ರಾಜ್ಯ ಬಿಜೆಪಿಗೆ ನೂತನ ಅಧ್ಯಕ್ಷರು ಯಾರಾಗಲಿದ್ದಾರೆ ಎಂಬ ಕುರಿತಂತೆ ಚರ್ಚೆ ನಡೆದಿರುವ ಬೆನ್ನಲ್ಲೇ ವಿಧಾನಸಭೆಯ ಪ್ರತಿಪಕ್ಷ ನಾಯಕರ ಬದಲಾವಣೆಯಾಗುತ್ತಿದೆ ಎಂಬ ಸುದ್ದಿ ವ್ಯಾಪಕವಾಗಿದೆ.
ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರ ಕಾರ್ಯವೈಖರಿಯ ಬಗ್ಗೆ ಹೈಕಮಾಂಡ್ ಅಸಮಾಧಾನಗೊಂಡಿದೆ. ಅವರನ್ನು ಬದಲಾಯಿಸಲು ತೀರ್ಮಾನಿಸಿದ್ದು ಇದಕ್ಕಾಗಿ ಚರ್ಚೆ ನಡೆಸಲು ಅವರನ್ನು ದೆಹಲಿಗೆ ಕರೆಸಿಕೊಳ್ಳಲಾಗಿದೆ ಸುದ್ದಿಗಳು ಹರಡಿದ್ದು ಅದನ್ನು ಅಶೋಕ್ ತಳ್ಳಿ ಹಾಕಿದ್ದಾರೆ.
ದೆಹಲಿ ಪ್ರವಾಸದ ನಂತರ ಬೆಂಗಳೂರಿಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಪ್ರತಿಪಕ್ಷ ನಾಯಕರು ಬದಲಾವಣೆಯಾಗುತ್ತಿದೆ ಎನ್ನುವುದು ಮಾಧ್ಯಮಗಳಲ್ಲಿ ಮಾತ್ರ ಬರುತ್ತಿದೆ. ಈ ಬಗ್ಗೆ ಎಲ್ಲಿಯೂ ಚರ್ಚೆ ನಡೆದಿಲ್ಲ. ಪಕ್ಷದ ಕಾರ್ಯವೈಖರಿ ಕುರಿತಂತೆ ಮೂರು ತಿಂಗಳಿಗೊಮ್ಮೆ ಬಂದು, ವರದಿಯನ್ನು ಕೊಡಬೇಕು ಎನ್ನುವ ಸೂಚನೆಯಿತ್ತು, ಅದಕ್ಕಾಗಿ ದೆಹಲಿಗೆ ಹೋಗಿದ್ದೆ ಎಂದು ತಿಳಿಸಿದರು
ಮೂರು ತಿಂಗಳಾದ ಮೇಲೆ ಮತ್ತೆ ಬನ್ನಿ ಎಂದು ಹೇಳಿದ್ದಾರೆ. ಹಾಗಾಗಿ, ಮತ್ತೆಯೂ ಹೋಗುತ್ತೇನೆ. ಈ ಹಿನ್ನೆಲೆಯಲ್ಲಿ ಪ್ರತಿಪಕ್ಷದ ನಾಯಕನ ಸ್ಥಾನದಿಂದ ನನ್ನನ್ನು ತೆಗೆಯಲಾಗುತ್ತದೆ ಎನ್ನುವ ಸುದ್ದಿಗೆ ಅರ್ಥವೇ ಇಲ್ಲ. ರಾಜ್ಯದಲ್ಲಿ ಹದಿನೈದು ದಿನಕ್ಕೊಮ್ಮೆ ಸಭೆ ನಡೆಸಲು ವರಿಷ್ಠರು ಸೂಚನೆಯನ್ನು ನೀಡಿದ್ದಾರೆ, ಅದನ್ನು ಪಾಲಿಸುತ್ತೇವೆ ಎಂದು ಹೇಳಿದರು
ಪ್ರತಿಪಕ್ಷ ನಾಯಕರು ಮಾತ್ರವಲ್ಲ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಬದಲಾವಣೆಯ ಚರ್ಚೆಯೇ ದೆಹಲಿಯಲ್ಲಿ ನಡೆದಿಲ್ಲ, ಅದ್ಯಾಕೆ ಅದು ಸುದ್ದಿಯಾಗುತ್ತಿದೆಯೇ ನನಗೆ ಗೊತ್ತಿಲ್ಲ ಎಂದು ತಿಳಿಸಿದರು.
ಪಕ್ಷ ಸಂಘಟನೆಯ ಕುರಿತಾಗಿ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲು ಮಾಜಿ ಸಚಿವ ಡಾ. ಅಶ್ವಥ್ ನಾರಾಯಣ ಅವರ ಮನೆಯಲ್ಲಿ ಸಭೆಯನ್ನು ನಾವೇ ಆಯೋಜಿಸಿದ್ದದ್ದು. ಅಸಲಿಗೆ ಈ ಸಭೆ ನನ್ನ ಮನೆಯಲ್ಲಿ ನಡೆಯಬೇಕಿತ್ತು, ನಾನು ದೆಹಲಿಯಲ್ಲಿ ಇದ್ದ ಕಾರಣ, ಅಲ್ಲಿ ಸಭೆ ನಡೆಯಿತು ಎಂದು ಸ್ಪಷ್ಟಪಡಿಸಿದರು
ಇಬ್ಬರು ಹಿರಿಯ ನಾಯಕರಿಗೆ ಒಳಶಮನವನ್ನು ಕಂಟ್ರೋಲ್ ಮಾಡುವ ಜವಾಬ್ದಾರಿಯನ್ನು ನೀಡಲಾಗಿತ್ತು. ಅದರಂತೆಯೇ, ಹಿರಿಯರಾದ ಪ್ರಲ್ಹಾದ ಜೋಶಿಯವರು ನೇತೃತ್ವದಲ್ಲಿ ಸಭೆ ನಡೆದಿದೆ. ಜಿಲ್ಲಾವಾರು ಪ್ರವಾಸವನ್ನು ಮಾಡಿ, ಎಲ್ಲಾದರೂ ಸಮಸ್ಯೆ ಇದ್ದರೆ ಅದನ್ನು ನಿವಾರಣೆಗೊಳಿಸಲಾಗುವುದು ಎಂದು ತಿಳಿಸಿದರು


