ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ವಿರುದ್ಧ ಪ್ರತಿಭಟನೆ ನಡೆಸಿದ ಸ್ವಾಮಿಗಳು, ರೈತರು, ಶಾಸಕರು ಹಾಗೂ ನಾಗರೀಕರ ಮೇಲೆ ಹಾಕಿರುವ ಎಫ್‌ಐಆರ್ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ಶಾಸಕರಾದ ಎಂ.ಟಿ.ಕೃಷ್ಣಪ್ಪ, ಬಿ.ಸುರೇಶ್‌ಗೌಡ, ಮಾಜಿ ಸಚಿವ ಸೊಗಡು ಶಿವಣ್ಣ ಹಾಗೂ ಹೋರಾಟ ಸಮಿತಿ ಮುಖಂಡರು ಬುಧವಾರ ನಗರದ ಎಸ್ಪಿ ಕಚೇರಿಯಲ್ಲಿ ಧರಣಿ ನಡೆಸಿದರು.
ಈ ವೇಳೆ ಹಾಜರಿದ್ದ ಕೇಂದ್ರವಲಯ ಐಜಿಲಾಬೂ ರಾಮ್ ಅವರಿಗೆ ಕೇಸ್ ಹಿಂಪಡೆಯುವ ಬಗ್ಗೆ ಮನವಿ ಮಾಡಿದರು. ರೈತರು, ಸ್ವಾಮಿಗಳು ಹಾಗೂ ಸಾರ್ವಜನಿಕರ ವಿರುದ್ಧ ಕೇಸು ದಾಖಲಿಸಿರುವುದಕ್ಕೆ ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ಎಸ್ಪಿ ಕಚೇರಿಯಲ್ಲಿ ಧರಣಿ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರೈತರು, ಸ್ವಾಮಿಗಳ ಮೇಲಿನ ಎಫ್‌ಐಆರ್ ರದ್ದುಮಾಡಬೇಕು ಎಂದು ಒತ್ತಾಯಿಸಿದರು.
ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ತಮ್ಮ ನೀರಿನ ಹಕ್ಕಿಗಾಗಿ ಹೋರಾಟ ನಡೆಸಿದ ರೈತರ, ಸ್ವಾಮಿಗಳ ಮೇಲೆ ಕೇಸು ದಾಖಲಿಸುವುದೆಂದರೆ ಏನರ್ಥ? ಸ್ವಾಮಿಗಳು ರಾಜಕಾರಣ ಮಾಡಲು ಬಂದಿರಲಿಲ್ಲ, ಸಮಾಜದ ಒಳಿತಿಗೆ ಶ್ರಮಿಸುವ ಸ್ವಾಮಿಗಳು ಜನರ ನೀರಿನ ಹೋರಾಟದಲ್ಲಿ ಬೆಂಬಲ ನೀಡಿ ಭಾಗವಹಿಸಿದ್ದರು. ಇಂತಹವರ ಮೇಲೆ ಕೇಸು ಹಾಕಿದ ಕೆಟ್ಟ ಸರ್ಕಾರವನ್ನು ನಾನು ನೋಡಿಲ್ಲ ಎಂದರು.
ತುಮಕೂರು ಗ್ರಾಮಾಂತರ ಕ್ಷೇತ್ರ ಶಾಸಕ ಬಿ.ಸುರೇಶ್‌ಗೌಡ ಮಾತನಾಡಿ, ಎಕ್ಸ್ಪ್ರೆಸ್‌ಕೆನಾಲ್ ವಿರುದ್ಧ ಶಾಂತ ರೀತಿಯ ಹೋರಾಟ ನಡೆಯಿತು. ಯಾವುದೇ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಲಿಲ್ಲ. 20 ಸಾವಿರ ಜನ ಸೇರಿರುವ ಕಡೆ ಸಣ್ಣಪುಟ್ಟ ಅಹಿತಕರ ಪ್ರಕರಣ ನಡೆದಿರಬಹುದು. ನೀರಿನ ಹಕ್ಕಿಗಾಗಿ ರೈತರು ಆಕ್ರೋಶಗೊಂಡಿದ್ದಾರೆ, ಹಾಗೆಂದು ಅವರ ಮೇಲೆ ಎಫ್‌ಐಆರ್ ಮಾಡಿ ಕೇಸು ದಾಖಲಿಸುವುದು ಸರಿಯಲ್ಲ. ಸರ್ಕಾರ ತಕ್ಷಣ ರೈತರು, ಸ್ವಾಮಿಗಳು ಸೇರಿದಂತೆ ಎಲ್ಲಾ ಎಫ್‌ಐಆರ್‌ಗಳನ್ನು ರದ್ದುಮಾಡಬೇಕು ಎಂದು ಆಗ್ರಹಿಸಿದರು.
ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ, ರೈತರು, ಸ್ವಾಮಿಗಳ ವಿರುದ್ಧ ಹಾಕಿರುವ ಕೇಸುಗಳನ್ನು ವಾಪಸ್ ಪಡೆಯಬೇಕು. ಸ್ವಾಮಿಗಳ ಮೇಲೆ ಕೇಸು ಹಾಕುವುದೆಂದರೆ ದೇವಸ್ಥಾನಕ್ಕೆ ಬೀಗ ಹಾಕಿದಂತೆ, ಜಿಲ್ಲೆಯಲ್ಲಿ ಸುಮಾರು 40 ಮಠಗಳಿದ್ದು ಆ ಸ್ವಾಮಿಗಳು ಹೋರಾಟದಲ್ಲಿ ಭಾಗವಹಿಸಿ ಜೈಲಿಗೂ ಹೋಗಲು ಸಿದ್ಧ ಎಂದು ಹೇಳಿದ್ದಾರೆ. ಸ್ವಾಮಿಗಳು ಜೈಲಿಗೆ ಹೋದರೆ ನಿಮ್ಮ ಸರ್ಕಾರ ಉಳಿಯುವುದಿಲ್ಲ ಎಂದು ಎಚ್ಚರಿಸಿದರು.
ಹೋರಾಟಗಾರರ ಮನವಿ ಬಗ್ಗೆ ಸರ್ಕಾರಕ್ಕೆ ಗಮನಕ್ಕೆ ತಂದು ಎಫ್‌ಐಆರ್ ವಾಪಸ್ ಪಡೆಯುವ ಪ್ರಯತ್ನ ಮಾಡುವುದಾಗಿ ಐಜಿ ಲಾಬೂ ರಾಮ್ ಹೇಳಿದಾಗ ಶಾಸಕರು ತಮ್ಮ ಧರಣಿ ಸತ್ಯಾಗ್ರಹ ಅಂತ್ಯಗೊಳಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ತಿಪಟೂರು ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್, ಮುಖಂಡರಾದ ಟಿ.ಹೆಚ್.ಹನುಮಂತರಾಜು, ಸತ್ಯಮಂಗಲ ಜಗದೀಶ್, ಮನೋಹರಗೌಡ, ನರಸೇಗೌಡ ಇದ್ದರು.


