Thursday, January 29, 2026
Google search engine
Homeಮುಖಪುಟವಿದ್ಯುತ್ ಪ್ರಸರಣ ಇಲಾಖೆಯ 35 ಸಾವಿರ ಹುದ್ದೆಗಳ ಭರ್ತಿ

ವಿದ್ಯುತ್ ಪ್ರಸರಣ ಇಲಾಖೆಯ 35 ಸಾವಿರ ಹುದ್ದೆಗಳ ಭರ್ತಿ

ವಿದ್ಯುತ್ ಪ್ರಸರಣ ಇಲಾಖೆಯಲ್ಲಿ ಖಾಲಿ ಇರುವ 35,000 ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು. ಇಲಾಖೆಯ 532 ಮಂದಿ ಪೌರ ಕಾರ್ಮಿಕರ ಹುದ್ದೆ ಕಾಯಂ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಆಯೋಜಿಸಿದ್ದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘದ ವಜ್ರ ಮಹೋತ್ಸವವನ್ನು ಉದ್ಘಾಟಿಸಿ, ವಜ್ರಜ್ಯೋತಿ ಸ್ಮರಣ ಸಂಚಿಕೆ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ನಮ್ಮದು ನುಡಿದಂತೆ ನಡೆಯುವ ಸರ್ಕಾರ. ನಿಮ್ಮ ಬೇಡಿಕೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ. ಎನ್‌ಪಿಎಸ್ ಜಾರಿ ಮಾಡಿದ್ದು ಕೇಂದ್ರ ಸರ್ಕಾರ. ನಾವು ಒಪಿಎಸ್ ಜಾರಿಯನ್ನು ಪ್ರಣಾಳಿಕೆಯಲ್ಲೇ ಘೋಷಿಸಿದ್ದೇವೆ. ಈ ಬಗ್ಗೆ ಚರ್ಚಿಸಿ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

1964ರಲ್ಲಿ ಆರಂಭವಾದ ನೌಕರರ ಸಂಘ ಇಷ್ಟು ಸುದೀರ್ಘ ಕಾಲ ನಿರಂತರವಾಗಿ ನೌಕರರ ಕಷ್ಟ ಸುಖಗಳಿಗೆ ಸ್ಪಂದಿಸಿ, ಪ್ರಾಮಾಣಿಕ ಹೋರಾಟ ನಡೆಸುತ್ತಿದೆ. ಜೊತೆಗೆ ಗ್ರಾಹಕರಿಗೆ ಸಮರ್ಪಕ ವಿದ್ಯುತ್ ಪೂರೈಸುವ ಹೊಣೆಗಾರಿಕೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದೀರಿ. ಇದಕ್ಕೆ ನೀವೆಲ್ಲರೂ ಅಭಿನಂದನಾರ್ಹರು ಎಂದು ಶ್ಲಾಘಿಸಿದರು.

ಇಡೀ ಏಷ್ಯಾದಲ್ಲಿ ಮೊದಲಿಗೆ ವಿದ್ಯುತ್ ಉತ್ಪಾದನೆ ಆಗಿದ್ದು 1902 ರಲ್ಲಿ ಕರ್ನಾಟಕದಲ್ಲಿ. 1905 ರಲ್ಲಿ ಬೆಂಗಳೂರಿನಲ್ಲಿ ಪ್ರಥಮ ವಿದ್ಯುತ್ ಸರಬರಾಜು ಕಂಪನಿ ಆರಂಭಿಸಲಾಯಿತು. 1908 ರಲ್ಲಿ ಮೊದಲ ಬಾರಿ ಅರಮನೆಗೆ ವಿದ್ಯುತ್ ಬಂತು. ಅಲ್ಲಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಹಂತ ಹಂತವಾಗಿ ಪ್ರಗತಿ ಸಾಧಿಸುತ್ತಾ, ಇಂದು 34,000 ಮೆಗಾ ವ್ಯಾಟ್ ಉತ್ಪಾದನೆ ಮಾಡುತ್ತಿರುವ ರಾಜ್ಯ ಎನ್ನುವ ಹೆಗ್ಗಳಿಕೆ ನಮ್ಮದಾಗಿದೆ ಎಂದರು.

ಆಹಾರ ಉತ್ಪಾದನೆಯಲ್ಲಿ ನಾವು ಸ್ವಾವಲಂಬಿಗಳಾಗುತ್ತಿರುವುದು ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗಿರುವ ಕಾರಣಕ್ಕೇ. ರೈತರ ಕೃಷಿಗೆ ಪಂಪ್ ಸೆಟ್ ಗಳಿಗೆ ಹಗಲಲ್ಲೂ 7 ಗಂಟೆ ಅಗತ್ಯ ವಿದ್ಯುತ್ ಸರಬರಾಜು ಮಾಡಲು ಶಕ್ತರಾಗುತ್ತೇವೆ. ಈ ಗುರಿ ಇಟ್ಟುಕೊಂಡು ಕೆಲಸಗಳು ನಡೆಯುತ್ತಿವೆ. 60,000 ಮೆಗಾ ವ್ಯಾಟ್ ಉತ್ಪಾದನೆ ಗುರಿ ನಾವು ತಲುಪಿದ ತಕ್ಷಣ ಇದು ಸಾಧ್ಯವಾಗಲಿದೆ. ವಿದ್ಯುತ್ ಪ್ರಮುಖ ಕಚ್ಚಾವಸ್ತು ಎನ್ನುವುದನ್ನು ನಾವು ಮರೆಯಬಾರದು ಎಂದು ಹೇಳಿದರು.

ನೌಕರರು ಮತ್ತು ಕಾರ್ಮಿಕರು ಬಹಳ ಶ್ರಮ ವಹಿಸಿ ಕೆಲಸ ನಿರ್ವಹಿಸುತ್ತಿದ್ದೀರಿ. ನಿಮ್ಮ ಎಲ್ಲಾ ಬೇಡಿಕೆಗಳನ್ನೂ ಈಡೇರಿಸಲು ನಮ್ಮ ಸರ್ಕಾರ ಸಿದ್ಧವಿದೆ. ನಾವು ನಿಮ್ಮ ಜೊತೆಗೆ ಇದ್ದೇವೆ. ನೀವು ನಮ್ಮ ಜೊತೆಗೆ ಇರಬೇಕು ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular