ಒಳ ಮೀಸಲಾತಿ ಕುರಿತು ಸುದೀರ್ಘ ಚರ್ಚೆ ನಡೆದು ಬಲಗೈ ಸಮುದಾಯದ ಹೊಲೆಯರಿಗೆ ಶೇ.6 ಮತ್ತು ಎಡಗೈ ಸಮುದಾಯದ ಮಾದಿಗರಿಗೆ ಶೇ.6, ಹಾಗೂ ಸ್ಪರ್ಶ ಜಾತಿಗಳಿಗೆ ಶೇ.5ರಷ್ಟು ಮೀಸಲಾತಿ ನೀಡಲು ಆಗಸ್ಟ್ 19ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಚಿವ ಸಂಪುಟದ ತೀರ್ಮಾನಕ್ಕೆ ಎಡಗೈ ಸಮುದಾಯದ ಮಾದಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಳ ಮೀಸಲಾತಿ ಮಾಹಿತಿ ಸಂಗ್ರಹಿಸಲು ರಚಿಸಿದ್ದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ನೇತೃತ್ವದ ಏಕವ್ಯಕ್ತಿ ಆಯೋಗ ಒಳಮೀಸಲಾತಿಯಲ್ಲಿ 5 ಗುಂಪುಗಳನ್ನಾಗಿ ಮಾಡಿತ್ತು. ಆದರೆ ಸಚಿವ ಸಂಪುಟ ಸಭೆಯಲ್ಲಿ ಹೊಸ ಸೂತ್ರದಂತೆ ಒಳ ಮೀಸಲಾತಿಯಲ್ಲಿ 3 ಗುಂಪುಗಳನ್ನಾಗಿ ವಿಂಗಡಿಸಿ ಮಾದಿಗ ಸಂಬಂಧಿ ಜಾತಿಗಳಿಗೆ ಶೇ.6ರಷ್ಟು ಮತ್ತು ಹೊಲಯ ಸಂಬಂಧಿ ಜಾತಿಗಳಿಗೆ 6ರಷ್ಟು ಹಾಗೂ ಸ್ಪರ್ಶ ಜಾತಿಗಳಾದ ಲಂಬಾಣಿ, ಭೋವಿ, ಕೊರಚ, ಕೊರಮ, ಹಂದಿಜೋಗಿ ಸಮುದಾಯಕ್ಕೆ ಶೇ.5ರಷ್ಟು ಮೀಸಲಾತಿಯನ್ನು ಹಂಚಿಕೆ ಮಾಡಲಾಗಿದೆ.
ಸಚಿವ ಸಂಪುಟ ಸಭೆಯಲ್ಲಿ ಮಾದಿಗರಿಗೆ ಶೇ.7ರಷ್ಟು ಮೀಸಲಾತಿಯನ್ನು ನೀಡಬೇಕು ಎಂದು ಸಚಿವ ಕೆ.ಎಚ್.ಮುನಿಯಪ್ಪ ಒತ್ತಾಯಿಸಿದರು. ಹೊಲೆಯರಿಗೆ ಅರ್ಧದಷ್ಟು ಮೀಸಲಾತಿ ನೀಡಬೇಕೆಂದು ಡಾ.ಜಿ.ಪರಮೇಶ್ವರ್ ಮತ್ತು ಎಚ್.ಸಿ.ಮಹದೇವಪ್ಪ ಆಗ್ರಹಿಸಿದರು ಎಂದು ಮಾಧ್ಯಮಗಳು ತಿಳಿಸಿವೆ.

ಒಳ ಮೀಸಲಾತಿ ಜಾರಿಯಾಗಲಿದೆ ಎಂದು ರಾಜ್ಯದ ವಿವಿಧೆಡೆಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸಮಾವೇಶಗೊಂಡಿದ್ದ ನೂರಾರು ಮಾದಿಗ ಸಮುದಾಯದ ಮುಖಂಡರು ಸಚಿವ ಸಂಪುಟದ ತೀರ್ಮಾನಕ್ಕಾಗಿ ಕಾದು ಕುಳಿತರು. ಆದರೆ ಸಂಪುಟ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಧಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಬೇಸರದಿಂದ ತಮ್ಮ ಸ್ವಾಗ್ರಾಮಗಳಿಗೆ ತೆರಳಿದರು.
ಮೀಸಲಾತಿ ಹಂಚಿಕೆ ಬಗ್ಗೆ ದಿ ನ್ಯೂಸ್ ಕಿಟ್. ಕಾಮ್ ಜೊತೆ ಮಾತನಾಡಿದ ಚಿಂತಕ ಕೆ.ದೊರೈರಾಜ್ ಸಂಪುಟದ ತೀರ್ಮಾನಕ್ಕೆ ಬೇಸರ ವ್ಯಕ್ತಪಡಿಸಿದರು. ’30 ವರ್ಷಗಳಿಂದ ಒಳಮೀಸಲಾತಿ ಜಾರಿಗಾಗಿ ಹೋರಾಟ ಮಾಡಿಕೊಂಡು ಬಂದ ಮಾದಿಗ ಸಮುದಾಯಕ್ಕೆ ಶೆ.6ರಷ್ಟು ಮೀಸಲಾತಿ ನೀಡಲಾಗಿದೆ. ಹೋರಾಟ ಮಾಡದ ಹೊಲಯರಿಗೆ ಶೇ.6ರಷ್ಟು ಮೀಸಲಾತಿ ನೀಡಿದೆ. ಹೋರಾಟ ನಡೆದ ಭೋವಿ, ಲಂಬಾಣಿ ಶೇ.5ರಷ್ಟು ಮೀಸಲಾತಿ ಕೊಟ್ಟಿದೆ. ಇದರಲ್ಲಿ 56 ಅಲೆಮಾರಿ ಜಾತಿಗಳಿಗೆ ಅನ್ಯಾಯವಾಗಿದೆ. ಅಲೆಮಾರಿ ಜಾತಿಗಳು ಹಾಳಾಗಿ ಹೋದವು ಎಂದು ತೀವ್ರ ಅಸಮಾಧಾನ ಹೊರ ಹಾಕಿದರು.
ಲೇಖಕ ಡಾ.ರವಿಕುಮಾರ್ ನೀ.ಹ ಮಾತನಾಡಿ ಇದು ಸಮಪಾಲು ನೀಡಿದ್ದಲ್ಲ, ಕೇವಲ ಹಂಚಿಕೆ ಮಾಡಲಾಗಿದೆ. ಇದರಿಂದ ಮಾದಿಗರಿಗೆ ಅನ್ಯಾಯವಾಗಿದೆ ಎಂದು ಬೇಸರದಿಂದ ನುಡಿದರು.


