ಶಿಕ್ಷಣದ ಜೊತೆಗೆ ಉದ್ಯೋಗಖಾತ್ರಿಯೂ ಇರುವ ಜಿಟಿಟಿಸಿ ನೀಡುತ್ತಿರುವ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ ಗಳಿಗೆ ಗ್ರಾಮೀಣ ಯುವಜನರು ಸೇರ್ಪಡೆಗೊಳ್ಳುವ ಮೂಲಕ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳುವಂತೆ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ.
ತುಮಕೂರು ಹಿರೇಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಇರುವ ಸರಕಾರಿ ಟೂಲ್ಸ್ ಅಂಡ್ ಟ್ರೈನಿಂಗ್ ಸೆಂಟರ್‌ನಲ್ಲಿ 2025-26ನೇ ಸಾಲಿನ ಪ್ರಥಮ ವರ್ಷದ ಜಿಟಿಟಿಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಸ್.ಎಸ್.ಎಲ್.ಸಿ ಪಾಸಾದ ವಿದ್ಯಾರ್ಥಿಗಳು ಜಿಟಿಟಿಸಿ ಕೋರ್ಸುಗಳನ್ನು ಆಯ್ಕೆ ಮಾಡಿಕೊಂಡರೆ ಶೇ 100 ರಷ್ಟು ಉದ್ಯೋಗವನ್ನು ಪಡೆಯಬಹುದು ಎಂದರು.
ಜಿಟಿಟಿಸಿ ಸರಕಾರದ ತಾಂತ್ರಿಕ ಮತ್ತು ಕೌಶಲ್ಯಾಭಿದ್ದಿ ಇಲಾಖೆಯ ಅಡಿಯಲ್ಲಿ ನಡೆಯುತ್ತಿದ್ದು, ಆರು ತಿಂಗಳಿನಿಂದ ನಾಲ್ಕುವರೆ ವರ್ಷಗಳವರೆಗಿನ ಕೋರ್ಸುಗಳಿದ್ದು, ಇಲ್ಲಿನ ಕೋರ್ಸುಗಳಿಗೆ ಹೊರರಾಜ್ಯದ, ಹೊರ ಜಿಲ್ಲೆಯ ವಿದ್ಯಾರ್ಥಿಗಳು ಬಂದು ಪ್ರವೇಶ ಪಡೆಯುತ್ತಿದ್ದಾರೆ. ಆದರೆ ತುಮಕೂರಿನ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಹಾಗಾಗಿ ಸ್ಥಳೀಯ ವಿದ್ಯಾರ್ಥಿಗಳು ಇದರ ಸೌಲಭ್ಯ ಪಡೆದುಕೊಳ್ಳಬೇಕು. ಎಸ್.ಎಸ್.ಎಲ್,ಸಿ, ಪಿಯುಸಿ, ಪದವಿ ಪಡೆದ ಮಕ್ಕಳಿಗೆ ಇಲ್ಲಿ ವಿವಿಧ ಕೋರ್ಸುಗಳಿದ್ದು, ಇಲ್ಲಿ ಕಲಿತವರಿಗೆ ಭಾರತದಲ್ಲಿಯೇ ಅಲ್ಲ, ವಿದೇಶಗಳಲ್ಲಿಯೂ ಒಳ್ಳೆಯ ಬೆಲೆ ಇದೆ ಎಂದು ಹೇಳಿದರು.
ಜಿಟಿಟಿಸಿ ಪ್ರಾಂಶುಪಾಲ ಜಯಪ್ರಕಾಶ್ ಮಾತನಾಡಿ, ಯುವ ಪಿಳೀಗೆಗೆ ಇಂದು ಬೇಕಾಗಿರುವುದು ಕೇವಲ ಪದವಿ ಸರ್ಟಿಫಿಕೇಟ್ ಅಲ್ಲ, ಬದಲಿಗೆ ಉದ್ಯೋಗ. ಹಾಗಾಗಿ ಶಿಕ್ಷಣದ ಜೊತೆಗೆ ಉದ್ಯೋಗವನ್ನು ದೊರಕಿಸಿಕೊಡುವ ಇಂತಹ ಕೋರ್ಸುಗಳನ್ನು ಯುವಜನತೆ ಆಯ್ಕೆ ಮಾಡಿಕೊಂಡರೆ ಶೇ100 ರಷ್ಟು ಉದ್ಯೋಗ ಪಡೆಯಬಹುದು. ನಮ್ಮಲ್ಲಿ ಸೇರ್ಪಡೆಯಾಗುವ ವಿದ್ಯಾರ್ಥಿಗಳಲ್ಲಿ ಕ್ಯಾಟಗರಿಯೇ ಮೇಲೆ ಯಾವುದೇ ಶುಲ್ಕ ರಿಯಾಯಿತಿ ಇಲ್ಲ ಎಂದರು.
ಬದಲಿಗೆ, ಇಂಡಸ್ಟ್ರೀ ತರಬೇತಿಗೆ ಹೋದಂತಹ ಸಂದರ್ಭದಲ್ಲಿ ಅಲ್ಲಿ ದೊರೆಯುವ ಶಿಷ್ಯವೇತನದಿಂದಲೇ ನಾಲ್ಕು ವರ್ಷಗಳ ಕಾಲ ಕಟ್ಟಿರುವ ಶುಲ್ಕವನ್ನು ವೇತನದ ರೂಪದಲ್ಲಿ ಪಡೆಯುಬಹುದು. ಒಂದು ರೀತಿಯಲ್ಲಿ ಶೂನ್ಯದಲ್ಲಿ ಡಿಪ್ಲಮೋ ವಿದ್ಯಾಭ್ಯಾಸ ಮಾಡಿದಂತಾಗುತ್ತದೆ. ಕರ್ನಾಟಕದ 33 ಕಡೆಗಳಲ್ಲಿ ಜಿಟಿಟಿಸಿ ಟ್ರೈನಿಂಗ್ ಸೆಂಟರ್ ಇದ್ದು, ಹೊಸ ಹೊಸ ಕೋರ್ಸುಗಳನ್ನು ಅಳವಡಿಸಿದೆ. ವಿದ್ಯಾರ್ಥಿಗಳು ಮತ್ತು ಪೋಷಕರು ತಮ್ಮ ಹತ್ತಿರದ ಜಿಟಿಟಿಸಿ ಸೆಂಟರ್‌ಗೆ ಭೇಟಿ ನೀಡಿ ಖುದ್ದು ಪರಿಶೀಲಿಸುವ ಮೂಲಕ ತಮಗಿರುವ ಸೌಲಭ್ಯಗಳನ್ನು ಬಳಕೆ ಮಾಡಿಕೊಳ್ಳಬಹುದು ಎಂದರು.
ಕೌಶಲ್ಯಾಭಿವೃದ್ದಿ ಇಲಾಖೆಯ ಅಧಿಕಾರಿ ಅಂಜನಮೂರ್ತಿ, ಶಿಕ್ಷಕರಾದ ಗಂಗಾಧರ್, ಕಿಶೋರ್‌ಕುಮಾರ್, ಸಿಡಾಕ್ ಜಂಟಿ ನಿರ್ದೇಶಕಿ ಶೋಭಾಶ್ರೀ ಮತ್ತಿತರರು ಇದ್ದರು.


