ದೇವರ ಮೇಲೆ ನಂಬಿಕೆ ಇಟ್ಟು ದೇವಾಲಯಗಳಿಗೆ ಬರುವ ಭಕ್ತರ ಭಕ್ತಿಯನ್ನೇ ನೆಪ ಮಾಡಿಕೊಂಡು ಸಮಸ್ಯೆ ಪರಿಹಾರಕ್ಕೆ ವಿವಿಧ ರೀತಿ ಪೂಜೆ ಮಾಡಬೇಕೆಂದು ಮಹಿಳೆಯರಿಂದ ಲಕ್ಷಾಂತರ ರೂ ಹಣ ವಸೂಲಿ ಮಾಡಿ, ಪೂಜೆಯನ್ನು ಮಾಡದೆ ವಂಚಿಸಿದ್ದಾರೆ ಎಂದು ತುಮಕೂರಿನ ಮಂಡಿಪೇಟೆಯ ಬಾಗಿಲು ಆಂಜನೇಯಸ್ವಾಮಿ ದೇವಾಲಯದ ಆರ್ಚಕ ಶ್ರೀನಿವಾಸ್ ವಿರುದ್ದ ಮಹಿಳೆಯರು ಮುಜರಾಯಿ ಇಲಾಖೆಗೆ ಹಾಗೂ ಎಡಿಸಿ ಅವರಿಗೆ ದೂರು ಸಲ್ಲಿಸಿದ್ದಾರೆ.
ತುಮಕೂರಿನ ಬಟವಾಡಿಯ ನಾಗರತ್ಮ. ಟಿ.ಜಿ. ಎಂಬ ಮಹಿಳೆ ತನ್ನ ಗಂಡನಿಗೆ ಆರೋಗ್ಯ ಸರಿಯಿಲ್ಲದ ಕಾರಣ ಮಂಡಿಪೇಟೆಯಲ್ಲಿರುವ ಮುಜರಾಯಿ ಇಲಾಖಗೆ ಸೇರಿದ ಬಾಗಿಲು ಆಂಜನೇಯಸ್ವಾಮಿ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸುವ ವೇಳೆ ಸಮಸ್ಯೆಯನ್ನು ಕೇಳಿ ತಿಳಿದ ದೇವಾಲಯ ಅರ್ಚಕ ಶ್ರೀನಿವಾಸ್ ನಾಗರತ್ನ ಅವರಿಗೆ ನಿಮ್ಮ ಗಂಡನ ಆರೋಗ್ಯ ಸರಿ ಹೋಗಲು ಪೂಜೆ ಮಾಡಿಸಬೇಕು. ಲಕ್ಷಾಂತರ ರೂ ಖರ್ಚಾಗುತ್ತದೆ. ಈ ಪೂಜೆಯಿಂದ ಮನೆ ಮಂದಿಯ ಆರೋಗ್ಯ ಸರಿಹೋಗುವುದಲ್ಲದೆ, ಕುಟುಂಬಕ್ಕೆ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಿ ಲಕ್ಷಾಂತರ ರೂ ಹಣ ಪಡೆದಿದ್ದಲ್ಲದೆ, ಪೂಜೆಯನ್ನು ಮಾಡದೆ ವಂಚಿಸುತಿದ್ದಾರೆ. ಹಣ ಕೇಳಿದರೆ ದೇವರ ಶಾಪ ಅಂತ ಹೇಳಿ ಹೆದರಿಸುತ್ತಿದ್ದು, ಇವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಮುಜರಾಯಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ನನ್ನಂತೆಯೇ ಹಲವು ಹೆಣ್ಣು ಮಕ್ಕಳು ಈತನಿಂದ ಮೋಸ ಹೋಗಿದ್ದಾರೆ. ಹೆಣ್ಣು ಮಕ್ಕಳ ಭಯವನ್ನೇ ಬಂಡವಾಳ ಮಾಡಿಕೊಂಡು, ನೂರಾರು ಹೆಣ್ಣು ಮಕ್ಕಳಿಂದ ಹಣ ಪಡೆದು ಮೋಸ ಮಾಡಿದ್ದಾರೆ. ಕೇಳಲು ಹೋದರೆ ನೀವು ಅದೇನು ಮಾಡಿಕೊಳ್ಳುತ್ತಿರೋ ಮಾಡಿಕೊಳ್ಳಿ ಹಣ ವಾಪಾಸ್ ಕೊಡುವುದಿಲ್ಲ. ನೀವು ಹೀಗೆ ನನ್ನನ್ನು ಹಣ ಕೇಳಿದರೆ ನಿಮ್ಮ ಕೈ ಕಾಲುಗಳು ಬಿದ್ದು ಹೋಗುವಂತೆ ಮಾಟ ಮಂತ್ರ ಮಾಡುತ್ತೇನೆ ಎಂದು ಹದರಿಸಿ ಕಳುಹಿಸುತ್ತಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಈತನ ವರ್ತನೆಯಿಂದ ನಮಗೆ ಅಪಾರವಾದ ನಷ್ಟವಾಗಿರುವುದಲ್ಲದೆ ನಮಗೆ ಮಾನಸಿಕ, ದೈಹಿಕ ಹಿಂಸೆ ಮತ್ತು ತೊಂದರೆಯಾಗಿದ್ದು, ಮುಂದಿನ ದಿನಗಳಲ್ಲಿ ಈತ ನಮ್ಮಂತಹ ಹೆಣ್ಣು ಮಕ್ಕಳನ್ನು ನಂಬಿಸಿ ಮೋಸ ವಂಚನೆಗೊಳಿಸುವುದು ಸಾಧ್ಯತೆ ಹೆಚ್ಚು ಇರುವುದರಿಂದ ಈತನನ್ನು ವಿಚಾರಣೆಗೆ ಒಳಪಡಿಸಿ, ದೇವಸ್ಥಾನದ ಅರ್ಚಕ ಸ್ನಾನದಿಂದ ವಜಾಗೊಳಿಸಬೇಕು. ನಮಗೆ ಮೌಢ, ಆಚರಣೆಗೆ ಪ್ರಚೋದಿಸಿ ಮೋಸ ವಂಚನೆ ಮಾಡಿರುವ ಈತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಕೋರಿದ್ದಾರೆ.
ಈ ವೇಳೆ ವಂಚನೆಗೆ ಒಳಗಾದ ಮಹಿಳೆಯರಾದ ಗೀತಾ, ಟಿ.ಎನ್.ಮಂಜುಳ, ಲಕ್ಷಿö್ಮ, ನಿಶಾ, ಮಹದೇವಯ್ಯ, ಗೋವಿಂದ ಇದ್ದರು.


