ತುಮಕೂರು ಜಿಲ್ಲಾ ವಕೀಲರ ಸಂಘ ಅಧ್ಯಕ್ಷ-ಉಪಾಧ್ಯಕ್ಷ ಸೇರಿದಂತೆ ಪದಾಧಿಕಾರಿಗಳ ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ವಕೀಲ ಕೆಂಪರಾಜಯ್ಯ ಪುನರ್ ಆಯ್ಕೆಯಾಗಿದ್ದಾರೆ.
ಸಂಘದ ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಖಜಾಂಚಿ ಮತ್ತು ಕಾರ್ಯಕಾರಿ ಮಂಡಳಿ ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಡೆಯಿತು. ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಚುನಾವಣೆ ನಡೆಯಿತು.
ಬಳಿಕ ತಡರಾತ್ರಿ 12 ಗಂಟೆಯವರಿಗೂ ಮತ ಎಣಿಕೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಕೆಂಪರಾಜಯ್ಯ ಮತ್ತು ವಸಂತಕುಮಾರ್ ನಡುವೆ ತೀವ್ರ ಪೈಪೋಟಿ ನಡೆದು ಅಂತಿಮವಾಗಿ ಕೆಂಪರಾಜಯ್ಯ ಮರು ಆಯ್ಕೆಯಾದರು.
ಮೊದಲ ಸುತ್ತಿನಿಂದ ಕೊನೆಯ 15ನೇ ಸುತ್ತಿನವರೆಗೂ ಕೆಂಪರಾಜಯ್ಯ ಲೀಡ್ ಕಾಯ್ದುಕೊಂಡು ಬಂದು ಜಯಶೀಲರಾಗಿದ್ದಾರೆ.
ಮೊದಲ ಸುತ್ತಿನಲ್ಲಿ 87 ಮತಗಳು, 3ನೇ ಸುತ್ತಿನಲ್ಲಿ 128, 4ನೇ ಸುತ್ತಿನಲ್ಲಿ 173, ಐದನೇ ಸುತ್ತಿನಲ್ಲಿ 209, 6ನೇ ಸುತ್ತಿನಲ್ಲಿ 254, 7ನೇ ಸುತ್ತಿನಲ್ಲಿ 287, 8ನೇ ಸುತ್ತಿನಲ್ಲಿ 321, 10ನೇ ಸುತ್ತಿನಲ್ಲಿ 401 ಮತಗಳು ಹಾಗೂ ಕೊನೆಯ ಸುತ್ತಿನಲ್ಲಿ 514 ಮತಗಳು ಬಂದು ಅಂತಿಮವಾಗಿ ಅಧ್ಯಕ್ಷರಾಗಿ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ರವಿಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಮಹೇಶ್ ಹಿರೇಹಳ್ಳಿ, ಜಂಟಿ ಕಾರ್ಯದರ್ಶಿಆಗಿ ಧನಂಜಯ, ಖಜಾಂಚಿಯಾಗಿ ಸಿಂಧೂ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಮಂಡಳಿಯ ಮಹಿಳಾ ಮೀಸಲು ಸ್ಥಾನಕ್ಕೆ ಪದ್ಮಶ್ರೀ, ಮತ್ತು ಸೇವಾಪ್ರಿಯ ಆಯ್ಕೆಯಾಗಿದ್ದಾರೆ.