ವಿದೇಶದಲ್ಲಿ ಕಲಿತಿದ್ದರೂ ದೇಶದ ಸ್ವಾತಂತ್ರ್ಯಕ್ಕಾಗಿ ಮಹಾತ್ಮಗಾಂಧಿಯೊಂದಿಗೆ ಸೇರಿ ದೇಶಕ್ಕೆ ಸ್ವಾತಂತ್ರ್ಯ ದೊರಕಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಪಂಡಿತ ಜವಹರಲಾಲ್ ನೆಹರು, ಅಪ್ಪಟ್ಟ ದೇಶ ಪ್ರೇಮ ಹೊಂದಿದ್ದ ನಾಯಕ ಎಂದು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆಂಚಮಾರಯ್ಯ ತಿಳಿಸಿದರು.
ತುಮಕೂರು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ದೇಶದ ಮೊದಲ ಪ್ರಧಾನಿ ಪಂಡಿತ ಜವಹರಲಾಲ್ ನೆಹರು ಅವರು 61ನೇ ಪುಣ್ಯಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅತ್ಯಂತ ಶ್ರೀಮಂತ ಕುಟುಂಬದಲ್ಲಿ ಹುಟ್ಟಿ, ಸಾವಿರಾರು ಕೋಟಿ ರೂಗಳ ಆಸ್ತಿಯನ್ನು ಸರಕಾರಕ್ಕೆ ದಾನ ನೀಡಿ, ದೇಶವನ್ನು ಸುಭಿಕ್ಷವಾಗಿ ಕಟ್ಟಲು ಕಟಿಬದ್ದರಾಗಿ ದುಡಿದವರು ಪಂಡಿತ ನೆಹರು. ಪಂಚವಾರ್ಷಿಕ ಯೋಜನೆಗಳು, ಅಲಿಪ್ತ ನೀತಿಯ ಮೂಲಕ ಭಾರತ ಎಲ್ಲಾ ರಂಗದಲ್ಲಿಯೂ ಉನ್ನತಿ ಸಾಧಿಸಲು ಕಾರಣರಾದರು. ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು ಎಂದರು.
ಬಿಜೆಪಿ ಪಕ್ಷದವರು ನೆಹರು ಕುಟುಂಬವನ್ನು ಬದ್ದ ವೈರಿಗಳಂತೆ ಭಾವಿಸಿ, ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಇದು ಖಂಡನೀಯ. ತಮ್ಮ ಪತ್ನಿ ಕಮಲ ನೆಹರು ಅವರ ಅನಾರೋಗ್ಯದ ನಡುವೆಯೂ ದೇಶದ ಸ್ವಾತಂತ್ಯ್ರಕ್ಕಾಗಿ 9 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ ಅಪ್ಪಟ ಸ್ವಾತಂತ್ರ್ಯ ಸೇನಾನಿ. ಸ್ವಾತಂತ್ರ್ಯ ಹೋರಾಟದಲ್ಲಿ ಪಟೇಲರು ಮಂಜೂಣಿಯಲ್ಲಿದ್ದರೂ ಕೂಡ, ಅವರ ಅನಾರೋಗ್ಯವನ್ನು ಪರಿಗಣಿಸಿ, ಅವರಿಗೆ ಪ್ರಧಾನಿ ಅವಕಾಶ ನೀಡಲಿಲ್ಲ. ಸ್ವಾತಂತ್ಯ್ರ ಬಂದು ಕೇವಲ ಮೂರು ವರ್ಷಗಳಲ್ಲಿಯೇ ಪಟೇಲರು ಸಾವನ್ನಪ್ಪಿದರು. ಇತಿಹಾಸ ಗೊತ್ತಿಲ್ಲದ ಬಿಜೆಪಿಗರು ಸುಳ್ಳನ್ನೇ ಸತ್ಯವೆಂದು ನಂಬಿಸಲು ಹೋರಾಡುತ್ತಿದ್ದಾರೆ. ಪಟೇಲ್‌ರು ರಕ್ಷಣಾ ಮಂತ್ರಿಯಾಗಿದ್ದಾಗ ಆರ್.ಎಸ್.ಎಸ್‌ನ್ನು ಬ್ಯಾನ್ ಮಾಡಿದ್ದರು. ಈ ಸತ್ಯವನ್ನು ಎಲ್ಲರಿಗೂ ತಿಳಿಸಬೇಕಿದೆ. ಬಿಜೆಪಿಯ ಹುನ್ನಾರಗಳ ವಿರುದ್ದ ಕಾಂಗ್ರೆಸ್ ಪಕ್ಷ ಒಗ್ಗೂಡಿ ಹೋರಾಟ ನಡೆಸುವ ಅಗತ್ಯವಿದೆ ಎಂದು ಹೇಳಿದರು.
ರಾಷ್ಟç ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಲು ರಾಹುಲ್ ಗಾಂಧಿ ಅವರು ಏಕಾಂಗಿಯಾಗಿ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಭಾರತ ಜೋಡೋ ಯಾತ್ರೆ, ಭಾರತ್ ನ್ಯಾಯಯಾತ್ರೆ ಮೂಲಕ ಬಿಜೆಪಿಯ ದೇಷದ ವಿರುದ್ದ ಪರಸ್ವರ ಪ್ರೀತಿಯ, ಬೆಸೆಯುವ ಹೋರಾಟ ನಡೆಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಭ್ರಷ್ಟಾಚಾರವಿದೆ ಎಂದು ಬಿಂಬಿಸಲು ಹೊರಟಿರುವ ಬಿಜೆಪಿ ಭ್ರಷ್ಟಾಚಾರ ಮಾಡಿದವರನ್ನೇ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ಜಿಲ್ಲಾ ಕಾಂಗ್ರೆಸ್ ಎಸ್ಟಿ ಘಟಕದ ಉಪಾಧ್ಯಕ್ಷ ಹೆಚ್.ಸಿ.ಹನುಮಂತಯ್ಯ, ಮುಖಂಡರಾದ ಸಿಮೆಂಟ್ ಮಂಜಣ್ಣ, ನರಸೀಯಪ್ಪ, ಷಣ್ಮುಖಪ್ಪ, ಶಿವಾಜಿ ಮಾತನಾಡಿದರು. ಈ ವೇಳೆ ಹಿರಯರಾದ ರೇವಣ್ಣ ಸಿದ್ದಯ್ಯ, ಸಂಜೀವಕುಮಾರ್, ಸಿದ್ದಲಿಂಗೇಗೌಡ, ತುಮುಲ್ ನಿರ್ದೇಶಕ ನಾಗೇಶಬಾಬು, ಗಂಗಾಧರ್, ಸುಜಾತ, ಆದಿಲ್, ಇರ್ಫಾನ್, ಕವಿತಾ, ಸೌಭಾಗ್ಯ, ಸಿಂಡಿಕೇಟ್ ಸದಸ್ಯ ಎಂ.ಜೆ.ಶಿವಣ್ಣ, ಓ.ಸಿ.ಕೃಷ್ಣಪ್ಪ, ಕೆಂಪಣ್ಣ, ಕೈದಾಳ ರಮೇಶ್, ಭಾಗ್ಯಮ್ಮ ಸೇರಿದಂತೆ ಹಲವರು ಇದ್ದರು.


