ತುಮಕೂರು ಜಿಲ್ಲಾ ವಕೀಲರ ಸಂಘದ ಸದಸ್ಯರ ಮಕ್ಕಳು ಹೆಚ್ಚು ಅಂಕ ಪಡೆದರೆ, ಪ್ರತಿ ವರ್ಷವೂ ಸಹ ಪ್ರೋತ್ಸಾಹ ಧನ ನೀಡಲಾಗುವುದು ಎಂದು ತುಮಕೂರು ಜಿಲ್ಲಾ ವಕೀಲರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಕೆ.ನವೀನ್ ನಾಯಕ್ ತಿಳಿಸಿದರು.
ತುಮಕೂರು ನಗರದ ನ್ಯಾಯಾಲಯಗಳ ಸಂಕೀರ್ಣದ ಆವರಣದಲ್ಲಿರುವ ಜಿಲ್ಲಾ ವಕೀಲರ ಸಂಘದ ಸಭಾಂಗಣದಲ್ಲಿ ಭಾನುವಾರ ನಡೆದ ವಕೀಲರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘದ ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಕ್ಕಳ ಕ್ಷೇಮಾಭಿವೃದ್ಧಿ ನಿಧಿಯನ್ನು ಸ್ಥಾಪಿಸಲಾಗಿದೆ. ಬ್ಯಾಂಕಿಗೆ ಬಂದ ನಿವ್ವಳ ಲಾಭದಲ್ಲಿ ಇಂತಿಷ್ಟು ಹಣವನ್ನು ಶಿಕ್ಷಣಕ್ಕಾಗಿ ವೆಚ್ಚ ಮಾಡಲಾಗುತ್ತಿದೆ. ಆರೋಗ್ಯ ಸಮಸ್ಯೆ ಮತ್ತಿತರ ಸಂದರ್ಭದಲ್ಲಿ ವಕೀಲರಿಗೂ ಸಹ ಸಹಾಯ ಮಾಡಲಾಗುತ್ತದೆ ಎಂದು ಹೇಳಿದರು.
ಆಧುನಿಕ ಸಂದರ್ಭದಲ್ಲಿ ವಕೀಲರ ಮಕ್ಕಳು ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆಯು ಸಹ ಹೆಚ್ಚಳ ಆಗಬೇಕು. ನಮ್ಮ ಸಂಘದ ಸದಸ್ಯರು ಹಲವಾರು ಒತ್ತಡಗಳಿಂದ ಕಾರ್ಯ ನಿರ್ವಹಿಸುತ್ತಿದ್ದು ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಬ್ಯಾಂಕಿನಲ್ಲಿ ಹಣಕಾಸಿನ ಅವಶ್ಯಕತೆ ಇದ್ದಾಗ ಪಡೆದು ಅದನ್ನು ಸಕಾಲಕ್ಕೆ ಸರಿಯಾಗಿ ಪಾವತಿ ಮಾಡುವ ಮೂಲಕ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಸಹಕಾರಿ ಸಂಘದ ಮೂಲಕ ಸಂಘದ ಸದಸ್ಯರಾದ ವಕೀಲರಿಗೆ ಆರೋಗ್ಯ ವಿಮೆ, ವಾಹನ ವಿಮೆ, ವೈಯಕ್ತಿಕ ಸಾಲ ನೀಡಲಾಗುತ್ತಿದ್ದು, ಹಣಕಾಸಿನ ವ್ಯವಹಾರಗಳು ಸಕಾಲಕ್ಕೆ ಸರಿಯಾಗಿ ಪಾವತಿಯಾಗುತ್ತಿವೆ. ಇದು ಬ್ಯಾಂಕ್‌ನ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದರು.
ಸಹಕಾರಿ ಸಂಘದ ನಿರ್ದೇಶಕ ಕಾಮಗೌಡ ಲೆಕ್ಕಪತ್ರ ವರದಿ ಮಂಡಿಸಿ, ಸದಸ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡು ಸಂಘದ ಅಭಿವೃದ್ಧಿಗೆ ಕೆಲಸ ನಿರ್ವಹಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ 15 ಮಂದಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು. ಅತಿ ಹೆಚ್ಚು ಅಂಕ ಪಡೆದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ವೇದಿಕೆಯಲ್ಲಿ ಉಪಾಧ್ಯಕ್ಷ ಕೆ.ಆರ್.ನಾಗೇಶ್, ನಿರ್ದೇಶಕರಾದ ಎಚ್.ವಿ.ಮಲ್ಲಿಕಾರ್ಜುನಯ್ಯ, ಹನುಮಂತರಾಯಪ್ಪ, ಬಿ.ಎಸ್.ರಾಮಕೃಷ್ಣಯ್ಯ, ಎನ್.ಆರ್.ರವಿ, ಎ. ಕಲೀಂ ಉಲ್ಲಾ, ಕೆ.ಎನ್.ಚಿಕ್ಕಣ್ಣ, ಸಿಎಸ್.ಪುಟ್ಟರಾಜಣ್ಣ, ಕೆ.ಜಯಂತಿ, ಎಚ್.ಸಿ.ಅನಿತ, ಬ್ಯಾಂಕ್ ಸಿಇಒ ಜಿ.ಆರ್. ಭಾಗ್ಯಶ್ರೀ, ಲೆಕ್ಕಾಧಿಕಾರಿ ಅಬ್ದುಲ್ ರಹಿಮ್, ಸಹಾಯಕ ಕೆ.ಎನ್.ಲಿಖಿತ, ರಾಜಣ್ಣ ಇದ್ದರು.


