ಹೇಮಾವತಿ ನಾಲೆಯಿಂದ ಬುಗುಡನಹಳ್ಳಿಯಲ್ಲಿ ಸಂಗ್ರಹವಾಗುವ ನೀರು ಮುಂದಿನ 8 ತಿಂಗಳ ಕಾಲ ನಗರಕ್ಕೆ ಪೂರೈಕೆ ಮಾಡಬಹುದಾಗಿದೆ ಎಂದು ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದರು.
ತುಮಕೂರು ನಗರದ ಬುಗುಡನಹಳ್ಳಿ ಕೆರೆಗೆ ಅಧಿಕಾರಿಗಳೊಂದಿಗೆ ಸೋಮವಾರ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಗೊರೂರು ಜಲಾಶಯದಿಂದ ಹೇಮಾವತಿ ನಾಲೆಗೆ ಮೇ 23ರಂದು ನೀರು ಹರಿಯಬಿಟ್ಟಿದ್ದು, ಮೇ 25ರ ರಾತ್ರಿ ಬುಗಡನಹಳ್ಳಿ ಕೆರೆಗೆ ನೀರು ತಲುಪಿದೆ ಎಂದು ತಿಳಿಸಿದರು, ನಗರದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಹಾಸನದಲ್ಲಿ ಇತ್ತೀಚೆಗೆ ಜರುಗಿದ ನೀರಾವರಿ ಸಮಿತಿ ನಿರ್ಣಯದಂತೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ತುಮಕೂರಿಗೆ ಗೊರೂರು ಜಲಾಶಯದಿಂದ ನೀರು ಹರಿಸಲಾಗಿದೆ. ಮುಂದಿನ 50 ದಿನಗಳಿಗೆ ಮಾತ್ರ ಪೂರೈಕೆ ಮಾಡುವಷ್ಟು ಕೆರೆಯಲ್ಲಿ ನೀರು ಲಭ್ಯವಿತ್ತು. ಮುಂದಾಲೋಚನೆಯಿAದ ಕೆರೆಗೆ ನೀರು ಹರಿಸಲಾಗಿದೆ ಎಂದು ತಿಳಿಸಿದರು.
ಹೇಮಾವತಿ ನೀರನ್ನು ಬುಗುಡನಹಳ್ಳಿ ಕೆರೆಯಲ್ಲಿ ಸಂಗ್ರಹಿಸಿ ಶುದ್ಧೀಕರಿಸಿ ನಾಗರಿಕರಿಗೆ ಪೂರೈಕೆ ಮಾಡಲಾಗುವುದು. ಹೇಮಾವತಿ ಜಲಾಶಯದಿಂದ ಪ್ರತೀ ದಿನ 2 ಟಿಎಂಸಿ ನೀರನ್ನು ಹರಿಸಲು ನೀರಾವರಿ ಸಲಹಾ ಸಮಿತಿಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಮುಂದಿನ 8 ದಿನಗಳಲ್ಲಿ ಕೆರೆ ಭರ್ತಿಯಾಗಲಿದ್ದು, ಕೆರೆ ಭರ್ತಿಯಾದ ನಂತರ ಹೆಬ್ಬಾಕ, ನರಸಾಪುರ, ಅಮಾನಿಕೆರೆಗೆ ನೀರನ್ನು ತುಂಬಿಸುವ ಪ್ರಯತ್ನ ಮಾಡಲಾಗುವುದು. ಪ್ರಸಕ್ತ ವರ್ಷ ಅವಧಿಗೂ ಮುನ್ನವೇ ಮಳೆಗಾಲ ಪ್ರಾರಂಭವಾಗಿರುವುದರಿAದ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆಯಾಗದು ಎಂದು ಹೇಳಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ಗೊರೂರು ಜಲಾಶಯದಿಂದ ಮೇ 23 ರಿಂದ ಹೇಮಾವತಿ ನಾಲೆಗೆ ನೀರು ಹರಿಸಲಾಗಿದ್ದು, ಮೇ 25 ರಾತ್ರಿ 11.15 ಗಂಟೆಗೆ ತುಮಕೂರಿಗೆ ನೀರು ತಲುಪಿದೆ. ಸಂಗ್ರಹವಾದ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತಿ ಮುಖ್ಯಕಾರ್ಯ ನಿರ್ವಾಹಣಾಧಿಕಾರಿ ಜಿ. ಪ್ರಭು ಮಾತನಾಡಿದರು. ಪಾವಗಡ ಶಾಸಕ ಹೆಚ್.ವಿ.ವೆಂಕಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಹೇಮಾವತಿ ನಾಲಾ ಉಪವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಸಿ. ಸಂಪತ್ ಕುಮಾರ್, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಎ.ಸಿ. ಶಿವಶಂಕರ್, ತೋಟಗಾರಿಕೆ ಉಪನಿರ್ದೇಶಕ ಶಾರದಮ್ಮ, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ: ಗಿರೀಶ್ ಬಾಬುರೆಡ್ಡಿ ಇದ್ದರು.


