ಗುಜರಾತ್ ರಾಜ್ಯದ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್ ಗೆ ತೆರಳುತ್ತಿದ್ದ ವಿಮಾನ ಟೇಕಾಪ್ ಆದ 5 ನಿಮಿಷಗಳಲ್ಲಿ ಪತನವಾಗಿದೆ. ವಿಮಾನ ಪತನಕ್ಕೆ ಕಾರಣ ತಿಳಿದುಬಂದಿಲ್ಲ. ವಿಮಾನದಲ್ಲಿದ್ದ ಎಲ್ಲ 241 ಮಂದಿಯೂ ಮೃತಪಟ್ಟಿದ್ದಾರೆ.
ಏರ್ ಇಂಡಿಯಾಕ್ಕೆ ಸೇರಿದ ಬಓೋಯಿಂಗ್ 787 ವಿಮಾನದಲ್ಲಿ 142 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಇವರಲ್ಲಿ 12 ಮಂದಿ ಸಿಬ್ಬಂದಿಯೂ ಇದ್ದರು. ವಿಮಾನ ಗುರುವಾರ ಮಧ್ಯಾಹ್ನ 1.39ಕ್ಕೆ ಟೇಕಾಪ್ ಆಯಿತು. ಅದಾದ 5 ನಿಮಿಷದಲ್ಲಿ ವಿಮಾನ ನಿಲ್ದಾಣದ ಸಮೀಪವೇ ವಿಮಾನ ಪತನವಾಯಿತು ಎಂದು ತಿಳಿದುಬಂದಿದೆ.
ವಿಮಾನ ನೆಲಕ್ಕೆ ಅಪ್ಪಳಿಸುತ್ತಿದ್ದಂತೆಯೇ ಹೊತ್ತಿ ಉರಿದಿದೆ. ಇದರಿಂದ ಹೊರ ಬಂದ ಹೊಗೆ ಮುಗಿಲೆತ್ತರಕ್ಕೆ ಹರಡಿಕೊಂಡಿತು. ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ.
ವಿಮಾನದಲ್ಲಿ 169 ಭಾರತೀಯ ಪ್ರಜೆಗಳು, 52 ಮಂದಿ ಬ್ರಿಟಿಷ್ ಪ್ರಜೆಗಳು, ಪೋರ್ಚಗಲ್ ನ 6 ಪ್ರಜೆಗಳು, ಕೆನಡಾದ ಓರ್ವ ಪ್ರಜೆ ಪ್ರಯಾಣಿಸುತ್ತಿದ್ದರು. ಇವರಲ್ಲಿ 10 ಮಂದಿ ಮಕ್ಕಳು ಇದ್ದರು. ಇವರೆಲ್ಲರೂ ಸಾವನ್ನಪ್ಪಿದ್ದಾರೆ ೆಂದು ವರದಿಯಾಗಿದೆ. ವಿಮಾನದಲ್ಲಿ ಗುಜರಾಜ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಇದ್ದರು ಎಂದು ಹೇಳಲಾಗಿದೆ. ವಿಮಾನ ಹಾಸ್ಟೆಲ್ ಮೇಲೆ ಬಿದ್ದಿದ್ದು ಹಾಸ್ಟೆಲ್ ನಲ್ಲಿದ್ದ ವಸ್ತುಗಳೆಲ್ಲವೂ ಸುಟ್ಟು ಹೋಗಿವೆ ಎಂದು ವರದಿಗಳು ತಿಳಿಸಿವೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಮುಖ್ಯಮಂತ್ರಿ ಸಂತಾಪ:
ಸುಮಾರು 200ಕ್ಕೂ ಅಧಿಕ ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಗುಜರಾತ್‌ನ ಅಹ್ಮದಾಬಾದ್ ನಗರದಲ್ಲಿ ಅಪಘಾತಕ್ಕೀಡಾದ ಸುದ್ದಿ ತಿಳಿದು ಆಘಾತವಾಗಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇದು ಅತ್ಯಂತ ದುರದೃಷ್ಟಕರ ಮತ್ತು ನೋವಿನ ಗಳಿಗೆ. ಈ ಅಪಘಾತದಿಂದ ಹೆಚ್ಚಿನ ಹಾನಿಯಾಗದಿರಲಿ, ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿರಲಿ ಎಂದು ಅವರು ಪ್ರಾರ್ಥಿಸಿದ್ದಾರೆ.