ಒಳಮೀಸಲಾತಿ ಹೋರಾಟಕ್ಕೆ 2024 ಆಗಸ್ಟ್ 1ರ ಸುಪ್ರಿಂಕೋರ್ಟಿನ ಏಳು ನ್ಯಾಯಾಧೀಶರ ತೀರ್ಪು ದೊಡ್ಡ ಶಕ್ತಿ ನೀಡಿದೆ. ತೀರ್ಪಿನ ಫಲವಾಗಿಯೇ ಈ ಬಗ್ಗೆ ಮಾತನಾಡಲು ಹಿಂಜರಿಯುತ್ತಿದ್ದ ರಾಜಕಾರಣಿಗಳು ಮಾತನಾಡುವಂತಾಗಿದೆ. ಒಳಮೀಸಲಾತಿ ಜಾರಿ ನಿಟ್ಟಿನಲ್ಲಿ ಇದೊಂದು ದೊಡ್ಡ ಹೆಜ್ಜೆ ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದರು.
ತುಮಕೂರು ನಗರದ ಮುರುಘರಾಜೇಂದ್ರ ಸಭಾಂಗಣದಲ್ಲಿ ಒಳಮೀಸಲಾತಿ ಹೋರಾಟ ಸಮಿತಿ, ತುಮಕೂರು ಆಯೋಜಿಸಿದ್ದ ಬಾಬು ಜಗಜೀವನ್‌ರಾಂ ಅವರ 118ನೇ ಜನ್ಮ ಜಯಂತಿ, ಬಾಬು ಜಗಜೀವನ್‌ರಾಂ ಪ್ರಶಸ್ತಿ ಪುರಸ್ಕತರಿಗೆ ಅಭಿನಂದನಾ ಸಮಾರಂಭ ಮತ್ತು ಒಳಮೀಸಲಾತಿ ಜಾರಿಗಾಗಿ ದತ್ತಾಂಶ ಕ್ರೂಡೀಕರಣ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಳಮೀಸಲಾತಿ ಕಲ್ಪಿಸಬೇಕೆಂದು 30 ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ನಮ್ಮ ಹೋರಾಟದ ಫಲವಾಗಿ ಸುಪ್ರೀಂಕೋರ್ಟ್ ಒಳ ಮೀಸಲಾತಿ ಕಲ್ಪಿಸುವುದು ಆಯಾ ರಾಜ್ಯಗಳಿಗೆ ಅಧಿಕಾರವಿದೆ ಎಂದು ಹೇಳಿದೆ. ಹೀಗಾಗಿ ನಮ್ಮ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯ ಮತ್ತು ಈ ಶೋಷಿತ ಸಮುದಾಯ, ಹಿಂದುಳಿದವರ ಪರವಾದಂತಹ ನಿಲುವನ್ನು ಹೊಂದಿದ್ದಾರೆ. ಹೀಗಾಗಿ ಒಳಮೀಸಲಾತಿಯನ್ನು ಜಾರಿಗೆ ತರುತ್ತೇವೆ. ಆಂಧ್ರಪ್ರದೇಶದಲ್ಲಿ ಮಾದಿಗ ಸಮುದಾಯಕ್ಕೆ ಶೇ.10ರಷ್ಟು ಮೀಸಲಾತಿ ದೊರೆತಿದೆ. ಇಲ್ಲಿಯೂ ಅದೇ ರೀತಿಯಲ್ಲಿ ಮೀಸಲಾತಿ ಸಿಗಬೇಕಾಗಿತ್ತು. ಆದರೆ ಕೆಲವರು ಒಳಮೀಸಲಾತಿ ಆಗಲಿ ಎಂದು ಹೇಳುತ್ತಾರೆಯೇ ಹೊರತು, ಅದನ್ನು ಜಾರಿಗೆ ಒತ್ತಡ ಹಾಕುವುದಿಲ್ಲ. ಇದರ ಪರಿಣಾಮ ಇಲ್ಲಿಯವರೆಗೆ ಎಳೆದುಕೊಂಡು ಬಂದಿದೆ ಎಂದು ಹೇಳಿದರು.
ನ್ಯಾ.ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಲು ಎಲ್ಲರೂ ಹಿಂಜರಿದರು.ಅದು ಜಾರಿಯಾದ ಮೇಲೆ ಯಾರಾದರೂ ನ್ಯಾಯಾಲಯಕ್ಕೆ ಹೋದರೆ ಮೀಸಲಾತಿ ಕಲ್ಪಿಸಲು ತೊಡಕಾಗುತ್ತದೆ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನ್ಯಾ.ನಾಗಮೋಹನ್ ದಾಸ್ ಆಯೋಗ ರಚಿಸಿದರು. ಎಂಪೆರಿಕಲ್ ಡಾಟಾ ಸಂಗ್ರಹಕ್ಕೆ ಹೇಳಿದ್ದಾರೆ. ನಿಖರ ಮಾಹಿತಿ ಸಿಕ್ಕಿದರೆ ಅದರಿಂದ ಒಳ್ಳೆಯದಾಗಲಿದೆ. ಜಾತಿಯ ಕಾಲಂನಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಅಂತಾ ಇದೆ. ಮೈಸೂರು ಮತ್ತು ಬೆಂಗಳೂರು ವಿಭಾಗದ ಸುಮಾರು 16 ಜಿಲ್ಲೆಗಳಲ್ಲಿ ಈ ಗೊಂದಲ ಮುಂದುವರೆದಿದೆ. ಹೀಗಾಗಿ ಮಾದಿಗರು ಆದಿ ಕರ್ನಾಟಕ ಬರೆಸಿದ ನಂತರ ಮೂಲಜಾತಿ ಕಾಲಂನಲ್ಲಿ ಮಾದಿಗ ಎಂದು ಬರೆಸಬೇಕು ಎಂದು ಕರೆ ನೀಡಿದರು.
ಜಾತಿಗಣತಿ ಸರ್ವೇಗೆ ಅಧಿಕಾರಿಗಳು ಆಗಮಿಸಿದ ವೇಳೆ ಜಾತಿ ಕಲಂನಲ್ಲಿ ಆದಿ ಕರ್ನಾಟಕ ಬರೆಸಿದ ಮೇಲೆ ಮಾದಿಗರೋ, ಹೊಲೆಯರೋ, ಛಲವಾದಿಗಳೋ ಎಂಬುದನ್ನು ಬರೆಸಬೇಕು. ಆದಿ ದ್ರಾವಿಡ ಎಂದು ಬರೆಸಿದ ಮೇಲೆ ಹೊಲೆಯರೋ, ಛಲವಾದಿಗಳೋ, ಮಾದಿಗರೋ ಎಂಬುದನ್ನು ಸ್ಪಷ್ಟವಾಗಿ ಬರೆಸಬೇಕು. ಆಗ ಮಾತ್ರ ಸಮಸ್ಯೆ ಬಗೆಹರಿಯಲಿದೆ. ಎಲ್ಲರೂ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು. ಹಾಗಾಗಿ ಮಾದಿಗ ಎಂದು ನೇರವಾಗಿ ಬರೆಸುವವರಿಗೆ ಮಾತ್ರ ಮೀಸಲಾತಿ ದೊರೆಯುತ್ತದೆ.ಇಲ್ಲದಿದ್ದರೆ ಮೀಸಲಾತಿ ದೊರೆಯುವುದಿಲ್ಲ.
ಶಿಕ್ಷಣ, ಉದ್ಯೋಗ ಸಿಗಬೇಕೆಂದರೆ ಮಾದಿಗ ಎಂದು ನಮೂದಿಸಬೇಕು. ಹಿಂಜರಿಕೆಯಿಂದ ಉಪ ಜಾತಿ ಕಲಂ ಖಾಲಿ ಬಿಟ್ಟರೆ ಅರ್ಜಿ ರಿಜೆಕ್ಟ್ ಆಗಲಿದೆ. ಎಲ್ಲಾ ರೀತಿಯ ಸೌಲಭ್ಯಗಳಿಂದಲೂ ವಂಚಿತರಾಗುತ್ತೀರಿ. ಈ ಎಚ್ಚರ ನಿಮಗೆ ಇರಲಿ, ಅದರಲ್ಲಿಯೂ ವಿದ್ಯಾವಂತರಾಗಿ, ಸರಕಾರ ನೌಕರಿ ಪಡೆದು, ಹಟ್ಟಿಗಳಿಂದಾಚೆ ಬದುಕುತ್ತಿರುವವರು ಹೆಚ್ಚು ಗಮನದಲ್ಲಿಟ್ಟುಕೊಳ್ಳಿ ಎಂದು ಸಲಹೆ ನೀಡಿದರು.