಂದೇಶವೂ ಈ ಚಿತ್ರ ನೀಡುತ್ತದೆ.
ಇನ್ನು ಈ ಚಿತ್ರದಲ್ಲಿ ಚಂಡೆರಾಯನಾಗಿ ರಾಜಪ್ಪ ದಳವಾಯಿ ಅವರ ಪಾತ್ರ ಕಥಾ ಹಂದರಕ್ಕೆ ತಕ್ಕಂತೆ ಮನೋಜ್ಞವಾಗಿ ಮೂಡಿಬಂದಿದೆ. ಮುಖ್ಯೋಪಾಧ್ಯಾಯರಾದ ಸುಂದರರಾಜ ಅರಸು ರವರ ಅಭಿನಯ ಶಿಕ್ಷಕರಾದವರಿಗೆ ಸಮಾಜಮುಖಿ ಚಿಂತನೆ ಹಾಗೂ ಸಮಾಜದ ಬಗ್ಗೆ ಕಳಕಳಿ ಇರಬೇಕೆಂಬ ಸಂದೇಶವನ್ನು ನೀಡಿದೆ.
ಚಿತ್ರದಲ್ಲಿನ ಹಾಡುಗಳಿಗೆ ಬರಗೂರರ ಸಾಹಿತ್ಯವಿದೆ, ಶಮಿತಾ ಮಲ್ನಾಡ್‌ರವರ ರಾಗ ಸಂಯೋಜನೆ ಚಿತ್ರಕ್ಕೆ ಮೆರುಗು ತಂದಿದೆ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯದ ಹೊಣೆ ಹೊತ್ತಿರುವ ಬರಗೂರರು ತಾವು ನಂಬಿಕೊಂಡು ಬಂದಿರುವ ಸಿದ್ದಾಂತಕ್ಕೆ ಧಕ್ಕೆಯಾಗದಂತೆ ಚಿತ್ರವನ್ನು ನಿರ್ದೇಶಿಸಿದ್ದಾರೆ. ಭೂಗತ ಲೋಕದ ವಿಷಯ ವಸ್ತುಗಳು ಮನರಂಜನೆ, ಹೊಡೆದಾಟ, ಬಡಿದಾಟಗಳೇ ಪ್ರಧಾನವಾಗುತ್ತಿರುವ ಇಂದಿನ ಕಾಲದಲ್ಲಿ, ಎದೆ ನಡುಗಿಸುವ ಅಬ್ಬರದ ಶಬ್ದಾಡಂಬರವಿಲ್ಲದೆ ನವಿರಾದ ಸಂಭಾಷಣೆಯ ಮೂಲಕ ಕಲಾತ್ಮಕವೂ, ಗುಣಾತ್ಮಕವೂ ಆದ ಸ್ವಪ್ನ ಮಂಟಪದ ಚಿತ್ರವು ಪ್ರೇಕ್ಷಕರನ್ನು ತಣಿಸಬಲ್ಲದು.
ಧನಾರ್ಜನೆಂಯೇ ಮುಖ್ಯವಲ್ಲ ಜ್ಞಾನಾರ್ಜನೆಯೂ ಮುಖ್ಯ, ಸಂಘರ್ಷವೇ ಮುಖ್ಯವಲ್ಲ, ಸಂವೇದನಾಶೀಲ ಮಾತುಗಳು ಮುಖ್ಯ ಎಂಬ ಸ್ವಪ್ನ ಮಂಟಪ ಚಿತ್ರ ನಿರ್ಮಾಣಕ್ಕೆ ಕೈ ಹಾಕಿರುವ ಎ.ಎಂ.ಬಾಬು ನಾಯಕ್ ರವರ ಔದಾರ್ಯ, ಸಾಮಾಜಿಕ ಕಳಕಳಿ, ಮೆಚ್ಚುವಂತಹದ್ದಾಗಿದೆ.
ಚಿತ್ರದಲ್ಲಿನ ಹಾಡುಗಳು ಭಾವ ಮತ್ತು ಅರ್ಥವನ್ನು ಇಮ್ಮಡಿಗೊಳಿಸುತ್ತವೆ. ಪ್ರತಿಯೊಂದು ಪದವೂ ಸಹ ಮನೋವಿಕಲ್ಪಗಳಿಗೆ ಹೊರದಾರಿ ಹುಡುಕುತ್ತಾ ಹಿತವಾದ ತಣ್ಣನೆ ಅನುಭವ ನೀಡಬಲ್ಲವು.
ಲೇಖಕರು ಎಚ್. ಗೋವೀಂದಯ್ಯ,
ಕನ್ನಡ ಉಪನ್ಯಾಸಕರು, ತುಮಕೂರು


