ಕೇಂದ್ರದ ಬಿಜೆಪಿ ಸರ್ಕಾರ ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದು ಅದಕ್ಕೆ ಜನರ ಮೇಲೆ ಪ್ರೀತಿ ಇಲ್ಲ. ನರೇಂದ್ರ ಮೋದಿ ಸರ್ಕಾರ ದೇಶದ ಮಾರಾಟದಲ್ಲಿ ತೊಡಗಿದೆ ಎಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.
ಕಾಲಿಘಾಟ್ ನಲ್ಲಿ ಹಮ್ಮಿಕೊಂಡಿದ್ದ ಟಿಎಂಸಿ ಛಾತ್ರ ಪರಿಷತ್ ಪೌಂಢೇಷನ್ ಡೇ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದರು. “ಬಿಜೆಪಿ ವಿದ್ಯಾರ್ಥಿಗಳು, ಶಿಕ್ಷಕರು, ಸರ್ಕಾರಿ ನೌಕರರು ಮತ್ತು ಸಾಮಾಜಿಕ ಮಾಧ್ಯಗಳ ದನಿ ಅಡಗಿಸುವ ಕೆಲಸ ಮಾಡುತ್ತಿದೆ” ಎಂದು ದೂರಿದರು.
ಕಲ್ಲಿದ್ದಲು ಹಗರಣದ ಸಂಬಂಧ ಸಂಸದ ಅಭಿಷೇಕ್ ಬ್ಯಾನರ್ಜಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿರುವುದನ್ನು ಪ್ರಸ್ತಾಪಿಸಿದ ಅವರು “ರಾಜಕೀಯವಾಗಿ ನಮ್ಮನ್ನು ಎದುರಿಸಲಾಗದ ಬಿಜೆಪಿ ಕೇಂದ್ರ ತನಿಖಾ ಸಂಸ್ಥೆಗಳನ್ನು ಛೂಬಿಟ್ಟು ಟಿಎಂಸಿ ಮುಖಂಡರನ್ನು ಬೆದರಿಸುತ್ತಿದೆ. ಬಿಜೆಪಿ ನಮ್ಮೊಂದಿಗೆ ನೇರ ಹೋರಾಟ ಮಾಡಲು ಆಗುತ್ತಿಲ್ಲ. ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಹೋರಾಟ ಮಾಡುತ್ತಿದೆ” ಎಂದು ಆರೋಪಿಸಿದರು.
“ಕಲ್ಲಿದ್ದಲು ಹಗರಣದಲ್ಲಿ ಬಿಜೆಪಿ ಸಚಿವರು ಶಾಮೀಲಾಗಿದ್ದಾರೆ. ಬಿಜೆಪಿ ನಮಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳನ್ನು ತೋರಿಸಿತು. ನಾವು ಬಿಜೆಪಿ ನಾಯಕರ ವಿರುದ್ಧ ಕೇಂದ್ರ ಸಂಸ್ಥೆಗೆ ದಾಖಲೆ ನೀಡಿದ್ದೇವೆ” ಎಂದು ತಿರುಗೇಟು ನೀಡಿದರು.
ಮಾನವ ಹಕ್ಕುಗಳ ಆಯೋಗ ಸೇರಿದಂತೆ ಇತರೆ ಆಯೋಗಗಳು ರಾಜಕೀಯಕರಣಗೊಂಡಿವೆ. ಆಯೋಗದ ಸದಸ್ಯರೆಲ್ಲ ಬಿಜೆಪಿ ಸದಸ್ಯರಾಗಿದ್ದಾರೆ ಎಂದು ಆರೋಪಿಸಿದ ಮಮತ, ಚುನಾವಣೋತ್ತರ ಹಿಂಸಾಚಾರದಲ್ಲಿ 5 ಮಂದಿ ಬಿಜೆಪಿ ಕಾರ್ಯಕರ್ತರು, 16 ಮಂದಿ ಟಿಎಂಸಿ ಕಾರ್ಯಕರ್ತರು ಮೃತಪಟ್ಟಿದ್ದಾರೆ ಎಂದು ಹೇಳಿದರು.
ಸಿಬಿಐ ಜೊತೆಗೆ ನಮ್ಮ ಸಮಸ್ಯೆ ಏನೂ ಇಲ್ಲ. ಆದರೆ ಸಿಬಿಐ ಅಧಿಕಾರಿಗಳೇಕೆ ಬಿಜೆಪಿ ನಾಯಕರನ್ನು ಹಳ್ಳಿಗಳಿಗೆ ಕರೆದುಕೊಂಡು ಹೋಗಿದ್ದರು ಎಂದು ಮಮತ ಪ್ರಶ್ನಿಸಿದ್ದಾರೆ.
ನಮ್ಮ ಆದ್ಯತೆ ಜನರಿಗಾಗಿ ಕೆಲಸ ಮಾಡುವುದು. ದೆಹಲಿಯಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ರಾಜಕೀಯದಲ್ಲಿ ನಮಗೆ ಸ್ಪರ್ಧಿಯಲ್ಲ. ಹೀಗಿದ್ದರೂ ಕೆಲವರು ಪಕ್ಷ ತೊರೆದು ಹೋದರು. ಈಗ ಅವರು ಹಿಂದಿರುಗಿದ್ದಾರೆ. ಕಾರಣ ಅವರ ಮನೆ ಟಿಎಂಸಿ’ ಆಗಿದೆ ಎಂದು ವಿವರಿಸಿದರು.
“ಜೈಹಿಂದ್, ವಂದೇಮಾತರಂ, ಕೇಲಾ ಹೋ ಎಂದು ನಾವೇಕೆ ಹೇಳಬೇಕು. ಅಸಹಾಯಕ ಜನರ ನೆರವಿಗೆ ವಿದ್ಯಾರ್ಥಿಗಳು ಮುಂದೆ ಬರಬೇಕು. ಅದು ಅವರ ಭವಿಷ್ಯ. ನಾವು ಹೊಸ ರಾಜಕೀಯ ಸಮೀಕರಣಕ್ಕೆ ಮುಂದಾಗಿದ್ದೇವೆ. ಅದರ ನಾಯಕತ್ವ ಮತ್ತು ನೇತೃತ್ವವನ್ನು ವಿದ್ಯಾರ್ಥಿಗಳೇ ವಹಿಸಿಕೊಳ್ಳಬೇಕು” ಎಂದರು.


