ಏಳನೇ ವೇತನ ಆಯೋಗದ ಪರಿಷೃತ ವೇತನ ಸೌಲಭ್ಯ, ಆರೋಗ್ಯ ಸಂಜೀವಿನಿ ಯೋಜನೆ ವಿಸ್ತರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ನಗರಪಾಲಿಕೆಯ ಅಧಿಕಾರಿಗಳು ಹಾಗೂ ನೌಕರರು ನಡೆಸಿರುವ ಅನಿರ್ಧಿಷ್ಟಾವಧಿ ಹೋರಾಟ ಮೂರನೇ ದಿನವೂ ಮುಂದುವರೆಯಿತು. ಸಾಮೂಹಿಕ ರಜೆ ಸಲ್ಲಿಸಿ ಪಾಲಿಕೆ ಆವರಣದಲ್ಲಿ ನಡೆಸಿರುವ ಹೋರಾಟಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎನ್.ನರಸಿಂಹರಾಜು ಹಾಗೂ ಪದಾಧಿಕಾರಿಗಳು ಬೆಂಬಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎನ್.ನರಸಿಂಹರಾಜು, ಪಾಲಿಕೆ ಅಧಿಕಾರಿಗಳು ಹಾಗೂ ನೌಕರರ ಬೇಡಿಕೆಗಳು ನ್ಯಾಯಯುತವಾಗಿವೆ. ಅವುಗಳನ್ನು ಸರ್ಕಾರ ಈಡೇರಿಸಬೇಕು. ನಗರಾಭಿವೃದ್ಧಿ ಖಾತೆ ಸಚಿವ ಬೈರತಿ ಸುರೇಶ್ ಅವರು ಕಾಳಜಿ ವಹಿಸಿ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿ ಬೇಡಿಕೆ ಈಡೇರಿಸಲು ಪ್ರಯತ್ನಿಸಬೇಕು ಎಂದು ಮನವಿ ಮಾಡಿದರು.
ಪಾಲಿಕೆ ನೌಕರರು ಹೋರಾಟ ಮುಂದುವರೆಸಿದರೆ ನಾಗರೀಕ ಸೇವೆಗಳು ಸ್ಥಗಿತಗೊಳ್ಳುತ್ತವೆ. ಈ ಎಚ್ಚರಿಕೆಯಲ್ಲಿ ಸರ್ಕಾರ ನೌಕರರ ಪರ ನಿಲ್ಲಬೇಕು. ಇವರ ಬೇಡಿಕೆ ಈಡೇರಿಸುವುದರಿಂದ ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊರೆ ಆಗಲಾರದು. ಸರ್ಕಾರ ನೌಕರರಿಗೆ ಸ್ಪಂದಿಸದಿದ್ದರೆ, ಈ ತಿಂಗಳ 19ರಂದು ನಡೆಯುವ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಾಲಿಕೆ ನೌಕರರ ಪರವಾದ ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಗರಪಾಲಿಕೆ ಅಧಿಕಾರಿಗಳು ಮತ್ತು ನೌಕರರ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್ ಮಾತನಾಡಿ, ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದಾಗ ಸರ್ಕಾರ ಬೇಡಿಕೆ ಬಗ್ಗೆ ಮಾಹಿತಿ ಪಡೆಯದೆ ಕಡೆಗಣಿಸಿದ್ದು ಬೇಸರವಾಗಿದೆ. ಹಲವಾರು ಬಾರಿ ಮನವಿ ಪತ್ರಗಳನ್ನು ನಗರಾಭಿವೃದ್ಧಿ ಸಚಿವರಿಗೆ ಹಾಗೂ ಸರ್ಕಾರದ ಕಾರ್ಯದರ್ಶಿಗಳಿಗೆ ಸಲ್ಲಿಸಿದ್ದರೂ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ, ಹೀಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದು ಹೇಳಿದರು.
7ನೇ ವೇತನ ಆಯೋಗದ ಪರಿಷ್ಕೃತ ವೇತನ ಸೌಲಭ್ಯವನ್ನು ಮಹಾನಗರ ಪಾಲಿಕೆ ನೌಕರರಿಗೆ ಒದಗಿಸಲು ಆರ್ಥಿಕ ಇಲಾಖೆಯಿಂದಲೇ ಬಿಡುಗಡೆ ಮಾಡಬೇಕು. 2022-23ನೇ ಸಾಲಿನಲ್ಲಿ ನೇಮಕ ಮಾಡಲಾದ ಪೌರಕಾರ್ಮಿಕರ ವೇತನವನ್ನು ಸ್ವಂತ ಸಂಪನ್ಮೂಲಗಳಿಂದ ಭರಿಸಲು ಹೊರಡಿಸಲಾಗಿರುವ ಆದೇಶ ಹಿಂಪಡೆದು ವೇತನದ ಸಂಪೂರ್ಣ ಅನುದಾನದನ್ನು ಸರ್ಕಾರದಿಂದಲೇ ಬಿಡುಗಡೆ ಮಾಡಬೇಕು. ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಪಾಲಿಕೆ ಸಿಬ್ಬಂದಿ ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ಯಥಾವತ್ತಾಗಿ ವಿಸ್ತರಿಸಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ಗ್ರಾಮ ಆಡಳಿತಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ದೇವರಾಜು, ಮುಖಂಡರಾದ ಅಜಯ್, ಮಂಜುನಾಥ್, ಪಾಲಿಕೆ ಅಧಿಕಾರಿಗಳು ಹಾಗೂ ನೌಕರರ ಸಂಘದ ಗೌರವಾಧ್ಯಕ್ಷ ಆಂಜನಪ್ಪ, ಉಪಾಧ್ಯಕ್ಷ ಪುಷ್ಪಲತಾ, ಸಿದ್ಧಲಿಂಗಮೂರ್ತಿ, ಕಾರ್ಯದರ್ಶಿ ಶಬ್ಬೀರ್ ಅಹ್ಮದ್, ರಾಜ್ಯ ಪರಿಷತ್ ನಿರ್ದೇಶಕ ಶೆಟ್ಟಳ್ಳಯ್ಯ, ನಿರ್ದೇಶಕರಾದ ಮಹೇಶ್, ರಾಜೇಶ್, ನಟರಾಜು, ವಿಶ್ವನಾಥ್ ಭಾಗವಹಿಸಿದ್ದಾರೆ.


