ಐದು ವರ್ಷವೂ ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೇನೆ ಎಂದು ಪುನರುಚ್ಚರಿಸಿರುವ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಸಿಎಂ ಹುದ್ದೆ ಖಾಲಿ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿದ್ದರಾಮಯ್ಯ, ನಾಯಕತ್ವ ಬದಲಾವಣೆ ಬಗ್ಗೆ ರಾಹುಲ್ ಗಾಂಧೀ ಆಗಲಿ, ವೇಣುಗೋಪಾಲ್ ಆಗಲಿ, ಮಲ್ಲಿಕಾರ್ಜುನ ಖರ್ಗೆಯಾಗಲಿ ಹೇಳಿದ್ದಾರಾ ಎಂದು ಪ್ರಶ್ನಿಸಿರುವ ಅವರು ಹೈಕಮಾಂಡ್ ತೀರ್ಮಾನಕ್ಕೆ ನಾನೂ, ಡಿಕೆ ಶಿವಕುಮಾರ್ ಕೂಡ ಬದ್ದವಾಗಿದ್ದೇವೆ. ಹೈಕಮಾಂಡ್ ಏನು ಹೇಳುತ್ತೆ ಹಾಗೆ ನಿರ್ಧಾರ ಮಾಡುತ್ತೇವೆ. ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಸ್ಪಷ್ಟಪಪಡಿಸಿದ್ದಾರೆ.
ಅಧಿಕಾರ ಹಂಚಿಕೆಗೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಕೆಲ ಶಾಸಕರು ಡಿ.ಕೆ.ಶಿವಕುಮಾರ್ ಪರ ಮುಖ್ಯಮಂತ್ರಿ ಆಗಲಿ ಎಂದು ಮಾತನಾಡಿದ್ದಾರೆ. ಹಲವು ಶಾಸಕರು ನಾನೇ ಸಿಎಂ ಆಗಿ ಮುಂದುವರೆಯಬೇಕು ಎಂದು ಹೇಳಿದ್ದಾರೆ. ಹಾಗೆಂದು ಚರ್ಚೆಯಾದ ಮಾತ್ರಕ್ಕೆ ಕೆಲವು ಶಾಸಕರು ವ್ಯಕ್ತಪಡಿಸುವ ಅಭಿಪ್ರಾಯಗಳು ಹೈಕಮಾಂಡ್ ತೀರ್ಮಾನವೇ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಆಗುತ್ತಿದೆ. ಹೀಗಾಗಿ ಸ್ವಾಭಾವಿಕವಾಗಿ ನಾಯಕತ್ವದ ಚರ್ಚೆ ನಡೆಯುವುದು ಸಾಮಾನ್ಯ. ಕುರ್ಚಿ ಬಗ್ಗೆ ಇದೀಗ ಸ್ವಾಭಾವಿಕ ಚರ್ಚೆ ನಡೆಯುತ್ತಿದೆ ಎಂದರು.
ಹೈಕಮಾಂಡ್ ಮಟ್ಟದಲ್ಲಿ ಸಂಪುಟ ಪುನರ್ ರಚೆನಯಾಗಲೀ, ನಾಯಕತ್ವದ ಬದಲಾವಣೆಯಾಗಲೀ ಚರ್ಚೆ ನಡೆದಿಲ್ಲ ಎಂದು ಹೇಳಿದ ಸಿದ್ದರಾಮಯ್ಯ 2013ರಲ್ಲಿ ಏನು ಆಗಿತ್ತೋ 2028ರ ಚುನಾವಣೆಯಲ್ಲೂ ಅದೇ ಮುಂದುವರೆಯುತ್ತದೆ. 2028ರ ಚುನಾವಣೆಯಲ್ಲಿ ನಾನೇ ನಾಯಕತ್ವ ವಹಿಸುತ್ತೇನೆ ಎಂದು ತಿಳಿಸಿದ್ದಾರೆ.


