ಹರ್ಯಾಣದ ಕರ್ನಾಲ್ ಪ್ರದೇಶದಲ್ಲಿರುವ ಬಸ್ತಾರ್ ಟೋಲ್ ಪ್ಲಾಜಾ ಬಳಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ಲಾಠಿಚಾರ್ಜ್ಬೀ ಮಾಡಿದ ಪರಿಣಾಮ ರೈತರು ಗಂಭೀರ ಗಾಯಗೊಂಡಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣೆ ನಿರ್ಮಾಣವಾಗಿದೆ. ರೈತರ ಮೇಲಿನ ಲಾಠಿಚಾರ್ಜ್ ಗೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನೇತೃತ್ವದಲ್ಲಿ ಮುಂಬರುವ ಮುನಿಸಿಪಲ್ ಚುನಾವಣೆ ಸಂಬಂಧ ಚರ್ಚೆ ನಡೆಸುತ್ತಿದ್ದರು. ಇತ್ತ ರೈತರು ಹೆದ್ದಾರಿ ತಡೆ ಚಳವಳಿಯಲ್ಲಿ ತೊಡಗಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು “ಪ್ರತಿಯೊಬ್ಬ ಪ್ರತಿಭಟನಾಕಾರರನ್ನೂ ಎಳೆದೊಯ್ಯಿರಿ. ಅವರ ಕುಂಡೆಗಳಿಗೆ ಹೊಡೆಯಿರಿ”. ಕಾನೂನು ಉಲ್ಲಂಘನೆಗೆ ಬಿಡುವುದಿಲ್ಲ. ಸಾಕಷ್ಟು ಪೊಲೀಸರನ್ನು ಹೊಂದಿದ್ದು ರೈತರು ರಸ್ತೆ ಮೇಲೆ ಮಲಗಲು ಬಿಡುವುದಿಲ್ಲ. ಕೆಲವರು ಇಲ್ಲೇ ನಿದ್ದೇ ಹೋಗಲು ಹೊರಟಿದ್ದಾರೆ. ಓರ್ವ ಪ್ರತಿಭಟನಾಕಾರನನ್ನೂ ಅಲ್ಲಿಗೆ ಹೋಗಲು ಬಿಡುವುದಿಲ್ಲ ಎಂದು ಹೇಳಿದರು.
ರೈತರು ಪೊಲೀಸರು ಮತ್ತು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಇದರಿಂದ ಆಕ್ರೋಶಗೊಂಡ ಪೊಲೀಸರು ಪ್ರತಿಭಟನಾ ನಿರತ ರೈತರ ಮೇಲೆ ಲಾಠಿ ಪ್ರಹಾರ ನಡೆಸಿದ್ದು ಹಲವು ರೈತರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಈ ಮದ್ಯೆ ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ಗುರುನಾಮ್ ಸಿಂಗ್ ಚಂಧುರಿ “ರೈತರು ಬಸ್ತಾರಕ್ಕೆ ಬರಬೇಕು. ಇತರೆ ಟೋಲ್ ಗಳ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಬೇಕು. ನಿಮ್ಮ ಪ್ರದೇಶದಲ್ಲಿರುವ ಟೋಲ್ ಗೆ ತೆರಳಿ ಹೆದ್ದಾರಿ ಬಂದ್ ಮಾಡಿ ಎಂದು ಕರೆ ನೀಡಿದ್ದಾರೆ.
ಪ್ರತಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಭೂಪೇಂದ್ರ ಸಿಂಗ್ ಹೂಡಾ ರೈತರ ಮೇಲೆ ಲಾಠಿ ಪ್ರಹಾರ ನಡೆಸಿರುವುದನ್ನು ಖಂಡಿಸಿದ್ದಾರೆ. “ಇದೊಂದು ಬರ್ಬರ ಕೃತ್ಯ. ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಲಾಠಿಚಾರ್ಜ್ ಮಾಡಿರುವುದು ನಾಚಿಕೆಗೇಡಿನ ಸಂಗತಿ. ಬಿಜೆಪಿ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳ ರೈತರು ಪ್ರತಿಭಟಿಸುತ್ತಿದ್ದ ಸ್ಥಳದಿಂದ 15 ಕಿಲೋಮೀಟರ್ ದೂರದಲ್ಲಿದೆ. ಸರ್ಕಾರ ದುರುದ್ದೇಶದಿಂದ ದಾಳಿ ನಡೆಸಿದರು. ನಿಷ್ಪಕ್ಷಪಾತ ತನಿಖೆ ಆಗಬೇಕು” ಎಂದು ಒತ್ತಾಯಿಸಿದ್ದಾರೆ.
ಶಹಜಾರ್, ಕಲ್ಕಾಜವಾರ್ ಪುರ ಹೆದ್ದಾರಿಯಲ್ಲೂ ಪ್ರತಿಭಟನೆಗಳು ನಡೆಯುತ್ತಿದ್ದು ಬಿಜೆಪಿ ನಾಯಕರ ವಿರುದ್ಧ ಕಪ್ಪು ಬಾವುಟ ಪ್ರದರ್ಶನ ಮಾಡಿದ್ದಾರೆ. ವಾಹನಗಳನ್ನು ತಡೆಯಲು ವಿಫಲ ಯತ್ನ ನಡೆದಿದೆ. ಹೀಗಾಗಿ ಬಂದ್ ವಿಫಲವಾಗಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ರೈತ ನಾಯಕ ಚಂಧೂನಿ, ಪ್ರತಿಭಟನಾನಿರತ ರೈತರ ಸಮಸ್ಯೆ ಆಲಿಸಲು ಸರ್ಕಾರ ಸ್ಥಳಕ್ಕೆ ಬಂದಿಲ್ಲ. ನಮ್ಮ ಜೊತೆ ಮಾತನಾಡಿಲ್ಲ. ಹಾಗಾಗಿ ಅನಿರ್ದಿಷ್ಟಾವಧಿವರೆಗೆ ಹೆದ್ದಾರಿ ಬಂದ್ ನಡೆಸುತ್ತೇವೆ. ಬಿಜೆಪಿ ಕಾರ್ಪೋರೇಟ್ ಗಳಿಗೆ ದೇಶ ಮಾರುವ ಹಕ್ಕು ನೀಡಿದವರು ಯಾರು? ನಮ್ಮ ಭೂಮಿ ಮಾರಾಟ ಮಾಡಲು ಹಕ್ಕು ಯಾರು ಕೊಟ್ಟರು. ದೇಶ ಮಾರಾಟ ಮಾಡಲು ಬಿಡುವುದಿಲ್ಲ. ರಸ್ತೆಯಲ್ಲೇ ಜೀವ ಬಿಡುತ್ತೇವೆ” ಎಂದು ಎಚ್ಚರಿಕೆ ನೀಡಿದರು.