ತುಮಕೂರು ನಗರದ ವ್ಯಾಪ್ತಿಯನ್ನು ವಿಸ್ತರಿಸುವ ಸಂಬಂಧ 14 ಗ್ರಾಮ ಪಂಚಾಯಿತಿಗಳನ್ನು ನಗರ ವ್ಯಾಪ್ತಿಗೆ ಒಳಪಡಿಸುವ ಇಂಗಿತವನ್ನು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ವ್ಯಕ್ತಪಡಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ನಗರವನ್ನು ವಿಸ್ತರಿಸುವ ಪ್ರಸ್ತಾವನೆ ಸಿದ್ಧವಿದ್ದು, ಹಂತ ಹಂತವಾಗಿ ವಿಸ್ತರಣಾ ಪ್ರಕ್ರಿಯೆಯನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಈಗಾಗಲೇ ಮನೆ ಕಟ್ಟಿಕೊಂಡು ವಾಸವಿರುವ ನಿವಾಸಿಗಳು ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಅವರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸಮರ್ಪಕ ಕುಡಿಯುವ ನೀರು, ರಸ್ತೆ, ಒಳಚರಂಡಿ ವ್ಯವಸ್ಥೆಯಿಲ್ಲದೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಗರ ವಿಸ್ತರಣೀಕರಣದಿಂದ ನಾಗರಿಕರಿಗೆ ಮೂಲಭೂತ ಸೌಕರ್ಯಗಳು ತಲುಪುತ್ತವೆ ಎಂದು ತಿಳಿಸಿದರು.
ಬಹು ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರ ವ್ಯಾಪ್ತಿಯು ಈಗಾಗಲೇ ನೆಲಮಂಗಲದವರೆಗೂ ತಲುಪಿದ್ದು, ತುಮಕೂರನ್ನೂ ಸಹ ತಲುಪುವ ಸಾಧ್ಯತೆ ಇದೆ. ನಗರದ ಬೆಳವಣಿಗೆಯನ್ನು ಮನಗಂಡ ಸರ್ಕಾರವು ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಪರಿಗಣಿಸಲು ಆದೇಶ ಹೊರಡಿಸಿದೆ. ಇದೇ ಮಾದರಿಯಲ್ಲಿಯೇ ಮುಂದಿನ ದಿನಗಳಲ್ಲಿ ತುಮಕೂರನ್ನೂ ಸಹ ಬೆಂಗಳೂರು ಉತ್ತರ ಎಂದು ಪರಿಗಣಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.