Thursday, January 29, 2026
Google search engine
Homeಮುಖಪುಟಸಾಮಾಜಿಕ ಆಯಾಮಗಳಲ್ಲಿ ತೆರೆದುಕೊಳ್ಳುವ ಸ್ವಪ್ನ ಮಂಟಪ ಸಿನಿಮಾ

ಸಾಮಾಜಿಕ ಆಯಾಮಗಳಲ್ಲಿ ತೆರೆದುಕೊಳ್ಳುವ ಸ್ವಪ್ನ ಮಂಟಪ ಸಿನಿಮಾ

ಚರಿತ್ರೆಯೊಂದರ ಕಾಲ್ಪನಿಕ ಕಥೆಯೊಂದನ್ನು ಆಧರಿಸಿ ಮೇಷ್ಟ್ರು ಬರಗೂರು ರಾಮಚಂದ್ರಪ್ಪನವರ ನಿರ್ದೇಶನದ ಚಿತ್ರ ಸ್ವಪ್ನ ಮಂಟಪವು ಹಲವು ಕಾರಣಕ್ಕಾಗಿ ಮುಖ್ಯವಾಗುತ್ತದೆ. ಕೇವಲ ಇದು ಪ್ರೀತಿ ಪ್ರಣಯದ ಚಿತ್ರವೊಂದೇ ಆಗಿರದೆ, ಹಲವು, ಸಾಮಾಜಿಕ ಆಯಾಮಗಳನ್ನು ಪಡೆದುಕೊಂಡಿದೆ.

ಜಾತಿಯನ್ನು ಮೀರಿ ಸಂಬಂಧಗಳನ್ನು ಕಟ್ಟುವ ಸಹಜ ಸಂಘರ್ಷದ ವಾತಾವರಣದ ನಡುವೆಯೂ ಆ ಸಂಘರ್ಷ ಅವಿವೇಕವನ್ನು ಪಡೆಯದೆ ಶಿಕ್ಷಣ ಪಡೆದ ಮಂಜುಳಾ ಮತ್ತು ಕಥಾನಾಯಕ ಶಿವಕುಮಾರ್ ಅವರ ವಿವೇಚನಾಯುತವಾದ ಮಾತುಗಳಿಂದ ಸಹಜ ಒಪ್ಪಿಗೆಯನ್ನು ಪಡೆಯುವುದು ಒಂದು ವಿಶೇಷ.

ಬರಗೂರ್ ಮೇಷ್ಟ್ರು ತಮ್ಮ ಜೀವನದಲ್ಲಿ ಪಾಲಿಸಿಕೊಂಡು ಬಂದಂಥ ತತ್ವ ಆದರ್ಶಗಳು ಹಾಗೂ ಕರ್ನಾಟಕದ, ಕಲೆ ಸಂಸ್ಕೃತಿ ಸಾಹಿತ್ಯದ ಬಗ್ಗೆ ಇರುವ ಕಾಳಜಿ ಇವೆಲ್ಲವುಗಳ ಸಹಜ ಒಳನೋಟಗಳನ್ನು ಸ್ವಪ್ನ ಮಂಟಪ ಸಿನಿಮಾ ತೆರೆದಿಡುತ್ತದೆ. ಕಥಾನಾಯಕಿ ಮಂಜುಳಾ ಕೇವಲ ಶಿಕ್ಷಕಿಯಾಗಿ ತಮ್ಮ ವೃತ್ತಿ ಜೀವನಕ್ಕೆ ಅಂಟಿಕೊಳ್ಳದೆ, ಅದರಾಚೆ ಮನುಷ್ಯ ಪರವಾದ ಹೋರಾಟದ ಭಾಗವಾಗುವುದು ಪ್ರತಿಯೊಬ್ಬ ಶಿಕ್ಷಕರಿಗೂ ಪಾಠದಂತಿವೆ. ಶಿಕ್ಷಕರು ಕೇವಲ ಶಿಕ್ಷಕರಲ್ಲ; ಅವರು ಸಮಾಜದ ಆಸ್ತಿಯೂ ಆಗಬೇಕಾಗಿದೆ. ಹಾಗಾಗಿ ಮಂಜುಳಾ ಮತ್ತು ಶಿವಕುಮಾರ್ ಕಟ್ಟುವ ಜನ ಚಳವಳಿ ಸಮಾಜ ಬದಲಾವಣೆಯೊಂದರ ಪ್ರತೀಕವೂ ಆಗಿದೆ.

ಇಂಥ ಜೀವಪರವಾದ ಹೋರಾಟದ ಚಳವಳಿಗಳು ಹೆಚ್ಚಾದಂತೆಲ್ಲ ಸಮ ಸಮಾಜದ ಕನಸುಗಳು ಕಾಣಲಿಕ್ಕೆ ಸಾಧ್ಯವಾಗುತ್ತದೆ. ಇವತ್ತಿನ ಪ್ರಜ್ಞಾವಂತ ಶಿಕ್ಷಕ ವಲಯವಂತೂ ಕೇವಲ ತಮ್ಮ ಕುಟುಂಬ ಹಾಗೂ ತಮ್ಮ ವೈಯಕ್ತಿಕ ಪ್ರಗತಿಗೆ ಸಮಯ ಮೀಸಲಿಡುರುತ್ತಿರುವ ಈ ಸಂದರ್ಭದಲ್ಲಿ ಸಿನಿಮಾ ಒಂದು ಹೊಸ ಜಾಗೃತಿಯನ್ನು ಮೂಡಿಸಬಲ್ಲದು.

ಪಾರಂಪರಿಕ ಕಟ್ಟಡಗಳು, ಇತಿಹಾಸದ ಅವಶೇಷಗಳು ನಾಶವಾಗುತ್ತಿರುವ ಸಂದರ್ಭದಲ್ಲಿ ಪರಂಪರೆ ನಡುವೆ ನಮ್ಮ ಅನುಸಂಧಾನ ಹೆಚ್ಚು ಮಾಡುವಲ್ಲಿ ಜನ ಚಳವಳಿಗಳ ಪಾತ್ರ ಮುಖ್ಯವಾದದ್ದು. ಪ್ರಭುತ್ವ ಯಾವಾಗಲೂ ಜನರ ವಿರುದ್ಧವಾಗಿ ಹಾಗು ಬಂಡವಾಳಶಾಹಿಗಳ ಪರವಾಗಿಯೇ ಕೆಲಸ ಮಾಡುತ್ತಿರುತ್ತದೆ. ಜನ ಚಳುವಳಿಗಳ ಮುಂದೆ ಪ್ರಭುತ್ವ ಸೋಲುವುದನ್ನು ಸಿನಿಮಾ ಸದ್ದಿಲ್ಲದೆ ಕಟ್ಟಿಕೊಡುತ್ತದೆ. ಒಕ್ಕೂಟ ವ್ಯವಸ್ಥೆಯನ್ನು ಉಳಿಸಿಕೊಳ್ಳುವ ಬಗ್ಗೆಯೂ ಸಿನಿಮಾ ಸೂಕ್ಷ್ಮವಾಗಿ ನಮಗೆ ತಿಳಿಸುತ್ತದೆ.

ಸ್ವಪ್ನ ಮಂಟಪ ಸಿನಿಮಾ ಹಾಡುಗಳಂತೂ ಮನಸ್ಸನ್ನು ತಟ್ಟುತ್ತವೆ. ಕೇವಲ ಆಡಂಬರದ ಸಂಗೀತದ ಮೂಲಕ ಸಾಹಿತ್ಯದ ಜೋಡಣೆಯಾಗದೆ ಅರ್ಥಗರ್ಭಿತವಾದ ಹಾಡುಗಳು ನಮ್ಮ ಮನಸ್ಸನ್ನು ತಟ್ಟುತ್ತದೆ. ಸಂಭಾಷಣೆಯಂತೂ ಅದ್ಭುತವಾಗಿದೆ. ಕಲಾತ್ಮಕವಲ್ಲದ ತೀವ್ರ ಮನರಂಜನೆಯೂ ಅಲ್ಲದ ಸಂಯಮದ ಚಿತ್ರವೊಂದು ನಮ್ಮ ಮುಂದೆ ಹಾದು ಹೋಗುತ್ತದೆ. ಸಹೃದಯ ಕುಟುಂಬವೊಂದು ನೋಡಬಲ್ಲ ಸಿನಿಮಾ ಇದಾಗಿದೆ.

ಲೇಖಕರು: ಅಶ್ವತ್ಥನಾರಾಯಣ ಗುಟ್ಟೆ, ಉಪನ್ಯಾಸಕರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular