ಅಮ್ಮ ಅಷ್ಟೇ ಅಮ್ಮ ಅಲ್ಲ. ಹೆತ್ತರಷ್ಟೇ ಅಮ್ಮ ಅಲ್ಲ. ಅಪ್ಪಾಜೀನೂ ಅಮ್ಮಾನೇ. ಅಪ್ಪ ಅಮ್ಮ ಬೇಧ ಇಲ್ಲ. ಅಮ್ಮನ ಅಂತಃಕರಣ ಪೊರೆಯುವ ಗುಣ ಇರುವವರೆಲ್ಲರೂ ಅಮ್ಮಂದಿರೆ. ನಮ್ಮಲ್ಲಿ ಮಾತೃಹೃದಯ ಇರಬೇಕು ಎಂದು ಸಿದ್ದಗಂಗಾ ಮೆಡಿಕಲ್ ಕಾಲೇಜು ಮತ್ತು ರಿಸರ್ಚ್ ಸೆಂಟರ್‌ನ ಪ್ರಾಂಶುಪಾಲ ಡಾ. ಶಾಲಿನಿ ತಿಳಿಸಿದರು.
ಕರ್ನಾಟಕ ಲೇಖಕಿಯರ ಸಂಘ ತುಮಕೂರು ಜಿಲ್ಲಾ ಶಾಖೆಯು, ಮಾತೃತ್ವ, ನನ್ನ ಅನುಭವ ಎಂಬ ವಿಷಯದ ಬಗ್ಗೆ, ತಾಯಂದಿರ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಮ್ಮನ ಮಹತ್ವ ಎಷ್ಟು ಹೇಳಿದರೂ ಸಾಲದು. ಅಮ್ಮ ನಮ್ಮ ವ್ಯಕ್ತಿತ್ವ ರೂಪಿಸುವವರು. ಅಮ್ಮ ಏನಾದರೂ ಬುದ್ದಿ ಮಾತು ಹೇಳಿದರೆ ಜಗಳ ಮಾಡಬೇಡಿ. ನೀವು ನಿಮ್ಮ ಅಪ್ಪ ಅಮ್ಮನನ್ನು ಹೇಗೆ ಕಾಣುತ್ತೀರಾ ಎಂಬುದರ ಮೇಲೆ ನಿಮ್ಮ ವ್ಯಕ್ತಿತ್ವ ನಿರ್ಧಾರವಾಗುತ್ತದೆ. ಪ್ರಮುಖ ಹೆಜ್ಜೆ ಇಡುವಾಗ ಅಮ್ಮನ ಸಲಹೆ ಪಡೆಯಿರಿ. ಮುಂದೆ ಇಟ್ಟ ಹೆಜ್ಜೆ ಹಿಂದೆ ಇಡಬೇಡ ಎಂಬುದನ್ನು ನಾನು ಅಮ್ಮನಿಂದ ಕಲಿತೆ ಎಂದು ಹೇಳಿದರು.
ದತ್ತಿದಾನಿ ಪ್ರೇಮಾ ಮಲ್ಲಣ್ಣ ಮಾತನಾಡಿ, ಮನೆಯೆ ಮೊದಲ ಪಾಠಶಾಲೆ. ತಾಯಿಯೇ ಮೊದಲ ಗುರು. ತಾಯಿಯ ಪಾದದ ಕೆಳಗೆ ಸ್ವರ್ಗ ಇದೆ ಎಂದರು.
ಲೇಖಕಿ ಸಿ.ಎಲ್ ಸುನಂದಮ್ಮ, ಡಾ. ಬಿ.ಆರ್ ಅಂಬೇಡ್ಕರ್ ಉಚಿತ ಕೋಚಿಂಗ್ ಸೆಂಟರ್ ಅಧ್ಯಕ್ಷ ಜಯಶೀಲ ಮಾತನಾಡಿದರು. ಕಲೇಸಂ ಅಧ್ಯಕ್ಷೆ ಮಲ್ಲಿಕಾ ಬಸವರಾಜು ಮಾತನಾಡಿ ತಾಯಿಯು ತನ್ನ ಜೀವವನ್ನು ಒತ್ತೆ ಇಟ್ಟು ಮಗುವಿಗೆ ಜನ್ಮ ಕೊಡುವಳು. ಹೆರಿಗೆಯೆಂಬುದು ಅವಳಿಗೆ ಮರುಹುಟ್ಟು. ತಾಯಿಯ ಅಂತಃಕರಣ ಮತ್ತು ಪ್ರೀತಿಯಿಂದ ಸಮಾಜವನ್ನು ತಿದ್ದಿ ಮುನ್ನಡೆಸೋಣ ಎಂದರು.