Friday, July 18, 2025
Google search engine
Homeಮುಖಪುಟಪರಿಷತ್ ಗೆ ನಾಮನಿರ್ದೇಶನಕ್ಕೆ ನನ್ನ ಹೆಸರು ಶಿಫಾರಸು ಮಾಡಿದ ನಂತರ ನನ್ನ ಚಾರಿತ್ರ್ಯ ಹನನದ ಪ್ರಯತ್ನ-ಮಟ್ಟು

ಪರಿಷತ್ ಗೆ ನಾಮನಿರ್ದೇಶನಕ್ಕೆ ನನ್ನ ಹೆಸರು ಶಿಫಾರಸು ಮಾಡಿದ ನಂತರ ನನ್ನ ಚಾರಿತ್ರ್ಯ ಹನನದ ಪ್ರಯತ್ನ-ಮಟ್ಟು

ವಿಧಾನಪರಿಷತ್ ಗೆ ನಾಮನಿರ್ದೇಶನಕ್ಕೆ ಕಾಂಗ್ರೆಸ್ ಪಕ್ಷ ನನ್ನ ಹೆಸರನ್ನು ಶಿಫಾರಸು ಮಾಡಿದ ನಂತರ ನನ್ನ ಚಾರಿತ್ರ್ಯಹನನದ ಪ್ರಯತ್ನ ಶುರುವಾಗಿದೆ. ಈ ಪ್ರಯತ್ನವನ್ನು ನೋಡಿದ,, ಕೇಳಿದ ಅನೇಕರು ಇದರಲ್ಲಿ ಬಿಜೆಪಿಯ ಕೈವಾಡ ಇರಬಹುದೆಂದು ಆರೋಪಿಸತೊಡಗಿದ್ದಾರೆ. ನನಗೆ ಇಲ್ಲಿಯವರೆಗೆ ಬಂದಿರುವ ಮಾಹಿತಿ ಪ್ರಕಾರ ಈ ಆರೋಪಕ್ಕೆ ಆಧಾರ ಇಲ್ಲ ಎಂದು ಹಿರಿಯ ಪತ್ರಕರ್ತ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಮಾಜಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಹೇಳಿದ್ದಾರೆ.

ಆದರೆ ಇದರಲ್ಲಿ ನಮ್ಮ ಜೊತೆಯಲ್ಲಿಯೇ ಇದ್ದ ಪ್ರಗತಿಪರರ ಮುಖವಾಡದ ಕೆಲವರ ಕೈವಾಡ ಇದೆ ಎನ್ನುವುದಕ್ಕೆ ನನ್ನಲ್ಲಿ ಸಾಕ್ಷಿಗಳಿವೆ. ಎಲ್ಲ ಪಕ್ಷಗಳಿಗೆ ಅಲೆದಲೆದು ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಸೇರಿರುವ ಮತ್ತು ತಾನೇ ಅಹಿಂದ ಎಂದು ಹೇಳಿಕೊಂಡು ತಿರುಗಾಡುತ್ತಿರುವ, ಇದರ ಆಧಾರದಲ್ಲಿಯೇ ತನ್ನನ್ನು ನಾಮನಿರ್ದೇಶನ ಮಾಡಿ ಎಂದು ಇಲ್ಲಿಂದ ದಿಲ್ಲಿ ವರೆಗೆ ಅಲೆದಾಡಿದ ‘’ನಾಥ(ತ)ನೊಬ್ಬ ಈ ಕುತ್ಸಿತ ಷಡ್ಯಂತ್ರದ ರೂವಾರಿ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಇವರ ಜೊತೆ ಜೆಡಿಎಸ್ ಜೊತೆ ಗುರುತಿಸಿಕೊಂಡಿರುವ ಕೆಲವು ಕಿಡಿಗೇಡಿಗಳು ಫೇಕ್ ನ್ಯೂಸ್ ಗಳನ್ನು ಹಂಚಿಕೊಂಡು ವಿಕೃತಾನಂದ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ಮತ್ತು ಆರ್ ಎಸ್ ಎಸ್ ಜೊತೆ ನನಗೆ ಸೈದ್ದಾಂತಿಕ ಭಿನ್ನಾಭಿಪ್ರಾಯವಿದೆ, ಈ ವಿಷಯದಲ್ಲಿ ಆ ಬಳಗದ ಅನೇಕ ನಾಯಕರ ಜೊತೆ ಗುದ್ದಾಡಿದ್ದೇನೆ, ಈ ಗುದ್ದಾಟ ನನ್ನ ಉಸಿರು ಇರುವವರೆಗೆ ಮುಂದುವರಿಯುತ್ತದೆ. ಆದರೆ ಈ ಬಳಗದ ಯಾವ ನಾಯಕರೂ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರನಾಗಿದ್ದಾಗಲೂ ನನ್ನ ವಿರುದ್ದ ಭ್ರಷ್ಟಾಚಾರದ ಆರೋಪ ಮಾಡಿಲ್ಲ. ಆಗಲೂ ಈ ಪೈಲು-ಐಲು, ಇಲಿ-ಹೆಗ್ಗಣ, ನಾಥ-ದುರ್ನಾತಗಳೇ ನನ್ನ ಬಗ್ಗೆ ಆರ್ ಟಿ ಐ ಹಾಕುತ್ತಿದ್ದದ್ದು, ಗಾಸಿಪ್ ಹರಡುತ್ತಿದ್ದದ್ದು ಎಂದು ಹೇಳಿದ್ದಾರೆ.

ಕಳೆದ ಹನ್ನೆರಡು ವರ್ಷಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ನನಗೆ ಒಡನಾಟವಿದೆ. ಇಲ್ಲಿಯವರೆಗೆ ನಾನು ವರ್ಗಾವಣೆಯ ಶಿಫಾರಸು ಇಲ್ಲವೇ, ಬಿಲ್ ಪಾಸ್ ಇಲ್ಲವೆ, ನನಗೆ ಹಣಕಾಸಿನ ಲಾಭ ಬರುವ ಇಲ್ಲವೇ, ಇತರರಿಗೆ ಹಣಕಾಸಿನ ಲಾಭ ಮಾಡಿಕೊಡುವ ಒಂದೇ ಒಂದು ಪತ್ರಕ್ಕೆ ಸಿದ್ದರಾಮಯ್ಯನವರ ಸಹಿ-ನೋಟ್ ಹಾಕಿಸಿಲ್ಲ. ಅಂತಹದ್ದೊಂದು ಪತ್ರವನ್ನು ಯಾರಾದರೂ ನನ್ನ ಮುಂದೆ ತಂದಿಟ್ಟರೆ ಅವರ ಪಾದಕ್ಕೆ ನನ್ನ ಕಡಿದ ತಲೆ ಇರುತ್ತದೆ ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ವಿಧಾನಪರಿಷತ್ ನಾಮನಿರ್ದೇಶನಕ್ಕೆ ನಾನು ಯಾಕೆ ಆಸಕ್ತಿ ತೋರಿಸಿದೆ, ಅನಂತರ ಏನೆಲ್ಲ ನಡೆಯಿತು ಎನ್ನುವುದನ್ನು ಮುಂದೆ ಬರೆಯುವೆ. ವಿಚಿತ್ರವೆಂದರೆ ನಿನ್ನೆ ಮೊನ್ನೆವರೆಗೆ ನನ್ನನ್ನು ‘’ಕಾಂಗ್ರೆಸ್ ಗಂಜಿ ಗಿರಾಕಿ’’ ಎಂದು ಬಿಜೆಪಿಯವರು ಗೇಲಿ ಮಾಡುತ್ತಿದ್ದರು. ಈಗ ಕಾಂಗ್ರೆಸ್ ಕೆಲವು ಕಾರ್ಯಕರ್ತರು ನಾನು ‘’ಕಾಂಗ್ರೆಸ್ ವಿರೋಧಿ’’ ಎಂದು ಆರೋಪಿಸುತ್ತಿದ್ದಾರೆ ಎಂದಿದ್ದಾರೆ.

ವಾಸ್ತವದಲ್ಲಿ ನಾನು ಕಾಂಗ್ರೆಸ್ ಗಂಜಿ ಗಿರಾಕಿಯೂ ಅಲ್ಲ, ವಿರೋಧಿಯೂ ಅಲ್ಲ. ಕಾಂಗ್ರೆಸ್ ಪಕ್ಷದ ಸಿದ್ದಾಂತದ ಬಗ್ಗೆ ನನಗೆ ಸಹಮತ ಇದೆ, ಅದರ ಸೈದ್ದಾಂತಿಕ ಸಂಗಾತಿ ನಾನು. ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ದೇಶದಲ್ಲಿ ಮತ್ತು ರಾಜ್ಯದಲ್ಲಿ ಬೆಂಬಲಿಸುವ ಅಗತ್ಯವಿದೆ ಎನ್ನುವುದು ನನ್ನ ಖಚಿತ ಅಭಿಪ್ರಾಯ. ಇದಕ್ಕೆ ರಾಹುಲ್ ಗಾಂಧಿಯವರಲ್ಲಿನ ಸೈದ್ದಾಂತಿಕ ಸ್ಪಷ್ಟತೆ ಮತ್ತು ಬದ್ದತೆ ಹುಟ್ಟಿಸಿರುವ ನಿರೀಕ್ಷೆ ಕೂಡಾ ಕಾರಣ. ಭಿನ್ನಾಭಿಪ್ರಾಯವಿದ್ದರೆ ಚರ್ಚೆ ಮಾಡೋಣ. ಸದ್ಯಕ್ಕೆ ಇಷ್ಟೇ ಹೇಳಲು ಸಾಧ್ಯ ಎಂದು ಹೇಳಿದ್ದಾರೆ.

ನನ್ನ ವಿರುದ್ದದ ಆರೋಪಗಳ ಬಗ್ಗೆ ಸನ್ಮಾನ್ಯ ರಾಜ್ಯಪಾಲರಿಂದ ಯಾವ ಪತ್ರವೂ ಬರದೆ ಇದ್ದರೂ ನಾನೇ ಸ್ವಯೀಚ್ಛೆಯಿಂದ ಅವರಿಗೆ ಸ್ಪಷ್ಟೀಕರಣವನ್ನು ಕಳಿಸಿದ್ದೇನೆ. ನನ್ನ ಸ್ಪಷ್ಟೀಕರಣಕ್ಕೆ ಆಧಾರವಾಗಿ ದಾಖಲೆ ಪತ್ರಗಳನ್ನೂ ಅವರಿಗೆ ಕಳಿಸಿದ್ದೇನೆ ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular