ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ, ಎಲ್ಲಾ ಇಲಾಖೆಗಳಲ್ಲೂ ಲಂಚಗುಳಿತನ, ಭ್ರಷ್ಟಾಚಾರ ತುಂಬಿದೆ ಎಂದು ಆಪಾದಿಸಿ ಜಿಲ್ಲಾ ಜೆಡಿಎಸ್ ಮುಖಂಡರು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ರಾಜ್ಯಪಾಲರಿಗೆ ಮನವಿ ಮಾಡಿದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ ನೇತೃತ್ವದಲ್ಲಿ ವಿವಿಧ ಘಟಕಗಳ ಮುಖಂಡರು ಜಿಲ್ಲಾ ಜೆಡಿಎಸ್ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆಯಲ್ಲಿ ಆಗಮಿಸಿ, ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸಿದರೂ ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ, ಎಲ್ಲಾ ಕ್ಷೇತ್ರಗಳಲ್ಲೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ದಿನ ಬಳಕೆ ಪದಾರ್ಥಗಳ ಬೆಲೆ ವಿಪರೀತ ಏರಿಕೆಯಾಗಿ ಜನಸಾಮಾನ್ಯರ ಬದುಕು ಆತಂಕಕಾರಿಯಾಗಿದೆ. ಸ್ವಜನ ಪಕ್ಷಪಾತಿಯಾದ ಕಾಂಗ್ರೆಸ್ ಸರ್ಕಾರ ಜನರಹಿತ ಕಡೆಗಣಿಸಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರದ ಹಿರಿಯ ಶಾಸಕರೇ ಭ್ರಷ್ಟಾಚಾರದ ಬಗ್ಗೆ ದಾಖಲೆಗಳನ್ನು ಬಹಿರಂಗಗೊಳಿಸಿ ಸರ್ಕಾರ ದುರಾಡಳಿತವನ್ನು ಸಾರಿ ಹೇಳಿದ್ದಾರೆ. ಇಂತಹ ಜನ ವಿರೋಧಿ ಸರ್ಕಾರ ರಾಜ್ಯದ ಜನರ ಪಾಲಿಗೆ ದೊಡ್ಡ ಶಾಪವಾಗಿದೆ. ಆಡಳಿತ ನಿಭಾಯಿಸಲು ವಿಫಲರಾಗಿರುವ ಮುಖ್ಯಮಂತ್ರಿಗಳು ತಕ್ಷಣ ರಾಜೀನಾಮೆ ನೀಡಿ ಸರ್ಕಾರವನ್ನು ವಿಸರ್ಜಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ ಮಾತನಾಡಿ, ಸರ್ಕಾರದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಬಡವರಿಗೆ ಮನೆ, ನಿವೇಶ ವಿತರಣೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಕಾಂಗ್ರೆಸ್ ಶಾಸಕರೇ ಆರೋಪ ಮಾಡಿದ್ದಾರೆ. ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಲಂಚವೇ ಮನೆ ಮಾಡಿದೆ. ಇತ್ತೀಚೆಗೆ ಕಂದಾಯ ಸಚಿವರು ಕಚೇರಿಗಳ ಲಂಚದ ಬಗ್ಗೆ ಬೋರ್ಡ್ ಹಾಕಿಬಿಡಿ ಎಂದು ಹೇಳಿದ್ದೂ ಸರ್ಕಾರದ ಆಡಳಿತಕ್ಕೆ ಕನ್ನಡಿ ಹಿಡಿದಂತಾಗಿದೆ ಎಂದರು.
ಮಾಜಿ ಶಾಸಕ ಹೆಚ್.ನಿಂಗಪ್ಪ ಮಾತನಾಡಿ, ಜನರಿಗೆ ಕನಿಷ್ಟ ಮೂಲಭೂತ ಸೌಲಭ್ಯ ಒದಗಿಸುವಲ್ಲೂ ಸರ್ಕಾರ ವಿಫಲವಾಗಿದೆ. ರಸ್ತೆ, ಸೇತುವೆ, ಕೆರೆಕಟ್ಟೆಗಳ ಪುನಶ್ಚೇತನ, ಕುಡಿಯುವ ನೀರಿನಂತಹ ಅಗತ್ಯ ಸೌಕರ್ಯಗಳನ್ನೂ ಮಾಡುತ್ತಿಲ್ಲ. ಪರಿಶಿಷ್ಟರಿಗೆ ಮೀಸಲಾದ ಹಣವನ್ನೂ ದುರ್ಬಳಕೆ ಮಾಡಿಕೊಳ್ಳುತ್ತಾ ಆ ವರ್ಗದ ಜನರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಜಿಲ್ಲಾ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಮುಖಂಡರಾದ ಗುಬ್ಬಿಯ ನಾಗರಾಜು, ಕೆ.ಟಿ.ಶಾಂತಕುಮಾರ್, ಎಲ್ಲಾ ತಾಲ್ಲೂಕು ಘಟಕಗಳ ಅಧ್ಯಕ್ಷರು, ವಿವಿಧ ಘಟಕಗಳ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


