Thursday, January 29, 2026
Google search engine
Homeಮುಖಪುಟರಾಜ್ಯದ ನೂತನ ಶಿಕ್ಷಣ ನೀತಿ ಸ್ವೀಕರಿಸಿದ ರಾಜ್ಯ ಸರ್ಕಾರದ ನಿರ್ಧಾರ ಐತಿಹಾಸಿಕ-ವಿಮರ್ಶಕ ಕೆ.ಪಿ.ನಟರಾಜ್

ರಾಜ್ಯದ ನೂತನ ಶಿಕ್ಷಣ ನೀತಿ ಸ್ವೀಕರಿಸಿದ ರಾಜ್ಯ ಸರ್ಕಾರದ ನಿರ್ಧಾರ ಐತಿಹಾಸಿಕ-ವಿಮರ್ಶಕ ಕೆ.ಪಿ.ನಟರಾಜ್

ಪ್ರೊ.ಸುಖದೇವ್ ಥೋರಟ್ ಆಯೋಗ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ರಾಜ್ಯದ ನೂತನ ಶಿಕ್ಷಣ ನೀತಿಯನ್ನು ಸ್ವೀಕರಿಸಿರುವ ರಾಜ್ಯ ಸರ್ಕಾರದ ನಿರ್ಧಾರ ಐತಿಹಾಸಿಕವಾದುದು. ಆದರೆ ವರದಿಯಲ್ಲಿ ಕನ್ನಡ ಅಥವಾ ಮಾತೃ ಭಾಷೆ ಮತ್ತು ಇಂಗ್ಲೀಷ್ ಅಂತ ಇದೆ. ಇದು ಬಹಳ ದೊಡ್ಡ ಗೊಂದಲಕ್ಕೆ ಮತ್ತು ಚರ್ಚೆಗೆ ಎಡೆಮಾಡಿಕೊಟ್ಟಿದೆ. ಕನ್ನಡ ಅಥವಾ ಮಾತೃಭಾಷೆ ಅಂದಾಗ ಕನ್ನಡದ ಬದಲಿಗೆ ಇನ್ಯಾವುದೇ ಭಾಷೆಯನ್ನು ಕೂಡ ಒಂದು ಭಾಷೆಯಾಗಿ ಕಲಿಯುವಂತಹ ವಾತಾವರಣವನ್ನು ಸೃಷ್ಟಿಸಿದೆ ಎಂದು ಹಿರಿಯ ವಿಮರ್ಶಕ ಕೆ.ಪಿ.ನಟರಾಜ್ ಹೇಳಿದರು.

ತುಮಕೂರಿನ ಅಮಾನಿಕೆರೆ ರಸ್ತೆಯಲ್ಲಿರುವ  ಜಿಲ್ಲಾ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಿದ್ದ ಕರ್ನಾಟಕ ರಾಜ್ಯ ನೂತನ ಶಿಕ್ಷಣ ನೀತಿ, ಪ್ರೊ.ಸುಖದೇವ್ ಥೋರಟ್ ವರದಿ ಕುರಿತ ಚರ್ಚೆಯಲ್ಲಿ ಅವರು ಮಾತನಾಡಿದರು.

ಆಗಸ್ಟ್ 8ರಂದು ಆಯೋಗ ನೀಡಿರುವ ವರದಿಯ ಮುಖ್ಯಾಂಶಗಳು ಸಾರ್ವಜನಿಕರಿಗೆ ಲಭ್ಯವಾಗಿವೆ. ವರದಿಯಲ್ಲಿ 97 ಶಿಫಾರಸುಗಳನ್ನು ಮಾಡಲಾಗಿದೆ. ಈ ಶಿಫಾರಸುಗಳನ್ನು ಆಧರಿಸಿ ನಾವು ಚರ್ಚಿಸಬಹುದಾಗಿದೆ. ಈ ಪಟ್ಟಿಯಲ್ಲಿ ಎಷ್ಟು ಅಂಶಗಳು ಕರ್ನಾಟಕ, ಕನ್ನಡ ಹಾಗೂ ರಾಜ್ಯದ ಜನತೆಯ ಭವಿಷ್ಯಕ್ಕೆ ಬೆಂಬಲವಾಗಿದೆ ಎಂಬುದನ್ನು ನೋಡಿದರೆ ಕನ್ನಡ ಅಥವಾ ಮಾತೃಭಾಷೆ ಎಂದು ಹೇಳಿರುವುದು ಗೊಂದಲಕ್ಕೆ ಕಾರಣವಾಗಿದ್ದು ಇಂಗ್ಲೀಷ್ ಭಾಷೆ ಹಾಗೆಯೇ ಉಳಿದುಕೊಂಡಿದೆ.  ಆದರೆ ಕನ್ನಡ ಭಾಷೆ ಆಯ್ಕೆಯಲ್ಲಿ ಮುಕ್ತವಾಗಿ ಇಡುತ್ತದೆ ಎಂದರು.

ಸುಖದೇವ್ ಥೋರಟ್ ಮತ್ತು ನಿರಂಜನಾರಾಧ್ಯರು ಕೊಟ್ಟಿರುವ ಮಾಹಿತಿಯ ಪ್ರಕಾರ ಎರಡು ನೀತಿಗಳು ಇರುವ ಹಾಗೆ ನಾವು ಶಿಫಾರಸು ಮಾಡಿದ್ದೇವೆ. ಅದರಲ್ಲಿ ಒಂದು ದ್ವಿಭಾಷಾ ನೀತಿ, ಇನ್ನೊಂದು ತ್ರಿಭಾಷಾ ನೀತಿ ಎಂದು ಹೇಳುತ್ತಾರೆ. ದ್ವಿಭಾಷಾ ನೀತಿ ಅಂದರೆ ಅವರ ಪ್ರಕಾರ ಕನ್ನಡ ಮತ್ತು ಇಂಗ್ಲೀಷ್. ಅದರಲ್ಲಿ ಕನ್ನಡ ಅಥವಾ ಮಾತೃಭಾಷೆ ಎಂದು ಇಲ್ಲ. ಕರ್ನಾಟಕದ ಶೇ.90ರಷ್ಟು ಇಂಗ್ಲೀಷ್ ಮತ್ತು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಯಾವುದೇ ಸಮಸ್ಯೆಗೆ ಎಡೆ ಮಾಡಿಕೊಡದೆ ದ್ವಿಭಾಷಾ ನೀತಿ ಜಾರಿಗೆ ಬರುತ್ತದೆ. ಎರಡನೆಯದಾಗಿ ಅವರು ಹೇಳುತ್ತಿರುವುದು ತ್ರಿಭಾಷಾ ನೀತಿ. ಇದರಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ತ್ರಿಭಾಷಾ ನೀತಿಯ ಸ್ವರೂಪದಲ್ಲಿ ಇಲ್ಲ. ಅವರು ಹೇಳುವ ಪ್ರಕಾರ ಮೂರು ಭಾಷೆಗಳಲ್ಲಿ ಮೂರನೇ ಭಾಷೆ ಐಚ್ಛಿಕವಾದುದು ಎಂದು ಹೇಳುತ್ತಾರೆ ಎಂದು ತಿಳಿಸಿದರು.

ಥೋರಟ್ ವರದಿಯನ್ನು ಸ್ವೀಕರಿಸಿರುವ ರಾಜ್ಯ ಸರ್ಕಾರದ ನಿರ್ಧಾರ ಐತಿಹಾಸಿಕವಾದುದು ಮತ್ತು ಕರ್ನಾಟಕದ ಜನರ ಅಸ್ಮಿತೆಯನ್ನು, ಸಾಂಸ್ಕೃತಿಕ ವ್ಯಕ್ತಿತ್ವವನ್ನು ಕಟ್ಟಲಿಕ್ಕೆ ಅನುಕೂಲವಾಗುವಂತಹ ವರದಿ. ಕರ್ನಾಟಕ ಸರ್ಕಾರ ತಮಿಳುನಾಡು ಮಾದರಿಯ ಶಿಕ್ಷಣ ನೀತಿಯನ್ನು ಜಾರಿಗೆ ತರಬೇಕು. ದ್ವಿಭಾಷಾ ನೀತಿಯನ್ನು ಅನುಸರಿಸಿದರೆ ಭಾರತದ ಒಕ್ಕೂಟ ವ್ಯವಸ್ಥೆಗಾಗಲಿ ಅಥವಾ ಭಾರತದ ಬೌದ್ಧಿಕತೆಗಾಗಲಿ ಅಥವಾ ರಾಜಕಾರಣಕ್ಕಾಗಲೀ ಏನಾಗುತ್ತೆ ಎನ್ನುವುದನ್ನು ನಾವು ತಮಿಳುನಾಡು ಪರಿಸ್ಥಿತಿಯನ್ನು ಅಧ್ಯಯನ ಮಾಡಿದರೆ ತಿಳಿಯುತ್ತದೆ. 1968 ರಿಂದಲೇ ದ್ವಿಭಾಷಾ ನೀತಿ ಜಾರಿಗೆ ತರಬೇಕೆಂದು ಒತ್ತಾಯಿಸುತ್ತ ಬಂದವರು ಕುವೆಂಪು ಒಬ್ಬರೇ ಎಂದು ಹೇಳಿದರು.

ಕರ್ನಾಟಕದಲ್ಲಿ ಕಳೆದ 50 ವರ್ಷಗಳಿಂದ ಸುಮಾರು ಶೇ. 70ರಷ್ಟು ವಿದ್ಯಾರ್ಥಿಗಳು ಎಸ್ಎಸ್ಎಲ್ ಸಿ ವರೆಗೂ ಕನ್ನಡ ಮಾಧ್ಯಮದಲ್ಲಿ ಓದುತ್ತಾರೆ. ಆದರೆ ಎಸ್ಎಸ್ಎಲ್ ಸಿ ನಂತರ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಇಲ್ಲ. ಹಾಗಾಗಿ ಈ ಎಲ್ಲಾ ವಿದ್ಯಾರ್ಥಿಗಳು ಪಿಯುಸಿ ಓದುವುದಕ್ಕೆ ಪದವಿ ಶಿಕ್ಷಣ ಪಡೆಯಲು ಕನ್ನಡ ಮಾಧ್ಯಮ ಇಲ್ಲ. 5 ಲಕ್ಷ ಮಕ್ಕಳನ್ನು ನಾವು 10ನೇ ತರಗತಿಯ ನಂತರ ಅವರನ್ನು ಎಲಿಮಿನೇಟ್ ಮಾಡುತ್ತಿದ್ದೇವೆ ಎಂದರು.

ಜಿಲ್ಲಾ ಕನ್ನಡ ಸಾಹಿತ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮೊದಲು ನಾವು ಚರ್ಚೆ ಮಾಡಿ, ನಮ್ಮ ಅಭಿಪ್ರಾಯಗಳನ್ನು ಕ್ರೂಢೀಕರಣ ಮಾಡಿಕೊಂಡು ನಂತರ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿರುವ ತಜ್ಞರನ್ನು ಸಂಪರ್ಕ ಮಾಡಿ ಅವರ ಅಭಿಪ್ರಾಯಗಳನ್ನು ಸಂಗ್ರಹಿಸುವುದು, ಕೊನೆಯದಾಗಿ ರಾಷ್ಟ್ರೀಯ ಶಿಕ್ಷಣ ನೀತಿಯ ಬದಲಾಗಿ ಈಗ ಬಂದಿರುವ ರಾಜ್ಯ ಶಿಕ್ಷಣ ನೀತಿಯಲ್ಲಿ ಕೆಲಸ ಮಾಡಿರುವ ಸದಸ್ಯರನ್ನು ಆಹ್ವಾನ ಮಾಡಿ ನಮ್ಮ ಅನುಮಾನಗಳನ್ನು ಅವರ ಮುಂದೆ ಇಟ್ಟು ಪರಿಹಾರಗಳನ್ನು ಪಡೆಯುವುದು ಮಾಡಲಾಗುವುದು ಎಂದು ಹೇಳಿದರು.

ನಿವೃತ್ತ ಜಂಟಿ ನಿರ್ದೇಶಕ ಕೆ.ದೊರೈರಾಜ್, ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಡಾ.ಡಿ.ಎನ್.ಯೋಗೀಶ್ವರಪ್ಪ ಪ್ರಾಸ್ತಾವಿಕ ಮಾತನಾಡಿದರು. ನಿವೃತ್ತ ಉಪನಿರ್ದೇಶಕ ಟಿ.ಎಸ್.ಆಂಜನಪ್ಪ, ನಿವೃತ್ತ ಪ್ರಾಚಾರ್ಯ ಡಾ.ಟಿ.ಆರ್.ಲೀಲಾವತಿ, ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಮಲ್ಲಿಕಾ ಬಸವರಾಜು, ಕನ್ನಡ ಪ್ರಾಧ್ಯಾಪಕರಾದ ಪ್ರೊ.ಹೊನ್ನಗಾನಹಳ್ಳಿ ಕರಿಯಣ್ಣ, ಡಾ.ಬಿ.ಆರ್.ರೇಣುಕಾಪ್ರಸಾದ್ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular