ರಸ್ತೆ ಗುಂಡಿಗಳ ಬಗ್ಗೆ ಬೇಸತ್ತ ತುಮಕೂರು ನಗರದ ಗೋಕುಲ, ಬಡ್ಡಿಹಳ್ಳಿ ಬಡಾವಣೆ ನಾಗರೀಕರು ರಸ್ತೆ ಗುಂಡಿಗಳಿಗೆ ಪೂಜೆ ಸಲ್ಲಿಸಿ ಗುಂಡಿಗಳನ್ನು ಮುಚ್ಚಲು ನಗರಪಾಲಿಕೆಯ ಗಮನ ಸೆಳೆಯುವ ವಿನೂತನ ಪ್ರತಿಭಟನೆ ನಡೆಸಿದರು.
ಹೈಕೋರ್ಟ್ ನ್ಯಾಯವಾದಿ ಎಲ್.ರಮೇಶ್ ನಾಯಕ್ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಸ್ಥಳೀಯ ನಾಗರೀಕರು ಇಲ್ಲಿನ ರಸ್ತೆ ಗುಂಡಿಗಳಿಗೆ ಪೂಜೆ ಮಾಡಿ, ಅಪಾಯಕಾರಿ ಗುಂಡಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.
ನಗರದ ರಸ್ತೆ ಗುಂಡಿಗಳನ್ನು ಮುಚ್ಚುವ ಸಂಬಂಧ ನ್ಯಾಯವಾದಿ ಎಲ್.ರಮೇಶ್ ನಾಯಕ್ ಈ ಹಿಂದೆ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ನಗರಾಭಿವೃದ್ಧಿ ಇಲಾಖೆ ಹಾಗೂ ತುಮಕೂರು ನಗರ ಪಾಲಿಕೆಗೆ ನೋಟೀಸ್ ನೀಡಿದ್ದ ಹೈಕೋರ್ಟ್, ರಸ್ತೆಗುಂಡಿ ಮುಚ್ಚಲು ಕ್ರಮ ತೆಗೆದುಕೊಂಡು ವರದಿ ಮಾಡುವಂತೆ ಸೂಚಿಸಿ ಎರಡು ತಿಂಗಳ ಕಾಲಾವಕಾಶ ನೀಡಿತ್ತು. ಆದರೆ ನಗರದ ಹಲವಾರು ಬಡಾವಣೆಗಳ ರಸ್ತೆಗಳಲ್ಲಿ ಸಾಕಷ್ಟು ಗುಂಡಿಗಳಿದ್ದು ಪಾಲಿಕೆ ಮುಚ್ಚುವ ಪ್ರಯತ್ನ ಮಾಡಿಲ್ಲ ಎಂದು ರಮೇಶ್ ನಾಯಕ್ ದೂರಿದರು.
ನಗರದಲ್ಲಿ ರಸ್ತೆ ಗುಂಡಿಗಳಿದ್ದರೆ 9449872599ಗೆ ವಾಟ್ಸಾಪ್ ಮಾಡಿದರೆ ಕ್ರಮ ತೆಗೆದುಕೊಳ್ಳುವುದಾಗಿ ನಗರಪಾಲಿಕೆ ಹೇಳಿತ್ತು. ಸಾಕಷ್ಟು ಗುಂಡಿಗಳ ಬಗ್ಗೆ ಫೋಟೊ ಸಮೇತ ವಾಟ್ಸಾಪ್ ಮಾಡಿದ್ದರೂ ಪಾಲಿಕೆ ಗುಂಡಿ ಮುಚ್ಚುವ ಕಾರ್ಯ ಮಾಡಿಲ್ಲ. ಹೀಗಾಗಿ ಗುಂಡಿ ಪೂಜೆ ಮೂಲಕ ಹೋರಾಟ ಮಾಡಿ, ಜನರಲ್ಲಿ ಅರಿವು ಮೂಡಿಸಿ, ಪಾಲಿಕೆಯ ಗಮನ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.
ನಗರದ ನಾಗರೀಕರು ತಮ್ಮ ಬಡಾವಣೆಯ ರಸ್ತೆಗಳಲ್ಲಿ ಗುಂಡಿಗಳು ಕಂಡುಬಂದಲ್ಲಿ ನಗರಪಾಲಿಕೆಯ ಗಮನಕ್ಕೆ ತರಲು 9449872599ಗೆ ವಾಟ್ಸಾಪ್ ಮಾಡಬಹುದು.ಇಂತಹುದೊಂದು ಜಾಗೃತಿ ಜನರಲ್ಲಿ ಮೂಡಿದರೆ ನಗರದ ರಸ್ತೆಗಳನ್ನು ಗುಂಡಿಮುಕ್ತ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಗುಂಡಿ ಪೂಜೆ ನಂತರ ಮನೆಮನೆಗೆ ತೆರಳಿದ ಮುಖಂಡರು ಕರಪತ್ರ ವಿತರಣೆ ಮಾಡಿ ಜನರಲ್ಲಿ ರಸ್ತೆಗುಂಡಿ ಸಮಸ್ಯೆ ಹಾಗೂ ಪರಿಹಾರದ ಬಗ್ಗೆ ಅರಿವು ಮೂಡಿಸಿದರು.
ಮೈದಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಆರ್.ರವೀಂದ್ರ, ಸದಸ್ಯರಾದ ನರಸಿಂಹಮೂರ್ತಿ ಕರೇಕಲ್ಲುಪಾಳ್ಯ, ಸೋಮಣ್ಣ, ಗಂಗಾಧರ ನಾಯಕ್, ಪ್ರಸನ್ನಕುಮಾರ್, ಮುಖಂಡರಾದ ಮಲ್ಲಿಕಾರ್ಜುನಯ್ಯ, ಕೆ.ಎನ್.ಪುಟ್ಟರಾಜು, ಹೆಚ್.ಆರ್.ನಾಗರಾಜು, ಅರೆಗುಜ್ಜನಹಳ್ಳಿ ಮಂಜುನಾಥ್, ಮುರಳಿ ನಾಯಕ್, ನರಸಿಂಹರಾಜು, ಶ್ರೀರಂಗಪ್ಪ, ಗೋವಿಂದರಾಜು, ಲಕ್ಷಿö್ಮÃಕಾಂತರಾಜು, ಅಶ್ವತ್ಥ್, ಮಂಜುನಾಥ್, ರಮೇಶ್, ಪೃಥ್ವಿ ಜೆ.ಸಾಗರ್, ನವೀನ್, ಆನಂದ್ ಶಿವರಾಜು, ಹನುಮಂತರಾಜು ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.