ಪುಸ್ತಕ ಪ್ರಕಾಶನ ಉದ್ಯಮವಾಗಿ ಕೋಟ್ಯಂತರ ರೂ ವ್ಯವಹಾರ ನಡೆಸುತ್ತಿದ್ದು, ಸಾಹಿತಿಗಳ ಗುಂಪುಗಾರಿಕೆ, ಪುಸ್ತಕ ಪ್ರಕಾಶನದಲ್ಲಿಯೂ ಮುಂದುವರೆದಿದೆ. ಇದಕ್ಕೆ ಇತ್ತೀಚಗೆ ವಿಧಾನಸೌಧದಲ್ಲಿ ಆಯೋಜಿಸಿದ್ದ ಪುಸ್ತಕ ಮೇಳವೇ ಸಾಕ್ಷಿ ಎಂದು ಕಥೆಗಾರ ರಘುನಾಥ ಚ.ಹ. ತಿಳಿಸಿದರು.
ತುಮಕೂರು ನಗರದ ಕನ್ನಡ ಭವನದಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಜಿಲ್ಲಾ ಶಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್,ದವನ ಭೂಮಿಕೆ ಸಾಂಸ್ಕೃತಿಕ ಟ್ರಸ್ಟ್, ಜಿಲ್ಲಾ ಲೇಖಕಿಯರ ಸಂಘದ ಸಹಯೋಗದಲ್ಲಿ ಡಾ.ಓ.ನಾಗರಾಜು ಅವರ “ಹಿಂದೂಪುರ” ಕಾದಂಬರಿ ಬಿಡುಗಡೆ ಮಾಡಿ ಮಾತನಾಡಿದ ಅವರು, ವೀರಲೋಕ ಎನ್ನುವ ಪ್ರಕಾಶನ ಸಂಸ್ಥೆಯೊಂದು ಒಂದು ವರ್ಷದಲ್ಲಿ ಸುಮಾರು 1.04 ಕೋಟಿ ರೂಗಳ ವಹಿವಾಟು ನಡೆಸಿದೆ. ಆದರೆ ಅವರು ಪ್ರಕಟಿಸಿದ ಒಂದೇ ಒಂದು ಕೃತಿ ಕೂಡ ಸಾರ್ವಜನಿಕವಾಗಿ ಚರ್ಚೆಯಾಗಿಲ್ಲ. ಆದರೆ ದಲಿತ, ಬಂಡಾಯ ಬರಹಗಾರರು ಬರೆದ ಅನೇಕ ಕೃತಿಗಳು ಚರ್ಚೆಯಾಗಿವೆ. ಚರ್ಚೆಯ ವಸ್ತು ಲೇಖಕನೇ ಆಗಿರುವುದು ವಿಪರ್ಯಾಸ ಎಂದರು.
ಸಾಹಿತ್ಯವೂ ಒಂದು ಪ್ರದರ್ಶನ ಕಲೆಯಾಗಿದೆಯೇ ಎಂಬ ಅನುಮಾನ ನಮ್ಮನ್ನು ಕಾಡುತ್ತಿದೆ. ಪುಸಕ್ತವನ್ನು ಪ್ರಸಾದ ಎಂದುಕೊಳ್ಳುವ ಗುಂಪು ಒಂದಾದರೆ, ಪುಸ್ತಕವನ್ನು ಪದಾರ್ಥ ಎನ್ನುವ ಗುಂಪು ಮತ್ತೊಂದು ಇದೆ. ಈ ಎರಡು ಗುಂಪನ್ನು ಮೀರಿದ ಕೃತಿ ಹಿಂದೂಪುರ ಎಂದರು.
ನಾಡೋಜ ಬರಗೂರು ರಾಮಚಂದ್ರಪ್ಪ ಮಾತನಾಡಿ,ಕನ್ನಡ ಸಾಹಿತ್ಯದಲ್ಲಿ ಬಂಡಾಯ, ದಲಿತ, ಪ್ರಗತಿಪರ ಸಾಹಿತಿಗಳ ಕೃತಿಗಳನ್ನು ವಿಮರ್ಶಕರು ನೋಡುವ ದೃಷ್ಟಿಕೋನ ಬದಲಾಗಿದೆ. ಹಾಗಾಗಿಯೇ ಅನೇಕ ಕೃತಿಗಳು ಜನರ ನಡುವೆ ಚರ್ಚೆಗೆ ಬಾರದಂತಾಗಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ಎಸ್.ನಾಗಣ್ಣ, ಲೇಖಕ ನರಸಿಂಹಮೂರ್ತಿ, ಹರಿಕಥಾ ವಿದ್ವಾನ್ ಡಾ.ಲಕ್ಷ್ಮಣದಾಸ್, ಕುಂದೂರು ತಿಮ್ಮಯ್ಯ, ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಲೇಖಕಿಯರ ಸಂಘದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ವಿರೂಪಾಕ್ಷ ಡ್ಯಾಗೇರಹಳ್ಳಿ, ಬಸವರಾಜಪ್ಪ ಅಪ್ಪಿನಕಟ್ಟೆ, ತುಮಕೂರು ವಿವಿ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ತಿಪ್ಪೇಸ್ವಾಮಿ, ಹಿಂದೂಪುರ ಕಾದಂಬರಿಯ ಲೇಖಕ ಡಾ.ಓ.ನಾಗರಾಜು, ಉಪನ್ಯಾಸಕರಾದ ರೇಣುಕಪ್ರಸಾದ್, ಮಂಜುಳ ಇದ್ದರು.


