Thursday, January 29, 2026
Google search engine
Homeಜಿಲ್ಲೆವರ್ತುಲ ರಸ್ತೆ ನಿರ್ಮಾಣಕ್ಕೆ ರೈತರಿಂದ ವಿರೋಧ

ವರ್ತುಲ ರಸ್ತೆ ನಿರ್ಮಾಣಕ್ಕೆ ರೈತರಿಂದ ವಿರೋಧ

ತುಮಕೂರು ಹೊರವರ್ತುಲ ರಸ್ತೆ ನಿರ್ಮಾಣಕ್ಕೆ ಸ್ಥಳೀಯ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ರೈತರು ಮತ್ತು ಸ್ಥಳೀಯರ ಒಂದು ಮಾತು ಕೇಳದೇ ಸರ್ವೇ ಕಾರ್ಯ ಆರಂಭ ಮಾಡಿದ ಎನ್.ಹೆಚ್.ಎ.ಐ. ಅಧಿಕಾರಿಗಳನ್ನು ತಡೆದು ಪ್ರತಿಭಟನೆ ನಡೆಸಲಾಯಿತು.

ತುಮಕೂರು ಹೊರ ವರ್ತುಲ 44 ಕಿ.ಮೀ. ಉದ್ದದ ಔಟರ್ ರಿಂಗ್ ರಸ್ತೆ ನಿರ್ಮಾಣ ಮಾಡಲು ಎನ್.ಹೆಚ್.ಎ.ಐ. ಮುಂದಾಗಿದೆ. ಇದು 24 ಹಳ್ಳಿಗಳ ಮೇಲೆ ಹಾದು ಹೋಗುತ್ತದೆ, ಈಗಾಗಲೇ ಕೆಲವು ಗ್ರಾಮಗಳಲ್ಲಿ ಸರ್ವೇ ಕಾರ್ಯ ನೆರವೇರಿಸಿ ಅಧಿಕಾರಿಗಳು ಅಳತೆ ಕಲ್ಲುಗಳನ್ನು ಸಹ ಅಳವಡಿಸಿರುತ್ತಾರೆ. ಆದರೆ ಭೈರಸಂದ್ರ ಗ್ರಾಮದಲ್ಲಿ ಸರ್ವೇ ಕಾರ್ಯ ಮಾಡಿ ಕಲ್ಲು ಅಳವಡಿಸಲು ಆಗಮಿಸಿದ್ದ ಅಧಿಕಾರಿಗಳನ್ನು ತಡೆದಿರುವ ರೈತರು ಯಾವುದೇ ಕಾರಣಕ್ಕೂ ನಾವು ನಮ್ಮ ಜಮೀನುಗಳನ್ನು ನಿಮ್ಮ ಸ್ವಾಧೀನಕ್ಕೆ ಬಿಟ್ಟುಕೊಡುವುದೂ ಇಲ್ಲ ಎಂದು ಅಧಿಕಾರಿಗಳನ್ನು ತಡೆದರು.

ಪ್ರತಿಭಟನೆ ಮಾಡುವ ಸುಳಿವು ಅರಿತಿದ್ದ ಅಧಿಕಾರಿಗಳು ಪೊಲೀಸರ ರಕ್ಷಣೆಯೊಂದಿಗೆ ಸರ್ವೇ ಕಾರ್ಯ ನಡೆಸಲು ಬಂದಿದ್ದರು, ಆದರೆ ರೈತರಿಂದ ತೀವ್ರ ಆಕ್ಷೇಪ ಬಂದ ಪರಿಣಾಮ ಘಟನೆಯು ಉಗ್ರ ಸ್ವರೂಪಕ್ಕೆ ಹೋಗುತ್ತಿತ್ತು. ಆದರೆ ಕೆಲವು ರೈತರು ಸದರಿ ವಿಷಯವನ್ನು ತಹಶೀಲ್ದಾರ್‌ರವರ ಗಮನಕ್ಕೆ ತಂದ ಪರಿಣಾಮ ಸ್ಥಳಕ್ಕೆ ದೌಡಾಯಿಸಿದ ತಹಶೀಲ್ದಾರ್ ರಾಜೇಶ್ವರಿ ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ಯಶಸ್ವಿಯಾದರು.

ಸ್ಥಳಕ್ಕೆ ಆಗಮಿಸಿದ್ದ ತಹಶೀಲ್ದಾರ್, ಎನ್.ಹೆಚ್.ಎ.ಐ. ಅಧಿಕಾರಿಗಳೊಂದಿಗೆ ಸ್ಥಳದಲ್ಲಿಯೇ ಚರ್ಚೆ ನಡೆಸಿ, ರೈತರ ಅಹವಾಲುಗಳನ್ನು ಆಲಿಸಿ, ತದನಂತರ ಸವೇ ಕಾರ್ಯ ಮಾಡಿ ಕಲ್ಲುಗಳನ್ನು ಅಳವಡಿಸದಂತೆ 15 ದಿನಗಳ ಕಾಲವಕಾಶವನ್ನು ಕೊಡಿಸಿಕೊಟ್ಟಿದ್ದಾರೆ. ಜೊತೆಗೆ ಸದರಿ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ತಾವು ಗೃಹ ಸಚಿವರು, ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಹಾಗೂ ಮಾಜಿ ಶಾಸಕರು ಸೇರಿದಂತೆ ವಿವಿಧ ಮುಖಂಡರನ್ನು ಕರೆಸಿ ಸಭೆ ಮಾಡಿಸಿ, ನಂತರ ಮುಂದುವರೆಯುವುದಾಗಿ ಭರವಸೆ ನೀಡಲಾಯಿತು. ತಹಶೀಲ್ದಾರ್‌ರವರ ಭರವಸೆಗೆ ಅಧಿಕಾರಿಗಳು ಮತ್ತು ರೈತರು ಸಮ್ಮತಿಯನ್ನು ಸೂಚಿಸಿದ್ದು ಸಮಸ್ಯೆಯು ಸದ್ಯಕ್ಕೆ ತಿಳಿಯಾಗಿದೆ.

ಈ ಕುರಿತು ಸ್ಥಳೀಯ ರೈತರೊಬ್ಬರು ಮಾತನಾಡಿ, ಈ ಭಾಗದಲ್ಲಿ ಬಹುತೇಕ ರೈತರು ಸಣ್ಣ ಹಿಡುವಳಿದಾರರಾಗಿದ್ದಾರೆ. ನಮಗೆ ಬಹಳ ಅನ್ಯಾಯವಾಗುತ್ತಿದೆ, ನಮಗೆ ಇಲ್ಲಿ ಉಳುಮೆ ಮಾಡಲು ಇರುವ ಜಾಗ ಬಹಳ ಸಣ್ಣ ಪ್ರಮಾಣದಾಗಿದೆ. ಅವುಗಳನ್ನೇ ನಾವು ಬಿಟ್ಟುಕೊಟ್ಟರೆ ನಮ್ಮ ಮುಂದಿನ ಜೀವನ ತುಂಬಾ ಕಷ್ಟಕರವಾಗಿರುತ್ತದೆ, ಆದುದರಿಂದ ನಾವು ಜಮೀನುಗಳನ್ನು ನೀಡಲು ಸಿದ್ಧರಿಲ್ಲ, ಪ್ರಸ್ತುತ ಇರುವ ದಾಬಸ್‌ಪೇಟೆ ಯಿಂದ ಗುಬ್ಬಿ ರಸ್ತೆಯು 80 ಅಡಿ ರಸ್ತೆಯಿದೆ. ಅದನ್ನೇ ತಾವು ಅಭಿವೃದ್ಧಿಪಡಿಸಿಕೊಳ್ಳಬಹುದು ಅದನ್ನು ಬಿಟ್ಟು ನಮ್ಮ ಜಮೀನುಗಳ ಮೇಲೆ ಏಕೆ ರಸ್ತೆಯನ್ನು ನಿರ್ಮಾಣ ಮಾಡುತ್ತೀರಿ ಎಂದು ತಿಳಿಸಿದರು.

ನಂದಿಹಳ್ಳಿ, ಭೈರಸಂದ್ರ, ಪೆರಮನಹಳ್ಳಿ, ದೇವರಹೊಸಹಳ್ಳಿಯ ರೈತರಾದ ಜಿ.ಪಾಲನೇತ್ರಯ್ಯ, ಉದಯ್ ಕುಮಾರ್, ರಮೇಶ್, ಸಿದ್ಧಲಿಂಗಪ್ಪ, ಲಿಂಗರಾಜು, ಪ್ರಮೋದ್, ರಾಜಣ್ಣ, ಗೋವಿಂದರಾಜು ಸೇರಿ ನೂರಕ್ಕೂ ಹೆಚ್ಚು ಮಂದಿ ರೈತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular