ದೇಶದ ಗಡಿಯಲ್ಲಿ ಭಾರತ-ಪಾಕಿಸ್ತಾನ ನಡುವೆ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯಿಂದ ಸಂಭವನೀಯ ಅಪಘಾತಗಳಿಂದ ಸಾರ್ವಜನಿಕರನ್ನು ರಕ್ಷಿಸಲು ತುಮಕೂರು ಜಿಲ್ಲೆಯಲ್ಲಿ 3000 ಸ್ವಯಂ ಸೇವಕರನ್ನು ನೇಮಕ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಕೇಸ್ವಾನ್ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಯಂ ಸೇವಕರನ್ನು ನೇಮಕ ಮಾಡಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಸ್ವಯಂ ಸೇವಕರ ನೇಮಕಾತಿಗಾಗಿ ಕಮ್ಯಾಂಡೆಂಟ್ ಹೋಮ್‌ಗಾರ್ಡ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು, ನೆಹರು ಯುವ ಕೇಂದ್ರದ ಉಪನಿರ್ದೇಶಕರನ್ನು ನಿಯೋಜಿಸಲಾಗಿದೆ. ಯುದ್ಧಕ್ಕೆ ಸಂಬಂಧಿಸಿಂತೆ ತುರ್ತು ಸಂದರ್ಭಗಳು ಘೋಷಣೆಯಾದಾಗ ಜನರ ಜೀವ ಹಾಗೂ ಆಸ್ತಿಗಳ ರಕ್ಷಣೆಗಾಗಿ ಸ್ವಯಂ ಸೇವಕರ ನೆರವನ್ನು ಪಡೆಯಲಾಗುವುದು ಎಂದು ತಿಳಿಸಿದರು.
ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಲಿಚ್ಛಿಸುವವರು 18 ವರ್ಷ ವಯೋಮಾನದವರಾಗಿದ್ದು, ದೈಹಿಕವಾಗಿ ಸದೃಢರಾಗಿರಬೇಕು. ಆಸಕ್ತರು ನಿಗದಿತ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸುವ ಬಗ್ಗೆ ಈಗಾಗಲೇ ಸ್ಥಳೀಯ ಆಡಳಿತ ವ್ಯಾಪ್ತಿಯಲ್ಲಿ ಪ್ರಚುರ ಪಡಿಸಲಾಗಿದೆ. ಸ್ವಯಂ ಸೇವಕರಾಗಿ ಆಯ್ಕೆಯಾದವರಿಗೆ ಸೂಕ್ತ ತರಬೇತಿ ನೀಡಲಾಗುವುದು ಎಂದರು.
ತುರ್ತು ಸೇವೆ ಒದಗಿಸುವ ಪೊಲೀಸ್, ಅಗ್ನಿಶಾಮಕದಳ, ಬೆಸ್ಕಾಂ, ಆರೋಗ್ಯ ಇಲಾಖೆಗಳಲ್ಲಿ ಮಾನವ ಸಂಪನ್ಮೂಲ ಹಾಗೂ ಮೂಲಭೂತ ಸೌಕರ್ಯಗಳನ್ನು ಸಿದ್ಧವಿಟ್ಟುಕೊಳ್ಳಲು ಸರ್ಕಾರ ನಿರ್ದೆಶನ ನೀಡಿರುವ ಹಿನ್ನೆಲೆಯಲ್ಲಿ ರಜೆ ಮೇಲೆ ತೆರಳಿರುವ ತುರ್ತು ಸೇವೆ ನೀಡುವ ಇಲಾಖೆಗಳ ಅಧಿಕಾರಿ/ನೌಕರರ ರಜೆಯನ್ನು ರದ್ದುಪಡಿಸಿ, ಮರಳಿ ಕರ್ತವ್ಯಕ್ಕೆ ಹಾಜರಾಗಲು ಸೂಚನೆ ನೀಡಲಾಗಿದೆ. ಜಿಲ್ಲೆಯ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ 9000 ಹಾಸಿಗೆಗಳು ಲಭ್ಯವಿದ್ದು, 12 ಆಕ್ಸಿಜನ್ ಪ್ಲಾಂಟ್, ವೆಂಟಿಲೇಟರ್, ಆಂಬುಲೆನ್ಸ್ಗಳು ಸುಸ್ಥಿತಿಯಲ್ಲಿವೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಮಾತನಾಡಿ, ಯುದ್ಧದ ಸಂದರ್ಭದಲ್ಲಿ ಸಾರ್ವಜನಿಕ ಸಭೆ/ಸಮಾರಂಭಗಳಿಗೆ ಅನುಮತಿ ನೀಡಲಾಗುವುದಿಲ್ಲ. ಹೆಚ್ಚಿನ ಜನ ಸೇರುವ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ. ಮದುವೆ, ಮತ್ತಿತರ ಶುಭ ಸಮಾರಂಭಗಳಿಗೆ ಕಡಿಮೆ ಜನರು ಮಾತ್ರ ಸೇರಲು ಅವಕಾಶ ನೀಡಲಾಗುವುದು ಎಂದು ಹೇಳಿದರು. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಿಯಬಿಡುವವರನ್ನು ಕಾನೂನು ಕ್ರಮಕೈಗೊಳ್ಳಲಾಗುವುದು. ಯಾವುದೇ ತಪ್ಪು ಸಂದೇಶಗಳು ವಾಟ್ಸ್ ಅಪ್ ಮೂಲಕ ಹಂಚಿಕೊಂಡರೆ ಸದರಿ ಗ್ರೂಪ್ ಅಡ್ಮಿನ್ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಹೆಚ್ಚಿನ ಜನ ಸೇರುವ ಶಾಪಿಂಗ್ ಮಾಲ್, ಬಸ್ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಶ್ವಾನದಳ, ಪೊಲೀಸ್ ಸಿಬ್ಬಂದಿಗಳಿಂದ ತಪಾಸಣೆ ನಡೆಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿಯೂ ಎಚ್ಚರಿಕೆ ವಹಿಸಲಾಗಿದೆ. ಜಿಲ್ಲೆಯಲ್ಲಿ 250 ನಾಕಾಬಂದಿ ಬಿಂದುಗಳನ್ನು ಗುರುತಿಸಲಾಗಿದೆ. ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡು ಬಂದರೆ ಅದನ್ನು ಮುಟ್ಟದೆ ಸಹಾಯ ವಾಣಿ ಸಂಖ್ಯೆ: 112ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಹೇಳಿದರು.
ಸರ್ಕಾರದಿಂದ ಮಾರ್ಗಸೂಚಿಗಳು ಬಂದ ಕೂಡಲೇ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಮಾಕ್ ಡ್ರಿಲ್ಅ ಮಾಡಲಾಗುವುದು. ಉದ್ವಿಗ್ನ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಜಿಲ್ಲೆಯಲ್ಲಿ ಕೋಮು ಭಾವನೆಯನ್ನು ಕೆರಳಿಸುವ ಗಲಭೆಗಳಿಗೆ ಅವಕಾಶ ನೀಡಬಾರದು. ಯಾವುದೇ ಪ್ರತಿಭಟನೆಗಳಿಗೂ ಅನುಮತಿ ನೀಡಲಾಗುವುದಿಲ್ಲ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಎಚ್ಚರಿಕೆ ಸಂದೇಶ ಬಂದರೆ ಪ್ರತಿಯೊಬ್ಬರೂ ಅನುಸರಿಸಬೇಕು. ತಪ್ಪಿದಲ್ಲಿ ಅಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಸ್ಪಷ್ಟಪಡಿಸಿದರು.


