ತುಮಕೂರು ನಗರದಲ್ಲಿ ಕಳೆದ ಹಲವಾರು ವರ್ಷಗಳಿಂದ ಕಾಲೇಜು ಕ್ಯಾಂಪಸ್‌ಗಳಲ್ಲಿ ಡ್ರಗ್ಸ್ ಮತ್ತು ಗಾಂಜಾದಂತಹ ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳು ವ್ಯಾಪಕವಾಗುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಅಸೋಸಿಯೇಷನ್ ಫಾರ್ ಸಿವಿಲ್ ರೈಟ್ಸ್ ಪ್ರೊಟೆಕ್ಷನ್ ಇಂಡಿಯಾ ಜಿಲ್ಲಾಧ್ಯಕ್ಷ ತಾಜುದ್ದೀನ್ ಷರೀಫ್ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಶುಕ್ರವಾರ ಸಂಜೆ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಅವರು, ನಗರದಲ್ಲಿ ಮಾದಕ ದ್ರವ್ಯ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಸಂಪೂರ್ಣವಾಗಿ ನಿರ್ಲಕ್ಷಿಸಿದೆ, ಹಾಗೆಯೇ ರಾಜ್ಯದ ಗ್ರಹ ಸಚಿವರ ತವರ ಜಿಲ್ಲೆಯಲ್ಲಿ ಈ ಇಂತಹ ಪರಿಸ್ಥಿತಿ ಇದೆ. ಬೇರೆ ಜಿಲ್ಲೆಯ ಗತಿ ಏನಾಗೋದು ಎಂಬ ಸಂಶಯ ಇದೆ ಎಂದು ಹೇಳಿದ್ದಾರೆ.
ಕ್ಯಾಂಪಸ್, ಹಾಸ್ಟೆಲ್, ಅತಿಥಿಗೃಹ ಮುಂತಾದ ಕಡೆಗಳಲ್ಲಿ ಪರಿಸ್ಥಿತಿ ಗಂಭೀರ ಮಟ್ಟಕ್ಕೆ ತಲುಪುತ್ತಿದೆ. ಈ ಕುರಿತು ಶೀಘ್ರವಾಗಿ ಸೂಕ್ತವಾದ ಕ್ರಮ ಕೈಗೊಳ್ಳದಿದ್ದರೆ ನಗರದ ಕ್ಯಾಂಪಸ್‌ಗಳು ಮತ್ತು ವಿದ್ಯಾರ್ಥಿ-ಯುವ ಸಮುದಾಯವು ಸಮಾಜಕ್ಕೆ ಮಾರಕವಾಗುವ ಸ್ಥಿತಿಯನ್ನು ಎದುರಿಸಬೇಕಾದೀತು ಎಂದು ಎಪಿಸಿಆರ್ ಮನವಿಯಲ್ಲಿ ಎಚ್ಚರಿಸಿದ್ದಾರೆ.
ಪ್ರಮುಖವಾಗಿ ಮಾದಕ ಪದಾರ್ಥಗಳ ಮಾರಾಟ ಜಾಲದ ಮೂಲವನ್ನು ಪತ್ತೆ ಹಚ್ಚಿ ಶೀಘ್ರವೇ ಅದರ ನಿರ್ಮೂಲನೆ ಮಾಡಬೇಕು. ತುಮಕೂರು ನಗರದ ಹೊರವಲಯದಿಂದ ಕ್ಯಾಂಪಸ್‌ಗಳಿಗೆ ಮಾದಕ ಪದಾರ್ಥಗಳನ್ನು ತಲುಪಿಸುವ ಮಧ್ಯವರ್ತಿಗಳ ಜಾಲವನ್ನು ತಡೆಯಬೇಕು ಮತ್ತು ಅವರನ್ನು ಕಾನೂನು ರೀತಿಯಲ್ಲಿ ಶಿಕ್ಷಿಸಬೇಕು. ಕ್ಯಾಂಪಸ್‌ಗಳಲ್ಲಿರುವ ಆಂಟಿ ಡ್ರಗ್ಸ್ ಸ್ವಾಡ್‌ನ್ನು ಬಲಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕೇರಳ ಮಾದರಿ ಆಂಟಿ ಡ್ರಗ್ ಪೊಲೀಸ್ ಕಾರ್ಯಾಚರಣೆಯನ್ನು ನಡೆಸಬೇಕು. ಮಾದಕ ವ್ಯಸನಿಗಳ ಪುನರ್ವಸತಿಯ ಕುರಿತು ಪೊಲೀಸ್ ಇಲಾಖೆಯು ಇತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಜಾಗೃತಿಗಾಗಿ ನಿರಂತರ ಶ್ರಮಿಸಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ.
ಈ ವೇಳೆ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಅಫ್ ಸಿವಿಲ್ ರೈಟ್ಸ್ ಇಂಡಿಯಾದ ಪದಾಧಿಕಾರಿಗಳಾದ ಅಫ್ಜಲ್ ಖಾನ್, ಹಮೀದ್ ಬೇಗ್, ಅಪ್ಸರ್ ಖಾನ್ ಪಾಲ್ಗೊಂಡಿದ್ದರು.


