Thursday, January 29, 2026
Google search engine
Homeಜಿಲ್ಲೆತುಮಕೂರಿನಲ್ಲಿ 300 ಹಾಸಿಗೆಗಳ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಸಿದ್ದತೆ-ಸಚಿವ ಡಾ.ಜಿ.ಪರಮೇಶ್ವರ್

ತುಮಕೂರಿನಲ್ಲಿ 300 ಹಾಸಿಗೆಗಳ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಸಿದ್ದತೆ-ಸಚಿವ ಡಾ.ಜಿ.ಪರಮೇಶ್ವರ್

ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ತುಮಕೂರು ಜಿಲ್ಲಾಸ್ಪತ್ರೆ ಆವರಣದಲ್ಲಿ 132 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ ಕಟ್ಟಡದ ನೀಲನಕ್ಷೆಯನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಅಧಿಕಾರಿಗಳೊಂದಿಗೆ ನೂತನ ಕಟ್ಟಡ ನಿರ್ಮಾಣದ ಬಗ್ಗೆ ಚರ್ಚಿಸಿದ ಅವರು, ಪ್ರಸ್ತುತ ಇರುವ ಜಿಲ್ಲಾಸ್ಪತ್ರೆಯ ಕಟ್ಟಡವು 78 ವರ್ಷ ಹಳೆಯದಾಗಿದೆ. ಇದನ್ನು ಆಧುನೀಕರಿಸಲು ಸಾಧ್ಯವಿಲ್ಲ. ಕಟ್ಟಡದ ಹಲವು ಭಾಗಗಳು ಶಿಥಿಲಗೊಳ್ಳುತ್ತಿವೆ. ಅಲ್ಲದೆ ಹಳೆಯ ಕಟ್ಟಡದ ಮೇಲೆ ಮೇಲಂತಸ್ತುಗಳ ನಿರ್ಮಾಣ ಸಾಧ್ಯವಿಲ್ಲದೆ ಇರುವುದರಿಂದ ನೂತನವಾಗಿ ಸುಸಜ್ಜಿತ ಹಾಗೂ ಆಧುನಿಕವಾದ 300 ಹಾಸಿಗೆಗಳ ಕಟ್ಟಡವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಕಟ್ಟಡ ಕಾಮಗಾರಿಯನ್ನು ಗಣಿಬಾಧಿತ ಪ್ರದೇಶಗಳ ಸಮಗ್ರ ಪುನಃಶ್ಚೇತನ ಯೋಜನೆಯಡಿ ಕೈಗೊಳ್ಳಲಾಗುವುದು. ಕಾಮಗಾರಿ ಕೈಗೊಳ್ಳುವ ಮುನ್ನ ಬೇರೆ ಜಿಲ್ಲೆಯಲ್ಲಿ ಆಧುನಿಕವಾಗಿ ನಿರ್ಮಿಸಿರುವ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಕಟ್ಟಡವನ್ನು ಜಿ+4 ಅಂತಸ್ತುಗಳನ್ನೊಳಗೊಂಡಂತೆ ಆಧುನಿಕವಾಗಿ ವಿನ್ಯಾಸಗೊಳಿಸಬೇಕು ಎಂದು ಸೂಚನೆ ನೀಡಿದರು.

ಸಾರ್ವಜನಿಕರಿಗೆ ಸಮಗ್ರ ಆರೋಗ್ಯ ಸೇವೆ ಒದಗಿಸಲು ನವೀನ ಸೌಲಭ್ಯಗಳಿಂದ ಕೂಡಿದ ಆಸ್ಪತ್ರೆ ಕಟ್ಟಡದ ನಿರ್ಮಾಣ ಅತೀ ಅಗತ್ಯವಾಗಿದೆ. ವಿನ್ಯಾಸದಲ್ಲಿ ಸುಲಭ ಪ್ರವೇಶ, ತುರ್ತು ಸೇವೆಗಳ ವೇಗ, ಸ್ವಚ್ಛತೆ ಹಾಗೂ ಸ್ಮಾರ್ಟ್ ತಂತ್ರಜ್ಞಾನಕ್ಕೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು.

ಇದಕ್ಕೂ ಮುನ್ನ ಆಸ್ಪತ್ರೆಯ ಟ್ರಾಮಾಕೇರ್ ಸೆಂಟರ್, ಮಕ್ಕಳ ವಾರ್ಡ್, ಹೆರಿಗೆ ವಾರ್ಡ್, ತೀವ್ರ ನಿಗಾ ಘಟಕಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ತೀವ್ರ ನಿಗಾ ಘಟಕದಲ್ಲಿ ರೋಗಿಗಳನ್ನು ದಾಖಲು ಮಾಡಿಕೊಂಡ ವಹಿಯನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಡಿಸಿ ಶುಭ ಕಲ್ಯಾಣ್, ಎಸ್‌ಪಿ ಕೆ.ವಿ. ಅಶೋಕ್, ಜಿಪಂ ಸಿಇಒ ಜಿ. ಪ್ರಭು, ಜಿಲ್ಲಾ ಶಸ್ತçಚಿಕಿತ್ಸಕ ಡಾ. ಅಸ್ಗರ್ ಬೇಗ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಂದ್ರಶೇಖರ್, ಆರೋಗ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಚಂದ್ರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular