Thursday, January 29, 2026
Google search engine
Homeಮುಖಪುಟಡಿಸಿಎಂ ಡಿಕೆ ಶಿವಕುಮಾರ್ ಭೇಟಿ ಮಾಡಿದ ಪರಮೇಶ್ವರ್-ಕುತೂಹಲ ಕೆರಳಿಸಿದ ಮಾತುಕತೆ

ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ಮಾಡಿದ ಪರಮೇಶ್ವರ್-ಕುತೂಹಲ ಕೆರಳಿಸಿದ ಮಾತುಕತೆ

ಬರುವ ಆಗಸ್ಟ್ ಸೆಪ್ಟೆಂಬರ್ ವೇಳೆಗೆ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆಗಳು ನಡೆಯಲಿವೆ ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ಹೇಳಿರುವ ಬೆನ್ನಲ್ಲೇ ಗೃಹ ಮಂತ್ರಿ ಜಿ ಪರಮೇಶ್ವರ್ ಅವರು ಕಳೆದರಾತ್ರಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. 

ಮಧ್ಯರಾತ್ರಿಯ ವೇಳೆಗೆ ಸದಾಶಿವನಗರದಲ್ಲಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಆಗಮಿಸಿದ ಪರಮೇಶ್ವರ್ ಸುದೀರ್ಘ ಅವಧಿಯವರೆಗೆ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ. 

ಎರಡುವರೆ ವರ್ಷಗಳ ಅಧಿಕಾರ ಮುಗಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಆನಂತರ ತಮ್ಮ ಹುದ್ದೆಯನ್ನು ತೆರವು ಮಾಡಲಿದ್ದಾರೆ ಎಂದು ಒಂದು ವರ್ಗ ಹೇಳುತ್ತಿರುವ ನಡುವೆ ಇನ್ನೊಂದು ಬಣ ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ತಮ್ಮ ಸ್ಥಾನ ತೊರೆಯುವುದಿಲ್ಲ ಐದು ವರ್ಷ ಅಧಿಕಾರ ಅವಧಿ ಪೂರ್ಣಗೊಳಿಸುತ್ತಾರೆ ಎಂದು ವಾದಿಸುತ್ತಿದೆ.

ಇದರ ನಡುವೆ ಪರಮೇಶ್ವರ್ ಮತ್ತು ಡಿಕೆ ಶಿವಕುಮಾರ್ ನಡುವೆ ನಡೆದಿರುವ ಮಾತುಕತೆ ಕುತೂಹಲ ಮೂಡಿಸಿದೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಮ್ಮ ನಿವಾಸದಲ್ಲಿ ಗೃಹ ಮಂತ್ರಿ ಪರಮೇಶ್ವರ್ ಅವರೊಂದಿಗೆ ಹಲವಾರು ರಾಜಕೀಯ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದೇನೆ ಆದರೆ ಅಧಿಕಾರ ಹಂಚಿಕೆ ಕುರಿತಾಗಿ ಈ ವೇಳೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ತಿಳಿಸಿದ್ದಾರೆ.

ಗೃಹ ಸಚಿವರು ನನ್ನ ಜೊತೆ ಪಕ್ಷ ಸಂಘಟನೆಯ ಕುರಿತು ಚರ್ಚೆ ಮಾಡಿದ್ದಾರೆ ಪಕ್ಷ ಮತ್ತು ಸರ್ಕಾರ ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ ಅದನ್ನು ಹೊರತುಪಡಿಸಿ ಅಧಿಕಾರ ಹಂಚಿಕೆ ಕುರಿತಾಗಿ ಯಾವುದೇ ಮಾತುಕತೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜ್ಯ ಕಾಂಗ್ರೆಸ್ಸಿನಲ್ಲಿ ಉಂಟಾಗಿರುವ ಬೆಳವಣಿಗೆಗಳ ಕುರಿತಂತೆ ಚರ್ಚಿಸಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇ ವಾಲ ಅವರು ಸೋಮವಾರ ಮಧ್ಯಾಹ್ನ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. 

ಸೋಮವಾರ ಪಕ್ಷದ ಎಲ್ಲಾ ಪ್ರಮುಖ ನಾಯಕರೊಂದಿಗೆ ಸಭೆ ನಡೆಸಲಿರುವ ಅವರು ಸರ್ಕಾರ ಮತ್ತು ಪಕ್ಷದ ನಡುವೆ ಉಂಟಾಗಿರುವ ಸಮನ್ವಯದ ಕೊರತೆಯನ್ನು ನಿವಾರಿಸಲು ಪ್ರಯತ್ನಿಸಲಿದ್ದಾರೆ ಎಂದು ಹೇಳಲಾಗಿದೆ.

ಆನಂತರ ಕೆಲವು ಮಂತ್ರಿಗಳು ಮತ್ತು ಶಾಸಕರೊಂದಿಗೆ ಪ್ರತ್ಯೇಕ ಸಭೆ ನಡೆಸಲಿರುವ ಅವರು ಹೈಕಮಾಂಡ್ ನೀಡಿರುವ ಸೂಚನೆ ಅನ್ವಯ ಕೆಲವು ನಿರ್ಧಾರಗಳನ್ನು ಪ್ರಕಟಿಸಲಿದ್ದಾರೆ ಪಕ್ಷ ಮತ್ತು ಸರ್ಕಾರದ ನಡುವೆ ಉತ್ತಮ ಸಂಬಂಧ ಏರ್ಪಡಿಸುವ ನಿಟ್ಟಿನಲ್ಲಿ ಪ್ರತ್ಯೇಕ ಸಮಿತಿಯೊಂದನ್ನು ರಚಿಸುವ ಸಾಧ್ಯತೆ ಇದ್ದು ಪ್ರಣಾಳಿಕೆ ಅನುಷ್ಠಾನ ಕುರಿತಂತೆ ಸಮಿತಿಯೊಂದನ್ನು ರಚಿಸಲಿದ್ದಾರೆ ಎಂದು ಗೊತ್ತಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular