Thursday, January 29, 2026
Google search engine
Homeಮುಖಪುಟಬೆಲೆ ಏರಿಕೆ ಸೃಷ್ಟಿಕರ್ತ ಪ್ರಧಾನಿ ನರೇಂದ್ರ ಮೋದಿ-ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ

ಬೆಲೆ ಏರಿಕೆ ಸೃಷ್ಟಿಕರ್ತ ಪ್ರಧಾನಿ ನರೇಂದ್ರ ಮೋದಿ-ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ

ವರ್ಷಕ್ಕೆ ₹5,000 ಕೋಟಿ ಕೆ.ಕೆ.ಆರ್‌.ಡಿ.ಬಿ ಗೆ ಕೊಡುವುದಾಗಿ ಚುನಾವಣೆ ವೇಳೆ ಭರವಸೆ ನೀಡಿದ್ದೆವು. ನಮ್ಮ ಭರವಸೆಯಂತೆ ಇಲ್ಲಿಯವರೆಗೂ ₹13,000 ಕೋಟಿ ಹಣ ನೀಡಿದ್ದೇವೆ. ಇಲ್ಲಿಯವರೆಗೂ 5,300 ಕೋಟಿ ಮೊತ್ತ ಖರ್ಚಾಗಿದ್ದು, ಹಲವು ಕಾಮಗಾರಿಗಳ ಫಲ ಜನರಿಗೆ ತಲುಪಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಯಾದಗಿರಿಯಲ್ಲಿ ಹಮ್ಮಿಕೊಂಡಿದ್ದ “ಆರೋಗ್ಯ ಆವಿಷ್ಕಾರ” ಯೋಜನೆಯ ಅಡಿಯಲ್ಲಿ ₹440 ಕೋಟಿ ಮೊತ್ತದ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ, ಬಂಜಾರ ಭವನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಕೆ.ಕೆ.ಆರ್‌.ಡಿ.ಬಿ ಗೆ ಕೊಡುವ ಈ ಅನುದಾನದ ಹೊರತಾಗಿ ಸರ್ಕಾರ ಈ ಭಾಗಕ್ಕೆ ಇಲಾಖಾವಾರು ಕಾರ್ಯಕ್ರಮಗಳಿಗಾಗಿ ಅನುದಾನ ನೀಡುತ್ತಲೇ ಇದೆ ಎಂದರು.

ನಂಜುಂಡಪ್ಪ ವರದಿಯ ಆಶಯಗಳನ್ನು ನಮ್ಮ ಸರ್ಕಾರ ಈಡೇರಿಸುತ್ತಿದೆ. ಆರೋಗ್ಯ, ಶಿಕ್ಷಣ, ಉದ್ಯೋಗದಲ್ಲಿ ಕಲ್ಯಾಣ ಕರ್ನಾಟಕ ಪ್ರಗತಿ ಸಾಧಿಸುವ ಜೊತೆಗೆ ಮೂಲಭೂತ ಸೌಕರ್ಯಗಳ ಈಡೇರಿಕೆಗೆ ಹಣ ವಿನಿಯೋಗ ಮಾಡಲು ಸೂಚನೆ ನೀಡಿದ್ದೇನೆ. ಇದರ ಪ್ರಕಾರ ಅಕ್ಷರ ಆವಿಷ್ಕಾರ ನಡೆದು ಇಂದು ₹440.63 ಕೋಟಿ ವೆಚ್ಚದ ಆರೋಗ್ಯ ಆವಿಷ್ಕಾರ ಕಾರ್ಯಕ್ರಮ ಇಂದು ಉದ್ಘಾಟನೆ ಮಾಡಿದ್ದೇವೆ.

ಕೊಲ್ಲೂರು ಮಲ್ಲಪ್ಪ ಅವರ ಸ್ಮಾರಕಕ್ಕೆ ಉಚಿತವಾಗಿ ಜಾಗ ಕೊಟ್ಟಿದ್ದೇವೆ. ಮಲ್ಲಪ್ಪ ಅವರು ಕಲ್ಯಾಣ ಕರ್ನಾಟಕದ ಗಾಂಧಿ ಎಂದು ಕರೆಸಿಕೊಂಡಿದ್ದವರು. ಸ್ವಾತಂತ್ರ್ಯ ಹೋರಾಟಗಾರರಾದ ಇವರ ಸ್ಮಾರಕ ಕೂಡಲೇ ಆಗಬೇಕು ಎಂದು ಸೂಚನೆ ನೀಡಿದ್ದೇನೆ.

42 ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುವ, ಹೊಸ ಆಸ್ಪತ್ರೆಗಳ ನಿರ್ಮಾಣ ಆಗುತ್ತಿದೆ. ಈ ಭಾಗದ ಆರೋಗ್ಯ ಸವಲತ್ತು ವಿಸ್ತರಿಸಲು ಒಟ್ಟು ₹847 ಕೋಟಿ ಕೊಡಲು ಸರ್ಕಾರ ಯೋಜನೆ ರೂಪಿಸಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಅಭಿವೃದ್ಧಿಗೆ ಹಣ ಇಲ್ಲ ಎನ್ನುವ ಬಿಜೆಪಿಯ ಎಲ್ಲಾ ಸುಳ್ಳುಗಳಿಗೆ ಜನರೇ ಉತ್ತರ ನೀಡುತ್ತಿದ್ದಾರೆ. ಏಕೆಂದರೆ ನಾವು ಅಭಿವೃದ್ಧಿಗೆ ಕೊಟ್ಟಿರುವ ಹಣ ರಾಜ್ಯದ ಜನರ ಮನೆ ಬಾಗಿಲಿಗೆ ತಲುಪಿದೆ. ಬೆಲೆ ಏರಿಕೆಗೆ ಕಾರಣವಾಗಿರುವುದು ಕೇಂದ್ರದ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ. ಮೋದಿಯವರು ಬರುವ ಮೊದಲು ಚಿನ್ನ, ಪೆಟ್ರೋಲ್, ಡೀಸೆಲ್, ಔಷಧ, ರಸಗೊಬ್ಬರ, ಅಡುಗೆ ಎಣ್ಣೆ, ಅಡುಗೆ ಅನಿಲದ ಬೆಲೆ ಎಷ್ಟಿತ್ತು ? ಮೋದಿಯವರು ಬಂದ ಬಳಿಕ ಎಷ್ಟು ಏರಿಕೆಯಾಗಿದೆ ನೋಡಿ. ಬೆಲೆ ಏರಿಕೆಯ ಸೃಷ್ಟಿಕರ್ತ ಪ್ರಧಾನಿ ಮೋದಿ ಅವರೇ ಅನ್ನುವುದರಲ್ಲಿ ಅನುಮಾನವಿಲ್ಲ ಎಂದು ತಿಳಿಸಿದ್ದಾರೆ.

ಸುಳ್ಳೇ ಬಿಜೆಪಿಯ ಮನೆ ದೇವರು. ಬಿಜೆಪಿಗೆ ಅಧಿಕಾರ ಇದ್ದಾಗಲೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮಾಡಲಿಲ್ಲ. ಬಿಜೆಪಿ 371(ಜೆ) ಗೆ ವಿರುದ್ಧವಿತ್ತು. ಉಪ ಪ್ರಧಾನಿ ಆಗಿದ್ದ ಎಲ್.ಕೆ.ಅಡ್ವಾಣಿ ಅವರು 371(ಜೆ) ಜಾರಿ ಮಾಡುವುದಿಲ್ಲ ಎಂದು ಪತ್ರ ಬರೆದಿದ್ದರು. ಕೊನೆಗೆ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಖರ್ಗೆ, ಧರಂ‌ಸಿಂಗ್ ಅವರ ಹೋರಾಟಕ್ಕೆ ಮಾನ್ಯತೆ ನೀಡಿ 371(ಜೆ) ಜಾರಿ ಮಾಡಿದರು.

ನಾವು ಬಸವಣ್ಣನವರ ಆಶಯದ ಪ್ರಕಾರ ನುಡಿದಂತೆ ನಡೆಯುವರು. ನಾವು ಚುನಾವಣೆಯಲ್ಲಿ ಕೊಟ್ಟ ಭರವಸೆಗಳಲ್ಲಿ ಐದು ಗ್ಯಾರಂಟಿಗಳು ಸೇರಿ 200 ಭರವಸೆಗಳು ಈಡೇರಿಸಿದ್ದೇವೆ. ಮುಂದಿನ ಮೂರು ವರ್ಷಗಳಲ್ಲಿ ಉಳಿದ ಎಲ್ಲಾ ಭರವಸೆಗಳನ್ನೂ ಈಡೇರಿಸಿ ಸಮಗ್ರ ಕರ್ನಾಟಕದ ಅಭಿವೃದ್ಧಿ ಸಾಧಿಸಿ ತೋರಿಸುತ್ತೇವೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular