ಕರ್ನಾಟಕ ಸರ್ಕಾರ ನ್ಯಾ.ನಾಗಮೋಹನ್ ದಾಸ್ ವರದಿ ಅಂಗೀಕರಿಸುವ ಮೂಲಕ ಐತಿಹಾಸಿಕ ಹೆಜ್ಜೆ ಇಟ್ಟಿದೆ. ಅದಕ್ಕಾಗಿ ಸಿದ್ದರಾಮಯ್ಯನವರ ನೇತೃತ್ವದ ಸಚಿವ ಸಂಪುಟವನ್ನು ಅಭಿನಂದಿಸುತ್ತೇನೆ. ಆದರೆ ನೀವು ಎಡಗೈ 6% ಬಲಗೈ 6% ಹಾಗೂ ಸ್ಪರ್ಶ, ಅಲೆಮಾರಿ 5% ಈ ರೀತಿ ತೀರ್ಮಾನ ಮಾಡಿರುವುದು ಮಾಧ್ಯಮಗಳ ತಿಳಿದು ಬಂದಿದೆ.
ಈ ತೀರ್ಮಾನ ಅಲೆಮಾರಿಗಳ ಪಾಲಿಗೆ ಮರಣ ಶಾಸನವೇ ಸರಿ. ಏಕೆಂದರೆ ಮೂರು ದಶಕಗಳಿಂದಲೂ ಒಳ ಮೀಸಲಾತಿಯನ್ನು ಕೇಳುತ್ತಿದ್ದ ಉದ್ದೇಶ ಏನೆಂದರೆ, ಸ್ಪರ್ಶ ಸಮುದಾಯಗಳು ಕಡಿಮೆ ಜನಸಂಖ್ಯೆ ಹೊಂದಿದ್ದು, ಹೆಚ್ಚು ಪಾಲು ಪಡೆಯುತ್ತಿದ್ದಾರೆ ಎನ್ನುವ ಕಾರಣ ಅಲ್ಲವೇ? ಮಾದಿಗ ಸಮುದಾಯ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸಿಗಬೇಕು ಎಂದು ಹೋರಾಟವನ್ನು ಮಾಡುತ್ತಲ್ಲೇ ಬಂದಿದ್ದು. ಈ ಹಾವು-ಏಣಿ ಈ ಆಟದಲ್ಲಿ ಅನಾಯಾಸವಾಗಿ 6% ಮೀಸಲಾತಿಯನ್ನು ಪಡೆದು ‘ಮ್ಯಾನ್ ಆಫ್ ದಿ ಮ್ಯಾಚ್ ಆದವರು ಹೊಲೆಯರೇ ‘ಎಂದು ಬಿಡಿಸಿ ಹೇಳಬೇಕಾದ ಅಗತ್ಯವಿಲ್ಲ.
ಸ್ಪರ್ಶ ಸಮುದಾಯಗಳೊಂದಿಗೆ ಸ್ಪರ್ಧೆಗಿಳಿಯುವುದು ಅಸಾಧ್ಯವೆಂತಲೂ, ಮತ್ತು ಅವರು ನಮ್ಮ ಪಾಲನ್ನು ಕಸಿಯುತ್ತಿದ್ದಾರೆ ಎಂತಲೂ,ಒಳ ಮೀಸಲಾತಿ ಕೇಳುತ್ತಿದ್ದಿದ್ದು ಅಲ್ಲವೇ? ಬಹು ಸಂಖ್ಯಾತರು, ಬಲಢ್ಯರು, ಆದ ಹೊಲೆ-ಮಾದಿಗರಿಗೆ ಇದು ಸಾಧ್ಯವಿಲ್ಲ ಅಂದ ಮೇಲೆ! ಇನ್ನೂ ಕಾಲೇಜು ಮೆಟ್ಟಿಲು ಹತ್ತದ, ಉದ್ಯೋಗವಂತೂ ಮರೀಚಿಕೆಯಾಗಿರುವ, ಅಲ್ಪಸಂಖ್ಯಾತರು ಆಗಿರುವ, ನೆಲೆ ಇಲ್ಲದೆ ಕಡು ಬಡತನದಲ್ಲಿ ಜೀವಿಸುತ್ತಿರುವ, ಅಲೆಮಾರಿಗಳಿಗೆ ಸ್ಪರ್ಶ ಸಮುದಾಯಗಳೊಂದಿಗೆ ಪೈಪೋಟಿಗಿಳಿಯಲು
ಸಾಧ್ಯವೇ? ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.
“ಬೆಂಕಿಯಿಂದ ತಗೆದು ಬಾಂಡ್ಲಿಗೆ ಹಾಕಿದಂತಿದೆ “ಅವರ ಪಾಡು ಆದುದರಿಂದ ಸರ್ಕಾರ ಕೂಡಲೇ ನ್ಯಾ.ನಾಗಮೋಹನ ದಾಸ್ ಅವರು ಹೇಳಿರುವಂತೆ ಅಲೆಮಾರಿಗಳಿಗೆ ಪ್ರತ್ಯೇಕವಾಗಿ 1% ಮೀಸಲಾತಿಯನ್ನು ನೀಡಿದರೆ ಮಾತ್ರ ಅವರಿಗೆ ಸಾಮಾಜಿಕ ನ್ಯಾಯ ಸಿಕ್ಕಿದಂತಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಯೋಚಿಸಿ ಮಾನವೀಯ ಕಣ್ಣುಗಳಿಂದ ನೋಡಲಿ.
ಡಾ. ಶಿವಣ್ಣ ತಿಮ್ಲಾಪುರ.
ಅಧ್ಯಕ್ಷರು. ಮಾತಂಗ ಸಾಂಸ್ಕೃತಿಕ ಮತ್ತು ಸಂಶೋಧನ ಕೇಂದ್ರ, ತುಮಕೂರು.


