Monday, April 28, 2025
Google search engine
Homeಮುಖಪುಟಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಗೆ ಹೋರಾಟ ಮಾಡಬೇಕು- ದಿನೇಶ್ ಅಮೀನ್ ಮಟ್ಟು

ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಗೆ ಹೋರಾಟ ಮಾಡಬೇಕು- ದಿನೇಶ್ ಅಮೀನ್ ಮಟ್ಟು

ನಾವು ನಮ್ಮ ಊರು, ನೆಲ, ಸಂಗಾತಿಯನ್ನು ಎಂದಿಗೂ ಮರೆಯಬಾರದು. ನನ್ನ ಸಮುದಾಯ ಸುಖದ ಬದುಕು ಕಾಣುವವರೆಗೆ ನನ್ನ ಸುಖದ ಬದುಕು ಸಾಗುವುದಿಲ್ಲ ಎಂಬ ಹೋರಾಟದ ಮನೋಭಾವದಿಂದ ಬದುಕಿದ ಹಲವು ಮಹನೀಯರು ನಮ್ಮ ಕಣ್ಮುಂದೆ ಇದ್ದಾರೆ. ಅಂತವರನ್ನು ಗುರುತಿಸಿ ಸರಕಾರವು ಬಾಬು ಜಗಜೀವನ್ ರಾಮ್ ಪ್ರಶಸ್ತಿ ನೀಡಿದೆ. ನಮ್ಮೊಳಗೆ ಪ್ರತಿಭಟನೆ ಕಿಚ್ಚು ಇರುತ್ತೆ. ಅದಕ್ಕೆ ನಾರಾಯಣ ಗುರು, ಅಂಬೇಡ್ಕರ್, ಲೋಹಿಯಾ ಅಂತವರ ಚಿಂತನೆಗಳು ಬಹು ಮುಖ್ಯ. ನಾವು ಓದುವ ಪ್ರಸ್ತುತ ಇತಿಹಾಸ ನಿಜ ಎಂದು ಒಪ್ಪಲಾಗದು. ಆದರೆ ನಮ್ಮ ಸಮುದಾಯಕ್ಕೆ ಹೋರಾಟ ಮಾಡಿದ ನಾಯಕರ ಶ್ರಮ ಗಮನಿಸಿದಾಗ ಇತಿಹಾಸದ ನೈಜ್ಯತೆ ಅರಿವಾಗುತ್ತದೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ತಿಳಿಸಿದ್ದಾರೆ.

ತುಮಕೂರು ನಗರದ ಮುರುಘರಾಜೇಂದ್ರ ಸಭಾಂಗಣದಲ್ಲಿ ಒಳಮೀಸಲಾತಿ ಹೋರಾಟ ಸಮಿತಿ, ತುಮಕೂರು ಆಯೋಜಿಸಿದ್ದ ಬಾಬು ಜಗಜೀವನ್‌ರಾಂ ಅವರ 118ನೇ ಜನ್ಮ ಜಯಂತಿ, ಬಾಬು ಜಗಜೀವನ್‌ರಾಂ ಪ್ರಶಸ್ತಿ ಪುರಸ್ಕತರಿಗೆ ಅಭಿನಂದನಾ ಸಮಾರಂಭ ಮತ್ತು ಒಳಮೀಸಲಾತಿ ಜಾರಿಗಾಗಿ ದತ್ತಾಂಶ ಕ್ರೂಡೀಕರಣ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಒಳಮೀಸಲಾತಿ ಕುರಿತು ಸಾಕಷ್ಟು ಪರ ವಿರೋಧ ಚರ್ಚೆಗಳು ವ್ಯಕ್ತವಾಗಿವೆ. ಎಲ್ಲೆಡೆ ಒಳಮೀಸಲಾತಿ ಹೋರಾಟದ ಕಾವು ದೊಡ್ಡದಾಗಿದೆ. ಅದು ತಣ್ಣಗಾಗಲು ಬಿಡಬೇಡಿ. ಎಲ್ಲಾ ಮೀಸಲಾತಿ ವಿಚಾರಗಳು ನ್ಯಾಯಾಲಯಕ್ಕೆ ಹೋಗುತ್ತೆ. 2006 ರ ನಂತರ ಈ ದೇಶದಲ್ಲಿ ಮೀಸಲಾತಿ ಬಗ್ಗೆ ಚಳುವಳಿಗಳು ನಡೆದಿವೆ. ಆದರೆ ಅವುಗಳು ವಿವಾದದ ಕೇಂದ್ರ ಬಿಂದುಗಳಾಗುತ್ತಿವೆ ಎಂದರು.

ಅಂಬೇಡ್ಕರ್ ಅವರು ಬ್ರಾಹ್ಮಣ ಮತ್ತು ಬಂಡವಾಳಶಾಹಿ ವಿರುದ್ಧ ಹೋರಾಟ ಮಾಡಿದ್ದರು.ಇಂದು ಅವುಗಳ ಜಾಗದಲ್ಲಿ ಕೋಮುವಾದ ಬಂದು ಕುಳಿತಿದೆ. ಬ್ರಾಹಣ್ಯದ ಬದಲಿಗೆ ಮುಸ್ಲಿಮರು ನಮ್ಮ ವಿರೋಧಿಗಳು ಎಂದು ಬಿಂಬಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ದಲಿತರಲ್ಲಿ ಎಡ-ಬಲ, ಒಬಿಸಿ ಯಲ್ಲಿ ಕೆಳ-ಮೇಲೂ ಹೀಗೆ ಎಲ್ಲಾ ಸಮುದಾಯಗಳಲ್ಲೂ ಮೀಸಲಾತಿಗಾಗಿ ಬಡಿದಾಡುವಂತಾಗಿದೆ. ಆದರೆ ಶೇ50ರ ಮೀಸಲಾತಿಯನ್ನು ಕೆಲವೇ ವರ್ಗಗಳು ಯಾವ ವಿವಾದವೂ ಇಲ್ಲದೆ ಅನುಭವಿಸುತ್ತಿವೆ. ಸರಕಾರಿ ಉದ್ಯೋಗದ ಶೇ1ರಷ್ಟು ಹುದ್ದೆಗಳಿಗೆ ನಾವು ಕಚ್ಚಾಡುತ್ತಿದ್ದೇವೆ. ಆದರೆ ಖಾಸಗೀ ಕ್ಷೇತ್ರದ ಸುಮಾರು 90ರಷ್ಟು ಉದ್ಯೋಗ ಅಹಿಂದದಿಂದ ದೂರವೇ ಉಳಿದಿದೆ. ಹಾಗಾಗಿ ಒಳಮೀಸಲಾತಿ ಜಾರಿ ನಂತರ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಗಾಗಿ ಇದೇ ರೀತಿಯ ಸಂಘಟಿತ ಹೋರಾಟ ನಡೆಬೇಕಾಗಿದೆ ಎಂದರು.

ಜವಾಹರ್‌ಲಾಲ್ ನೆಹರು ನಂತರ ಬಾಬೂಜಿ ಪ್ರಧಾನಿ ಆಗಬೇಕಿತ್ತು. ಬಾಬೂಜಿ ಅವರ ಹೋರಾಟದ ಕಿಚ್ಚು ಮೆಚ್ಚುವಂತದ್ದು, ಅವರ ವಿದೇಶಿ ಜೊತೆಗಿನ ನಿಲುವುಗಳು ದೇಶದ ಐಕ್ಯತೆಯ ಸಂಕೇತ. ಬೆಂಬಲ ಬೆಲೆ, ನೀರಾವರಿ, ಗೊಬ್ಬರ ಸೇರಿದಂತೆ ಕೃಷಿಗೆ ಸಂಬಂಧಿಸಿದಂತೆ ಮಾದರಿಯಾಗಿ ನಿಲ್ಲಬಲ್ಲ ವ್ಯಕ್ತಿ ಬಾಬು ಜಗಜೀವನ್ ರಾಂ. ಅವರು ಕಾರ್ಮಿಕರ ಪರವಾಗಿ ಸದಾ ಧ್ವನಿ ಎತ್ತಿದ್ದರು. ಇಂದು ಕಾರ್ಮಿಕ ಕಾಯ್ದೆಗಳನ್ನು ಮಾಡಿ ಅವರನ್ನು ತುಳಿಯಲಾಗುತ್ತಿದೆ. ಇಂದು ಪ್ರತಿಯೊಬ್ಬರ ಕೃಷಿಕರು ಬಾಬೂಜಿ ಅವರನ್ನು ನೆನಪು ಮಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿ.ಪಂ.ಮಾಜಿ ಸದಸ್ಯ ಕೆಂಚಮಾರಯ್ಯ, ಅಭಿನಂದನೆ ಸ್ವೀಕರಿಸಿದ ಕೆ.ದೊರೆರಾಜು, ಕುಂದೂರ ತಿಮ್ಮಯ್ಯ, ಓಬಳೇಶ್ ಮಾತನಾಡಿದರು. ಉಪನ್ಯಾಸಕ ನರಸಿಂಹಮೂರ್ತಿ ಪ್ರಸ್ತಾವಿಕ ನುಡಿಗಳನ್ನಾಡಿದರು.
ಒಳಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಡಾ.ವೈ.ಕೆ ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಅಭಿನಂದನಾ ಸಮಾರಂಭದಲ್ಲಿ 2025 ನೇ ಸಾಲಿನ ಡಾ.ಬಾಬು ಜಗಜೀವನ್ ರಾಮ್ ರಾಜ್ಯ ಪ್ರಶಸ್ತಿಗೆ ಭಾಜನರಾದ ಜಿಲ್ಲೆಯ ಪ್ರಗತಿಪರ ಚಿಂತಕ ಪ್ರೊ. ದೊರೆರಾಜು. ಕೆ, ದಲಿತ ಹೋರಾಟಗಾರ ಕುಂದೂರು ತಿಮ್ಮಯ್ಯ, ಸಮಾಜಿಕ ಹೋರಾಟಗಾರ ಓಬಳೇಶ್ ಕೆ. ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಮುಖಂಡರಾದ ನರಸೀಯಪ್ಪ, ಕೊಟ್ಟ ಶಂಕರ್, ಪಿ.ಎನ್.ರಾಮಯ್ಯ, ಡಿಎಸ್.ಎಸ್ ಮಹಿಳಾ ಹೋರಾಟಗಾರ್ತಿ ಗಂಗಮ್ಮ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular