ಸಹಕಾರ ಸಚಿವ ಕೆ.ಎನ್ ರಾಜಣ್ಣ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಹತ್ಯೆಗೆ ಸುಪಾರಿ ನೀಡಿದ್ದ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ.
ಕೊಲೆಗೆ ಸುಪಾರಿ ನೀಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೇಂದ್ರ ನೀಡಿರುವ ದೂರು ಆಧರಿಸಿ ಸೋಮ ಅಲಿಯಾಸ್ ಜಯಪುರ ಸೋಮ, ಭರತ್, ಅಮಿತ್, ಗುಂಡಾ ಮತ್ತು ಯತೀಶ್ ಎಂಬುವರ ವಿರುದ್ಧ ಬಿಎನ್ಎಸ್ ಕಲಂ 109, 329(4), 61(2) ಹಾಗೂ 190 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕೆಲ ತಿಂಗಳ ಹಿಂದೆ ದೊರೆತ ಆಡಿಯೋ ರೆಕಾರ್ಡ್ನಲ್ಲಿ ಇಬ್ಬರು ಸಂಭಾಷಣೆ ನಡೆಸಿ ಕೊಲೆ ಸಂಚು ನಡೆಸಿರುವುದು ಗೊತ್ತಾಗಿದೆ. ಈ ಆಡಿಯೋದಲ್ಲಿ ಬೆಂಗಳೂರು ಮೂಲದ ಇಬ್ಬರು ಪ್ರಬಲರು ಹತ್ಯೆಗೆ 70 ಲಕ್ಷಕ್ಕೆ ಸುಪಾರಿ ನೀಡಿದ್ದಲ್ಲದೇ, ಮುಂಗಡವಾಗಿ 5 ಲಕ್ಷ ರೂ. ನೀಡಿರುವ ಬಗ್ಗೆ ತಿಳಿದುಬಂದಿದೆ ಎಂದು ರಾಜೇಂದ್ರ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ನಡುವೆಯೇ ಸುಪಾರಿಗೆ ಸಂಚು ರೂಪಿಸಿರುವುದು ಆಡಿಯೋದಲ್ಲಿ ಬಯಲಾಗಿದೆ. ತನ್ನ ಹತ್ಯೆಗೆ ಸುಪಾರಿ ನೀಡಿದ್ದ ವಿಚಾರ ರಾಜೇಂದ್ರ ಅವರಿಗೆ ತಿಳಿದಿದ್ದು ಸಹ ಇದೇ ಆಡಿಯೋದಿಂದ ಎನ್ನುವುದು ಗೊತ್ತಾಗಿದೆ. ಇದೇ ಆಡಿಯೋ ಆಧರಿಸಿ ರಾಜೇಂದ್ರ ಅವರು ದೂರು ದಾಖಲಿಸಿದ್ದಾರೆ.
ಕಳೆದ ಡಿಸೆಂಬರ್‌ನಲ್ಲಿ ಪುಷ್ಪಾ ಹಾಗೂ ರಾಕಿ ಎನ್ನುವವರ ನಡುವೆ ಸಂಭಾಷಣೆ ನಡೆದಿತ್ತು. ಈ ಆಡಿಯೋನಲ್ಲಿ ಪ್ರಕರಣದ ಎ1 ಆರೋಪಿ ಸೋಮನ ಪ್ಲ್ಯಾನ್ ಬಗ್ಗೆ ಪುಷ್ಪಾ ಎನ್ನುವ ಮಹಿಳೆ ಇಂಚಿಂಚೂ ಮಾಹಿತಿಯನ್ನು ಬಿಚ್ಚಿಟ್ಟಿದ್ದಾಳೆ.
ಆರೋಪಿ ಸೋಮ ರಾಜೇಂದ್ರರನ್ನ ಕೊಲೆ ಮಾಡಲು ಸುಪಾರಿ ಪಡೆದಿರುವುದಾಗಿ ಪುಷ್ಪಾಳ ಬಳಿ ಹೇಳಿಕೊಂಡಿದ್ದಾನೆ. ಆ ಬಳಿಕವೇ ಪುಷ್ಪಾ ಸುಪಾರಿ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಿದ್ದಳು. ಸೋಮನ ಜೊತೆಗಿದ್ದುಕೊಂಡೇ ಕೊಲೆ ಸಂಚಿನ ಮಾಹಿತಿ ಕಲೆಹಾಕಿದ್ದಳು, ಬಳಿಕ ಈ ವಿಚಾರವನ್ನು ರಾಜೇಂದ್ರ ಅವರಿಗೆ ತಿಳಿಸಲು ಪುಷ್ಪಾ ಮುಂದಾಗಿದ್ದಾಳೆ.
ರಾಜೇಂದ್ರ ಅವರಿಗೆ ವಿಷಯ ತಿಳಿಸಲು ರಾಕಿ ಎನ್ನುವ ಹುಡುಗನನ್ನು ಬಳಸಿಕೊಂಡಿದ್ದಾಳೆ. ಅದಕ್ಕಾಗಿ ಕೊಲೆ ಸಂಚಿನ ಬಗ್ಗೆ ಪುಷ್ಪ ಹೇಳಿದ್ದನ್ನ ರಾಕಿ ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ. ಬಳಿಕ ರಾಜೇಂದ್ರ ಅವರಿಗೆ ಈ ಆಡಿಯೋವನ್ನು ತಲುಪಸಿಲಾಗಿತ್ತು. ಆಡಿಯೋ ಕೇಳಿದ ಎಂಎಲ್‌ಸಿ ಶಾಕ್ ಆಗಿದ್ದರು, ಕೂಡಲೇ ಅಲರ್ಟ್ ಆದರು. ಬಳಿಕ ತುಮಕೂರು ಎಸ್ಪಿ ಬಳಿ ದೂರು ದಾಖಲಿಸಿದ್ದಾರೆ.
ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಸುಪಾರಿ ನೀಡಿದ ವಿಚಾರದ ಬಗ್ಗೆ ಆಡಿಯೋನಲ್ಲಿ ಕೇಳಿಬಂದಿರುವ ಪುಷ್ಪಾ ಎಂಬ ಮಹಿಳೆ ಸ್ಪೋಟಕ ಮಾಹಿತಿ ಹಂಚಿಕೊಂಡಿರುವುದು ಬಯಲಾಗಿದೆ.