ಹರಿಯಾಣದ ಕರ್ನಾಲ್ ಟೋಲ್ ಪ್ಲಾಜಾ ಬಳಿ ಪ್ರತಿಭಟನಾನಿರತ ರೈತರ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಜ್ ನಲ್ಲಿ ಗಂಭೀರ ಗಾಯಗೊಂಡಿದ್ದ ರೈತರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಭಾರತೀಯ ಕಿಸಾನ್ ಯೂನಿನ್ ಅಧ್ಯಕ್ಷ ಗುರುನಾಮ್ ಸಿಂಗ್ ಚದೂನಿ ತಿಳಿಸಿದ್ದಾರೆ.
ಸುಶೀಲ್ ಕಾಜಲ್ ಮೃತಪಟ್ಟ ರೈತ. ಇವರಿಗೆ 1 ಎಕರೆ 20 ಗುಂಟೆ ಜಮೀನು ಇತ್ತು. ಅದರಲ್ಲಿ ಉಳುಮೆ ಮಾಡಿ ಜೀವನ ಮಾಡುತ್ತಿದ್ದರು. ಕಳೆದ 7 ತಿಂಗಳಿಂದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಆಗಸ್ಟ್ 28ರಂದು ಸಂಜೆ ಪೊಲೀಸರು ನಡೆಸಿದ ಲಾಠಿ ಚಾರ್ಜ್ ನಲ್ಲಿ ಗಂಭೀರ ಗಾಯಗೊಂಡಿದ್ದರು.
ತಡರಾತ್ರಿ ಸುಶೀಲ್ ಕಾಜಲ್ ಅವರಿಗೆ ಹೃದಯಾಘಾತವಾಗಿದೆ. ನಂತರ ಸಾವನ್ನಪ್ಪಿದ್ದಾರೆ. ಮೃತ ಸುಶೀಲ್ ಕಾಜಲ್ ಅವರ ಪ್ರತಿಭಟನೆಯಲ್ಲಿ ಕ್ರಿಯಾಶೀಲವಾಗಿ ಕೆಲಸ ನಿರ್ವಹಿಸುತ್ತಿದ್ದರು ಎಂದು ಪ್ರತಿಭಟನಾನಿರತ ರೈತರು ಸ್ಮರಿಸಿದ್ದಾರೆ.
ವಿವಾದಿತ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತರು ಆರೇಳು ತಿಂಗಳಿಂದ ಪ್ರತಿಭಟನೆ ನಡೆಸುತ್ತಲೇ ಬರುತ್ತಿದ್ದಾರೆ. ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿರುವುದು ಖಂಡನೀಯ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಕೂಡ ಹರಿಯಾಣ ರಾಜ್ಯಾದ್ಯಂತ ರೈತರು ಪ್ರತಿಭಟನೆ, ಹೆದ್ದಾರಿ ತಡೆ ತಡೆಸಿರುವುದಾಗಿ ವರದಿಯಾಗಿದೆ. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದ್ದಾರೆ.