Thursday, January 29, 2026
Google search engine
Homeಮುಖಪುಟಸರ್ಕಾರದ ಜನವಿರೋಧಿ ನೀತಿಗಳನ್ನು ಪ್ರಶ್ನಿಸುವ ಯುವಕರೇ ಇಲ್ಲ-ಜನಪರ ಚಿಂತಕ ಕೆ.ದೊರೈರಾಜ್ ಕಳವಳ

ಸರ್ಕಾರದ ಜನವಿರೋಧಿ ನೀತಿಗಳನ್ನು ಪ್ರಶ್ನಿಸುವ ಯುವಕರೇ ಇಲ್ಲ-ಜನಪರ ಚಿಂತಕ ಕೆ.ದೊರೈರಾಜ್ ಕಳವಳ

ಸರ್ಕಾರಗಳು ಜಾರಿ ಮಾಡುವ ನೀತಿಗಳನ್ನು ಅಧ್ಯಯನ ಮಾಡಿ, ಅವುಗಳು ಜನವಿರೋಧಿಯಾಗಿದ್ದರೆ ಪ್ರಶ್ನೆ ಮಾಡುವ ಕೆಲಸವಾಗಬೇಕು ಮತ್ತು ಅದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ಜನಪರ ಚಿಂತಕ ಕೆ.ದೊರೈರಾಜ್ ತಿಳಿಸಿದರು.

ಒಳಮೀಸಲಾತಿ ಹೋರಾಟ ಸಮಿತಿ ಹಾಗೂ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ತುಮಕೂರು ನಗರದ ಎನ್.ಆರ್.ಕಾಲೋನಿಯ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ದಲಿತ ಚಳವಳಿಯ ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪ ಜನ್ಮದಿನಾಚರಣೆ ಹಾಗೂ ಒಳಮೀಸಲಾತಿ ಮುಂದಿನ ಹೆಜ್ಜೆ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರಸ್ತುತ ಸಂದರ್ಭದಲ್ಲಿ ಜನವಿರೋಧಿಯಾಗಿರುವ ಸರ್ಕಾರಗಳ ನೀತಿಗಳನ್ನು ಯಾರೂ ಪ್ರಶ್ನಿಸುತ್ತಿಲ್ಲ. ಹೀಗಾಗಿ ಯುವ ಪೀಳಿಗೆ ಸರ್ಕಾರದ ನೀತಿಗಳ ಅಧ್ಯಯನ ಮಾಡಿ ಅವುಗಳು ಜನವಿರೋಧಿಯಾಗಿದ್ದರೆ ಅವುಗಳನ್ನು ಪ್ರಶ್ನೆ ಮಾಡಬೇಕು ಮತ್ತು ಜನರಿಗೆ ಮನವರಿಕೆ ಮಾಡಿಕೊಡಬೇಕು. ಆದರೆ ಸರ್ಕಾರದ ನೀತಿಗಳನ್ನು ಪ್ರಶ್ನಿಸುವವರೇ ಇಲ್ಲವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಚಂದ್ರಗುತ್ತಿಯ ಬೆತ್ತಲೆ ಸೇವೆ ವಿರುದ್ದದ ಹೋರಾಟ ಮಹತ್ವವಾದದ್ದು. ಕೃಷ್ಣಪ್ಪ ಅದರ ವಿರುದ್ದ ಹೋರಾಡಿದರು. ರಾಜಕಾರಣಿಗಳು, ಸ್ವಾಮೀಜಿಗಳು ಇದ್ದರೂ ಬೆತ್ತಲೆ ಸೇವೆ ಸರಿಯಾದುದಲ್ಲ ಎಂದು ಅವರ್ಯಾರು ಚಕಾರ ಎತ್ತಲಿಲ್ಲ. ಬೆತ್ತಲೆ ಸೇವೆಯಲ್ಲಿ ನೂರಕ್ಕೆ 99ರಷ್ಟು ಮಾದಿಗರ ಹೆಣ್ಣು ಮಕ್ಕಳು ತೊಡಗಿಸಿಕೊಂಡಿದ್ದರು. ಹೊಳೆಯಲ್ಲಿ ಬಟ್ಟೆ ಬಿಚ್ಚಿಹಾಕಿ ದೇವಸ್ಥಾನದವರೆಗೂ ಬೆತ್ತಲೆ ನಡೆದುಕೊಂಡೇ ಹೋಗುತ್ತಿದ್ದರು. ಇದನ್ನು ನೋಡಲು ಮೇಲ್ವರ್ಗದ ಮಂದಿ ಸಾವಿರಾರು ಸಂಖ್ಯೆಯಲ್ಲಿ ಸೇರುತ್ತಿದ್ದರು. ಇದಕ್ಕೆ ಬಿಜೆಪಿ ಆರ್ ಎಸ್ ಎಸ್ ನವರು ಬೆಂಬಲ ನೀಡುತ್ತಿದ್ದರು. ಇಂತಹ ಅವಮಾನವನ್ನು ಯಾವ ಸ್ವಾಮೀಜಿಯೂ, ಯಾವ ರಾಜಕೀಯ ನಾಯಕರು ಪ್ರಶ್ನಿಸಲಿಲ್ಲ ಎಂದು ಹೇಳಿದರು.

ಪ್ರೊ.ಬಿ.ಕೃಷ್ಣಪ್ಪ ಅವರು ತುಮಕೂರಿನ ಎನ್.ಆರ್.ಕಾಲೋನಿಗೆ ಸಾಕಷ್ಟು ಬಾರಿ ಬಂದು ಹೋಗಿದ್ದಾರೆ. ಹೋರಾಟದಲ್ಲೂ ಭಾಗವಹಿಸಿದ್ದಾರೆ. ಕಾಲೋನಿಯ ಜನರಿಗೆ ಪುನರ್ ವಸತಿ ಮಾಡಿಕೊಡುವಂತಹ ಹೋರಾಟಗಳನ್ನು ನಡೆಸಿದ್ದಾರೆ. ಇಡೀ ಕರ್ನಾಟಕದಲ್ಲಿ ಎಲ್ಲಿಯೂ ಮಾಡದಂತಹ ಶಾಲೆಗಾಗಿ ಹೋರಾಟ ಮಾಡಿದ್ದಾರೆ. ಇದೇ ಕಾರಣಕ್ಕೆ ಸದಾ ಕಾಲವೂ ಪ್ರೊ.ಬಿ.ಕೃಷ್ಣಪ್ಪ ಅವರನ್ನು ನೆನಪಿಸಿಕೊಳ್ಳುತ್ತಾರೆ. ಇಂತಹ ವಿಷಯಗಳನ್ನು ಯುವಜನರಿಗೆ ಹೇಳದೆ ಹೋದರೆ ನಾವು ತುಂಬ ದ್ರೋಹ ಮಾಡಿದಂತೆ ಆಗುತ್ತದೆ ಎಂದರು.

ಹೋರಾಟಗಾರ ಹೋರಾಟಗಳನ್ನು ನೆನಪು ಮಾಡಿಕೊಳ್ಳಬೇಕು. ಹೋರಾಟದಿಂದ ಏನು ಪ್ರಯೋಜನವಾಗಿದೆ ಅಂತ ವಿವರಿಸಬೇಕು. ಬಹಳಷ್ಟು ಹೋರಾಟಗಳು ತುಮಕೂರಿನಲ್ಲಿ ನಡೆದಿವೆ. ಹಿರಿಯರಿಂದ ಯುವಜನತೆ ತಿಳಿದುಕೊಳ್ಳಬೇಕಾಗಿದೆ. ಈ ವಿಷಯಗಳನ್ನು ನಿಮ್ಮ ಮಕ್ಕಳಿಗೆ ಹೇಳಬೇಕು. ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಹೇಳಬೇಕು. ಓದುವಂತಹ ಚಿಕ್ಕ ಮಕ್ಕಳಿಗೆ ಹೇಳಿ, ಇದರಿಂದ ಮಕ್ಕಳಿಗೆ ಸ್ಪೂರ್ತಿ ಬರುತ್ತದೆ. ನಮ್ಮ ಸುತ್ತಮುತ್ತಲ ಜನತೆಗೆ, ನಮ್ಮ ಕೇರಿಗಳಿಗೆ ಸ್ಪೂರ್ತಿ ಬರುತ್ತದೆ. ಇಂತಹ ಸ್ಪೂರ್ತಿ ತುಂಬುವ ಕೆಲಸವನ್ನು ನಾವು ಮಾಡಬೇಕಾಗಿದೆ ಎಂದು ಹೇಳಿದರು.

ಇಡೀ ದೇಶದಲ್ಲಿ ಮಾದರಿಯಾಗುವಂತಹ ಚಳವಳಿಯನ್ನು ಕಟ್ಟಿದವರು ಪ್ರೊ.ಬಿ.ಕೃಷ್ಣಪ್ಪನವರು. ಇದನ್ನು ಹಿರಿಯರಿಂದ ಕೇಳಿ ಮತ್ತು ಪುಸ್ತಕಗಳನ್ನು ಓದಿ ತಿಳಿದುಕೊಳ್ಳುವಂತಹ ಕೆಲಸವನ್ನು ಯುವಪೀಳಿಗೆ ಮಾಡಬೇಕು. ಕೃಷ್ಣಪ್ಪ ಅವರ ವಿಚಾರಗಳನ್ನು ತಿಳಿದುಕೊಂಡರೆ ಪೆಪ್ರೋಲ್ ಇದ್ದರೆ ಹೇಗೆ ಗಾಡಿ ಮುಂದೆ ಚಲಿಸುತ್ತದೆಯೋ ಹಾಗೆ ನಮ್ಮನ್ನು ಅದು ಮುಂದಕ್ಕೆ ಕೊಂಡೊಯ್ಯುತ್ತದೆ ಎಂದರು.

ಒಳಮೀಸಲಾತಿ ಜಾರಿ ಸಂಬಂಧ ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಂದ ವರದಿಗಳನ್ನು ತರಿಸಿಕೊಂಡು ಹಲವು ವರ್ಷಗಳ ಕಾಲ ಅಧ್ಯಯನ ನಡೆಸಿ ಸುಪ್ರೀಂಕೋರ್ಟ್ ನಲ್ಲಿ ಪ್ರಕರಣವನ್ನು ದಾಖಲಿಸಿ ನ್ಯಾಯಾಲಯದಿಂದಲೇ ಒಳ ಮೀಸಲಾತಿಯನ್ನು ಜಾರಿಗೊಳಿಸಬಹುದು ಎಂಬ ತೀರ್ಮಾನಕ್ಕೆ ಬಂದೆವು. ಈ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ನ್ಯಾಯಮೂರ್ತಿ ನಾಗಮೋಹನ್ ದಾಸ್ ಬಳಿಗೆ ಹೋದೆವು. ದಾಖಲೆಗಳನ್ನು ನೋಡಿದ ಅವರು ಸುಪ್ರೀಂಕೋರ್ಟ್ ಗೆ ಹೋಗಬಹುದು. ಬೇರೆ ವಕೀಲರಿಂದ ಸುಪ್ರೀಂಕೋರ್ಟ್ ಗೆ ಅರ್ಜಿ ಹಾಕಿಸಿ, ನಾನೇ ಉಚಿತವಾಗಿ ವಾದಿಸುತ್ತೇನೆ ಎಂದರು. ಕೊನೆಯಲ್ಲಿ ಸುಪ್ರೀಂಕೋರ್ಟ್ ಗೆ ಪ್ರಕರಣ ದಾಖಲಿಸಿದೆವು. ನಮಗೆ ಗೆಲುವಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿ ಮಾಡಲಿದೆ ಎಂದು ಹೇಳಿದರು.

ಮಾದಿಗ ವಿದ್ಯಾರ್ಥಿಗಳು ಓದುವವರ ಸಂಖ್ಯೆ ಕಡಿಮೆಯಾಗಿದೆ. ವಿದ್ಯಾರ್ಥಿನಿಯರು ಮತ್ತಷ್ಟು ಕಡಿಮೆಯಾಗಿದ್ದಾರೆ. ಅವರಿಗೆ ಮಾರ್ಗದರ್ಶನ ಮಾಡುವವರು ಯಾರೂ ಇಲ್ಲವಾಗಿದೆ. ಓದಿದರೂ ಕೂಡ ಮುಂದೆ ಎಲ್ಲಿಗೆ ಹೋಗಬೇಕು, ಏನು ಓದಬೇಕು ಎಂದು ಹೇಳುವವರು ಮತ್ತು ಗೈಡೆನ್ಸ್ ಕೊಡುವವರು ಇಲ್ಲದಂತಾಗಿದೆ. ಯುವಕರಿಗೆ ಕೆಲಸ ಸಿಗುತ್ತಿಲ್ಲ ಎಂಬುದಕ್ಕೆ ಗೈಡೆನ್ಸ್ ಇಲ್ಲದಿರುವುದೇ ಕಾರಣ. ಬೇರೆ ಬೇರೆ ಜಾತಿಗಳಲ್ಲಿ ವಿದ್ಯಾ ಸಂಸ್ಥೆಗಳು ಇವೆ. ಅವರ ಜನಾಂಗದ ಯುವಕರಿಗೆ ಏನ್ ಕೆಲಸ ಮಾಡಬಹುದು ಎಂಬ ತಿಳುವಳಿಕೆ ಮೂಡಿಸುತ್ತಾರೆ. ಆರ್ಥಿಕ ಸಹಾಯ ನೀಡಿ ಬೆನ್ನು ತಟ್ಟುವ ಕೆಲಸವಾಗುತ್ತಿದೆ. ಅವೇನು ಇಲ್ಲದೇ ಇರುವ ಸಮಾಜ ಅಂದರೆ ಈ ಮಾದಿಗ ಸಮಾಜ ಎಂದು ತಿಳಿಸಿದರು.

ದಲಿತ ಮುಖಂಡ ವೈ.ಕೆ.ಬಾಲಕೃಷ್ಣಪ್ಪ ಮಾತನಾಡಿ, ಒಳಮೀಸಲಾತಿ ಜಾರಿ ಮಾಡುವವರೆಗೂ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷ ನಡೆಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು ಎಂದು ಹೇಳಿದರು.

ಹಿರಿಯ ದಲಿತ ಮುಖಂಡ ಎನ್.ವೆಂಕಟೇಶ್, ಹೆಚ್.ಕೆ.ಕೆಂಚಮಾರಯ್ಯ, ಪತ್ರಿಕೋದ್ಯಮಿ ಎಸ್.ನಾಗಣ್ಣ, ಡಾ.ಮುರಳೀಧರ್, ಕೃಷ್ಣಪ್ಪ ಬೆಲ್ಲದಮಡು ಮಾತನಾಡಿದರು. ನರಸೀಯಪ್ಪ, ನಾಗಾರ್ಜುನ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಿವನಂಜಪ್ಪ ಮೊದಲಾದವರು ಹಾಜರಿದ್ದರು. ನರಸಿಂಹಯ್ಯ ಪ್ರಾಸ್ತಾವಿಕ ಮಾತನಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular